ಇಂಟರ್‌ನೆಟ್‌ ಬ್ಯಾಂಕಿಂಗ್ ಸೇವೆ ಶೀಘ್ರ: ಉಮಾಕಾಂತ ನಾಗಮಾರಪಳ್ಳಿ

7
ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಇಂಟರ್‌ನೆಟ್‌ ಬ್ಯಾಂಕಿಂಗ್ ಸೇವೆ ಶೀಘ್ರ: ಉಮಾಕಾಂತ ನಾಗಮಾರಪಳ್ಳಿ

Published:
Updated:
Deccan Herald

ಬೀದರ್: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಶೀಘ್ರ ಇಂಟರ್‌ನೆಟ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಹೊಸ ಸೇವೆಗಳನ್ನು ಆರಂಭಿಸಲಾಗುವುದು’ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು.

ನಗರದ ಗುಂಪಾ ಸಮೀಪ ಸೋಮವಾರ ಡಿಸಿಸಿ ಬ್ಯಾಂಕ್‌ನ ಶ್ರೀ ಸಿದ್ಧಾರೂಢ ಮಠ ಶಾಖೆಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಆರ್‌ಟಿಜಿಎಸ್‌, ಎನ್‍ಇಎಫ್‌ಟಿ ಸೇವೆಗಳನ್ನು ಆರಂಭಿಸಲಾಗಿದೆ. ಗ್ರಾಹಕರಿಗೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ಸರಿ ಸಮನಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಆದ್ಯತೆ ಕೊಡಲಾಗುತ್ತಿದೆ’ ಎಂದು ಹೇಳಿದರು.

‘ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರು 1985 ರಲ್ಲಿ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಬ್ಯಾಂಕ್‌ನ ದುಡಿಯುವ ಬಂಡವಾಳ ಕೇವಲ ₹ 18 ಕೋಟಿ ಇತ್ತು. ಈಗ ಅದು ₹ 2,698 ಕೋಟಿಗೆ ತಲುಪಿದೆ. ಠೇವಣಿ ₹ 6.82 ಕೋಟಿಯಿಂದ ₹ 1,494 ಕೋಟಿಗೆ, ಸಾಲ ವಿತರಣೆ ₹ 14 ಕೋಟಿಯಿಂದ ₹ 1,993 ಕೋಟಿಗೆ, ವಾರ್ಷಿಕ ವಹಿವಾಟು ₹21 ಕೋಟಿಯಿಂದ ₹ 3,453 ಕೋಟಿಗೆ ಏರಿಕೆಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬ್ಯಾಂಕ್‌ಗಳು ರೈತರಿಗೆ ವಿತರಿಸಿದ ಸಾಲದಲ್ಲಿ ಡಿಸಿಸಿ ಬ್ಯಾಂಕ್ ಪಾಲು ಶೇ 70 ರಷ್ಟು ಇದೆ. ಹಿಂದಿನ ಸರ್ಕಾರ ರೈತರ ತಲಾ ₹ 50 ಸಾವಿರ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯ 1,52,096 ರೈತರ ₹ 522 ಕೋಟಿ ಸಾಲ ಮನ್ನಾ ಆಗಿದೆ’ ಎಂದು ಹೇಳಿದರು.

‘ಬ್ಯಾಂಕ್ ವತಿಯಿಂದ ಜಿಲ್ಲೆಯಲ್ಲಿ 25,526 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ಪೈಕಿ 25,372 ಸಂಘಗಳಿಗೆ ಬ್ಯಾಂಕ್ ಸಂಪರ್ಕ ಕಲ್ಪಿಸಲಾಗಿದೆ. ಸದ್ಯ ಬ್ಯಾಂಕ್‌ನಲ್ಲಿ ಸಂಘಗಳ ₹ 112 ಕೋಟಿ ಠೇವಣಿ ಇದೆ’ ಎಂದು ತಿಳಿಸಿದರು.

ಶಾಖೆಯ ನೂತನ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಬ್ಯಾಂಕ್‌ಗಳ ಯಶಸ್ಸು ವಿಶ್ವಾಸದ ಮೇಲೆ ನಿಂತಿದೆ. ಗ್ರಾಹಕರ ವಿಶ್ವಾಸ ಗಳಿಸಿದ್ದರಿಂದಲೇ ಡಿಸಿಸಿ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ’ ಎಂದು ಹೇಳಿದರು.

ಬ್ಯಾಂಕ್ ನಿರ್ದೇಶಕರಾದ ಅಮರಕುಮಾರ ಖಂಡ್ರೆ, ವಿಜಯಕುಮಾರ ಲಿಂಗೋಜಿ, ರಾಚಪ್ಪ ಪಾಟೀಲ, ವಿಜಯಕುಮಾರ ಎಸ್.ಪಾಟೀಲ ಗಾದಗಿ, ಮಹಮ್ಮದ್ ಸಲಿಮೊದ್ದಿನ್, ಸಂಜಯಸಿಂಗ್ ಹಜಾರಿ, ಕಾಶೀನಾಥ ಬೀರಗಿ, ಪೆಂಟಾರೆಡ್ಡಿ ಎಸ್, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಶರಣಪ್ಪ ಶಿವಪ್ಪ, ಸಂಗಮೇಶ ಪಾಟೀಲ, ಎನ್‍ಎಸ್‍ಎಸ್‌ಕೆ ನಿರ್ದೇಶಕ ಶಶಿಕುಮಾರ ಪಾಟೀಲ ಸಂಗಮ, ಪರಮೇಶ್ವರ ಮುಗಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಎಂ. ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ರಾಜಕುಮಾರ ಆಣದೂರೆ, ಪಂಢರಿ ರೆಡ್ಡಿ, ಅನಿಲ ಪಾಟೀಲ, ಶಾಖಾ ವ್ಯವಸ್ಥಾಪಕ ಬಸವರಾಜ ಕಡಗದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !