ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ ಮಂದಿರದಲ್ಲಿ ಶ್ರಾವಣದ ವಿಶೇಷ ಪೂಜೆ

ಜಿಲ್ಲೆಯಾದ್ಯಂತ ಮಹಾದೇವನನ್ನು ಜಪಿಸಿದ ಜನ
Last Updated 12 ಆಗಸ್ಟ್ 2019, 13:59 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಶಿವ ಮಂದಿರಗಳಲ್ಲಿ ಶ್ರಾವಣದ ಎರಡನೆಯ ಸೋಮವಾರ ಜನ ವಿಶೇಷ ಪೂಜೆ ಸಲ್ಲಿಸಿದರು.

ವಾಹನ, ಕಾಲ್ನಡಿಗೆಯಲ್ಲಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರಿಗೆ ಭಕ್ತಿ ಸಮರ್ಪಣೆ ಮಾಡಿದರು. ನಗರದ ಐತಿಹಾಸಿಕ ಪಾಪನಾಶ ದೇಗುಲಕ್ಕೆ ಭಕ್ತ ಸಮೂಹವೇ ಹರಿದು ಬಂದಿತು. ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು.

ಕಾಯಿ, ಕರ್ಪೂರ, ಹೂ, ಬಿಲ್ವಪತ್ರೆ, ಅರ್ಪಿಸಿ, ಜಲಾಭಿಷೇಕ, ಕ್ಷೀರಾಭಿಷೇಕ ಮಾಡಿ ಕೃತಾರ್ಥರಾದರು. ₹50 ರ ವಿಶೇಷ ದರ್ಶನ ಸಾಲಿನಲ್ಲೂ ನೂರಾರು ಭಕ್ತರ ಸಾಲು ಕಂಡು ಬಂದಿತು. ಹೆಚ್ಚಿನ ಭಕ್ತರು ಸಾಮಾನ್ಯ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಸರದಿ ಬಂದಾಗ ದೇವರ ದರ್ಶನ ಪಡೆದರು. ಇನ್ನು ಸಮಯದ ಅಭಾವ ಇದ್ದವರು ಹಿಂದುಗಡೆಯ ಕಿಟಕಿ ಬಳಿ ನಿಂತು ಅಲ್ಲಿಂದಲೇ ದೇವರಿಗೆ ನಮಸ್ಕರಿಸಿ, ತೆಂಗಿನ ಕಾಯಿ ಒಡೆದರು.

ದೇಗುಲದ ಪರಿಸರದಲ್ಲಿ ಕಾಯಿ, ಕರ್ಪೂರ, ಅಗರಬತ್ತಿ, ವಿಭೂತಿ, ರುದ್ರಾಕ್ಷಿ, ಹೂ, ಬಿಲ್ವಪತ್ರೆ, ಕುಂಕುಮ, ದೇವರ ಫೋಟೊ, ಬೆಂಡು, ಬತಾಸು, ಅಳ್ಳು, ರಂಗೋಲಿ ಪರಿಕರ, ಮಕ್ಕಳ ಆಟಿಕೆಗಳ ಅಂಗಡಿಗಳು ತೆರೆದುಕೊಂಡಿದ್ದವು.

ದೇವರ ದರ್ಶನಕ್ಕೆ ಸಾಲಿನಲ್ಲಿ ನಿಲ್ಲುವ ಮುನ್ನ ಅನೇಕರು ಪುಷ್ಕರಣೆಯಲ್ಲಿ ಕಾಲು ತೊಳೆದುಕೊಂಡರು. ಪುಷ್ಕರಣೆಯಲ್ಲಿ ನೀರು ಪಾಚಿಗಟ್ಟಿದ್ದರೂ ಸ್ವಚ್ಛತಾ ಕಾರ್ಯ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ದೇವರ ದರ್ಶನ ಪಡೆದ ನಂತರ ಅನೇಕರು ಮಂದಿರ ಪರಿಸರದಲ್ಲಿ ಮೊಬೈಲ್‌ನಲ್ಲಿ ಕುಟುಂಬದೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ದ್ವಿಚಕ್ರ ಹಾಗೂ ಕಾರುಗಳಿಗೆ ಮಂದಿರದ ಆವರಣ ಸಮೀಪದವರೆಗೂ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಸಂಚಾರ ಪೊಲೀಸರು ಮಾರ್ಗದಲ್ಲಿ ನಿಂತು ಸಂಚಾರ ನಿಯಂತ್ರಿಸಿದರು.

ನಗರದ ವಿವಿಧೆಡೆಯಿಂದ ಮಹಿಳೆಯರು, ಮಕ್ಕಳು, ಯುವಕರು ಕಾಲ್ನಡಿಗೆಯಲ್ಲಿ ಮಂದಿರಕ್ಕೆ ಬಂದು ಹರಕೆ ತೀರಿಸಿದರು. ಕೊಬ್ಬರಿ, ಸಕ್ಕರೆ ಪ್ರಸಾದ ವಿತರಿಸಿದರು. ಭಿಕ್ಷುಕರು, ಲೈಂಗಿಕ ಅಲ್ಪಸಂಖ್ಯಾತರಿಗೆ ದಾನ ಧರ್ಮ ಮಾಡಿ ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಿದರು.

‘ಶ್ರಾವಣದ ಮೊದಲ ಸೋಮವಾರಕ್ಕಿಂತಲೂ ಈ ಬಾರಿ ಭಕ್ತರ ಸಂಖ್ಯೆ ಅಧಿಕವಾಗಿದೆ. ಮಧ್ಯದ ಸೋಮವಾರ ಹಾಗೂ ಕಡೆಯ ಸೋಮವಾರ ಭಕ್ತರ ಸಂಖ್ಯೆ ಇನ್ನೂ ಹೆಚ್ಚು ಇರಲಿದೆ. ಜಿಲ್ಲೆ ಮಾತ್ರವಲ್ಲದೆ, ನೆರೆಯ ತೆಲಂಗಾಣ, ಆಂಧ್ರ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ದೇವರ ದರ್ಶನ ಪಡೆಯಲು ಪಾಪನಾಶಕ್ಕೆ ಬರುತ್ತಿದ್ದಾರೆ’ ಎಂದು ಮಂದಿರದ ಭಕ್ತ ಸೋಮನಾಥ ಪಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT