ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
Last Updated 3 ಜುಲೈ 2022, 1:48 IST
ಅಕ್ಷರ ಗಾತ್ರ

ಬೀದರ್: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಎಸ್.ಸಿ, ಎಸ್.ಟಿ. ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಗಳು ಜುಲೈ 11 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿವೆ.

ಸಂಘಟನೆಗಳ ಪ್ರಮುಖರಾದ ಬಸವರಾಜ ಕೌತಾಳ, ವೈಜಿನಾಥ ಸೂರ್ಯವಂಶಿ ಹಾಗೂ ದತ್ತು ಸೂರ್ಯವಂಶಿ ಅವರು ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 15 ರಿಂದ ಶೇ 17 ಹಾಗೂ ಶೇ 3 ರಿಂದ ಶೇ 7ಕ್ಕೆ ಏರಿಕೆ ಮಾಡುವಂತೆ ಶಿಫಾರಸು ಮಾಡಿ, ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿ ಎರಡು ವರ್ಷಗಳಾಗಿವೆ. ಆದರೆ, ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರದಿ ಜಾರಿಗೊಳಿಸುವ ಇಚ್ಛಾಶಕ್ತಿ ತೋರಿಸಿಲ್ಲ ಎಂದು ಆರೋಪಿಸಿದರು.

ನಾಗಮೋಹನ್ ದಾಸ್ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಫೆಬ್ರುವರಿ 10 ರಿಂದ ಬೆಂಗಳೂರಿನ ಫೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ವಾಮೀಜಿಗಳು, ಜನಪ್ರತಿನಿಧಿಗಳು, ಸಂಘಟನೆಗಳು, ಪ್ರಜ್ಞಾವಂತರು ಅವರ ಹೋರಾಟವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.

ಅಹೋರಾತ್ರಿ ಧರಣಿ ಸ್ಥಳಕ್ಕೆ 108ನೇ ದಿನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅವರು 15 ದಿನಗಳ ಒಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ತಿಂಗಳು ಕಳೆದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಧರಣಿ 150 ದಿನ ಪೂರೈಸುವುದರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಮೀಸಲಾತಿ ಹೆಚ್ಚಳ ಹಾಗೂ 26 ಜ್ವಲಂತ ಸಮಸ್ಯೆಗಳ ಪರಿಹಾರದ ದಿಸೆಯಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಚುರುಕಿನಿಂದ ನಡೆದಿದೆ ಎಂದು ಹೇಳಿದರು.

ಮುಖಂಡರಾದ ರಾಜಕುಮಾರ ಮೂಲಭಾರತಿ, ಬಾಬುರಾವ್ ಪಾಸ್ವಾನ್, ಅಭಿ ಕಾಳೆ, ದಶರಥ ಜಮಾದಾರ್, ಅಶೋಕ್ ಮಾಳಗೆ, ಚಂದ್ರಕಾಂತ ನಿರಾಟೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಅರುಣ ಪಾಟೀಲ, ಸಂದೀಪ್ ಕಾಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT