ಪಾಪನಾಶ, ನರಸಿಂಹ ಝರಣಿಗೆ ಭಕ್ತರ ದಂಡು

7
ದೇಗುಲಗಳಲ್ಲಿ ದಿನವಿಡಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಪಾಪನಾಶ, ನರಸಿಂಹ ಝರಣಿಗೆ ಭಕ್ತರ ದಂಡು

Published:
Updated:
Deccan Herald

ಬೀದರ್: ಶ್ರಾವಣದ ಕೊನೆಯ ಸೋಮವಾರ ಇಲ್ಲಿಯ ಐತಿಹಾಸಿಕ ಪಾಪನಾಶ ಹಾಗೂ ನರಸಿಂಹ ಝರಣಿ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತು.

ಪಾಪನಾಶ ದೇಗುಲದಲ್ಲಿ ಸಹಸ್ರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ನಸುಕಿನ ಜಾವದಿಂದಲೇ ಭಕ್ತರು ದೇವಸ್ಥಾನದ ಕಡೆಗೆ ಮುಖ ಮಾಡಿದರು. ಹೆಚ್ಚಿನವರು ಬಸ್, ಕಾರು, ಜೀಪ್, ಬೈಕ್, ಆಟೊಗಳಲ್ಲಿ ದೇವಸ್ಥಾನಕ್ಕೆ ಬಂದರೆ, ಕೆಲವರು ಕಾಲ್ನಡಿಗೆ ಮೂಲಕ ಆಗಮಿಸಿ ಹರಕೆ ತೀರಿಸಿದರು.

ದೇಗುಲದ ಆವರಣದ ಪುಷ್ಕರಣೆಯಲ್ಲಿ ಮಹಿಳೆಯರು, ಮಕ್ಕಳು ಸ್ನಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಲಿಂಗಕ್ಕೆ ಬಿಲ್ವ ಪತ್ರಿ, ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ಕೃತಾರ್ಥರಾದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನದ ಪರಿಸರದಲ್ಲಿ ಭಕ್ತ ಸಮೂಹ ಕಂಡು ಬಂದಿತು. ಓಂನಮ ಶಿವಾಯ ಜಪ ನಿರಂತರ ಮೊಳಗಿತು.

ಅನೇಕರು ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಶಿರಾ, ಬಾಳೆಹಣ್ಣನ್ನು ಕೂಡ ವಿತರಿಸಿದರು. ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಿಕ್ಷುಕರು, ರೋಗಿಗಳಿಗೆ ಭಕ್ತರು ದಾನ ಮಾಡಿದರು.

ತಾತ್ಕಾಲಿಕ ಕಾಯಿ, ಕರ್ಪೂರ, ದೇವರ ಫೊಟೊಗಳು, ವಿಗ್ರಹ, ವಿಭೂತಿ, ಬೆಂಡು ಬತಾಸು, ತಿನಿಸುಗಳ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಆಟಿಕೆಗಳ ಅಂಗಡಿಗಳಲ್ಲಿ ವಿವಿಧ ಆಟಿಕೆಗಳನ್ನು ಖರೀದಿಸಲು ಚಿಣ್ಣರು ಮುಗಿ ಬಿದ್ದರು.

ರೈಲು, ಬಸ್, ಕಾರು, ಜೀಪು, ಬಲೂನ್, ಕನ್ನಡಕ, ತುತ್ತೂರಿ, ಬುಗರಿ ಮೊದಲಾದ ಆಟಿಕೆಗಳು ಮಕ್ಕಳ ಚಿತ್ತವನ್ನು ತಮ್ಮತ್ತ ಸೆಳೆದವು. ಮಕ್ಕಳು ತಮಗೆ ಇಷ್ಟವಾದ ಆಟಿಕೆ ಖರೀದಿಸಿ ಸಂಭ್ರಮಿಸಿದರು.

ನರಸಿಂಹ ಝರಣಿ: ನಗರದ ಇನ್ನೊಂದು ಐತಿಹಾಸಿಕ ದೇವಸ್ಥಾನದ ಆಗಿರುವ ನರಸಿಂಹ ಝರಣಿಯಲ್ಲೂ ಅಸಂಖ್ಯಾತರ ಭಕ್ತರು ದೇವರ ದರ್ಶನ ಪಡೆದರು.

ನಗರ, ಜಿಲ್ಲೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು.

ದೇವಸ್ಥಾನದ ಪುಷ್ಕರಣೆಯಲ್ಲಿ ಸ್ನಾನ ಮಾಡಿದ ನಂತರ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಅನ್ನ ಪ್ರಸಾದ ಸ್ವೀಕರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !