ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸೋಹ ದಿನ’ವಾಗಿ ಆಚರಿಸಲಿ

ಶಿವಕುಮಾರ ಸ್ವಾಮೀಜಿ ಜನ್ಮದಿನ: ಅಕ್ಕ ಅನ್ನಪೂರ್ಣ ಆಗ್ರಹ
Last Updated 1 ಏಪ್ರಿಲ್ 2019, 13:20 IST
ಅಕ್ಷರ ಗಾತ್ರ

ಬೀದರ್‌: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವನ್ನು ದಾಸೋಹ ದಿನವನ್ನಾಗಿ ಆಚರಿಸಬೇಕು’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹನ್ನೆರಡನೆಯ ಶತಮಾನದ ನಂತರ ದಾಸೋಹ ಸಾಮ್ರಾಜ್ಯ ನಿರ್ಮಾಣವಾದದ್ದೇ ಸಿದ್ಧಗಂಗಾ ಶ್ರೀ ಅವಧಿಯಲ್ಲಿ. ಅವರು ದಾಸೋಹಕ್ಕೆ ಇನ್ನೊಂದು ಹೆಸರಾಗಿದ್ದರು. ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವೆ, ಅಕ್ಷರ ದಾಸೋಹ ಮಾಡಿದ್ದರು. ದಾಸೋಹ ದಿನ ಆಚರಣೆಯ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ’ ಎಂದು ಹೇಳಿದರು.

‘ಶಿವಕುಮಾರ ಸ್ವಾಮೀಜಿ ದೇವರು ಸ್ವೀಕರಿಸಿದ ಸಂತರಾಗಿದ್ದರು. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ದೇಶದ ನಾಯಕರೆಲ್ಲ ಮಠಕ್ಕೆ ಭೇಟಿ ಕೊಡುತ್ತಿದ್ದರು’ ಎಂದು ಬಣ್ಣಿಸಿದರು.

‘ಸ್ವಾಮೀಜಿ ಅವರ 112ನೇ ಜನ್ಮದಿನದ ಅಂಗವಾಗಿ 112 ಮಕ್ಕಳಿಗೆ ಶಿವಕುಮಾರ ಎಂದು ಹೆಸರಿಟ್ಟಿರುವುದು ಸ್ತುತ್ಯಾರ್ಹವಾಗಿದೆ. ಈ ಮಕ್ಕಳೂ ಮುಂದೆ ಶಿವಕುಮಾರ ಸ್ವಾಮೀಜಿ ಅವರಂತಹ ಕಾರ್ಯ ಮಾಡಲಿ’ ಎಂದು ಶುಭ ಹಾರೈಸಿದರು.

‘ಶಿವಕುಮಾರ ಸ್ವಾಮೀಜಿ ಜಾತ್ಯತೀತರಾಗಿದ್ದರು. ಸಮಾಜದಲ್ಲಿ ಸಹೋದರತ್ವದ ಭಾವನೆಯನ್ನು ಬೆಳೆಸಿದ್ದರು. ಜಾತಿ, ಮತ, ಪಂಥವೆನ್ನದೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಟ್ಟಿದ್ದರು. ಅವರ ಶ್ರೇಷ್ಠ ಸೇವೆಯಿಂದಾಗಿಯೇ ದೇಶದ ಅನೇಕ ಮಹಾನ್ ನಾಯಕರು ಮಠಕ್ಕೆ ಭೇಟಿ ನೀಡಿ, ಅವರ ದರ್ಶನ ಪಡೆದುಕೊಂಡಿದ್ದರು’ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಹೇಳಿದರು.

‘ಎರಡು ವರ್ಷಗಳ ಹಿಂದೆ ಸಿದ್ಧಗಂಗಾ ಮಠದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವಕಾಶ ದೊರಕಿತ್ತು. ಮಠದಲ್ಲಿ ಏಕಕಾಲಕ್ಕೆ 9 ಸಾವಿರ ವಿದ್ಯಾರ್ಥಿಗಳಿಗೆ ನಿರಂತರ ಅನ್ನ ದಾಸೋಹ ಮಾಡುತ್ತಿರುವುದು ಬೆರಗುಗೊಳಿಸಿತು’ ಎಂದು ತಿಳಿಸಿದರು.

‘ನಾಡಿನಲ್ಲಿ ದಾಸೋಹ ಎಂದರೆ ನೆನಪಾಗುವುದೇ ಶಿವಕುಮಾರ ಸ್ವಾಮೀಜಿ. ಅವರು ಸನ್ಯಾಸಿಗಳಿಗೆ ಆದರ್ಶರಾಗಿದ್ದರು’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.

‘ಶಿವಕುಮಾರ ಸ್ವಾಮೀಜಿ ಅವರಿಗೆ ಅವರೇ ಸರಿಸಾಟಿ. ಸಮಾಜಕ್ಕಾಗಿಯೇ ಬದುಕು ಸವೆಸಿದ ಕಾರಣ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ’ ಎಂದು ಡಾ. ಗಂಗಾಂಬಿಕೆ ಅಕ್ಕ ತಿಳಿಸಿದರು.

‘ಹಳೆಯ ವಿದ್ಯಾರ್ಥಿಗಳ ಸಂಘದಿಂದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜನ್ಮದಿನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಶಿವಕುಮಾರ ಸ್ವಾಮೀಜಿ ಅವರ ಜೀವನ ಮತ್ತು ಸಾಧನೆಯ ಪರಿಚಯ ಮಾಡಿಕೊಡಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಇದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಹೇಳಿದರು.

ಕರ್ನಾಟಕ ಬಿ.ಎಡ್ ಕಾಲೇಜಿನ ಉಪನ್ಯಾಸಕ ಜಗನ್ನಾಥ ಕಮಲಾಪುರೆ ಅವರು ಶಿವಕುಮಾರ ಸ್ವಾಮೀಜಿ ಅವರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೆನರಾ ಬ್ಯಾಂಕ್ ಭಾಲ್ಕಿ ಶಾಖೆಯ ವ್ಯವಸ್ಥಾಪಕ ಶ್ರಾವಣಕುಮಾರ ರಾಯಗೊಂಡ, ಬಸವ ತತ್ವ ಪ್ರಚಾರಕ ಸಿದ್ರಾಮಪ್ಪ ಕಪಲಾಪುರ, ಶಿಕ್ಷಕ ಸಂಜುಕುಮಾರ ಜಮಾದಾರ, ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ, ಸಿದ್ಧಾರೆಡ್ಡಿ ನಾಗೋರಾ, ಸಂಜುಕುಮಾರ ಪಾಟೀಲ ಹುಣಜಿ, ರಾಹುಲ್ ಪೂಜಾರಿ, ಸಾಗರ, ಪ್ರವೀಣ ಬಿರಾದಾರ ಇದ್ದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು. ಹಾವಯ್ಯ ಸ್ವಾಮಿ ಸ್ವಾಗತಿಸಿದರು. ನಾಗಭೂಷಣ ಹುಗ್ಗೆ ವಂದಿಸಿದರು.

ಇದಕ್ಕೂ ಮುನ್ನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಪಾಪನಾಶ ದೇಗುಲದಿಂದ ಪ್ರಮುಖ ಮಾರ್ಗಗಳ ಮೂಲಕ ಶರಣ ಉದ್ಯಾನದವರೆಗೆ ಬೈಕ್ ರ್‌್ಯಾಲಿ ನಡೆಸಿದರು.

ಬೈಕ್‌ಗಳಿಗೆ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ ಕಟ್ಟಿಕೊಂಡಿದ್ದರು. ರ್‌್ಯಾಲಿಯ ಉದ್ದಕ್ಕೂ ಸಿದ್ಧಗಂಗಾ ಶ್ರೀಗಳಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT