ಮಂಗಳವಾರ, ಅಕ್ಟೋಬರ್ 27, 2020
18 °C
ಹಾಥರಸ್ ಅತ್ಯಾಚಾರ ಪ್ರಕರಣಕ್ಕೆ ತೀವ್ರ ಖಂಡನೆ

ಕಾಂಗ್ರೆಸ್‍ನಿಂದ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಉತ್ತರಪ್ರದೇಶದ ಹಾಥರಸ್‍ನಲ್ಲಿ ನಡೆದ ಯುವತಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಲ್ಲಿ ಶಾಮಿಯಾನ ಹಾಕಿ ಮೌನ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂಖಾನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಹಾಥರಸ್‍ನಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಶವವನ್ನು ಸುಟ್ಟು ಹಾಕಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.

ಮುಖಂಡ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರು ಸಂತ್ರಸ್ತ ಕುಟುಂಬಕ್ಕೆ ಭೇಟಿ ಮಾಡಲು ಹೋದಾಗ ಪೊಲೀಸರು ಅವರನ್ನು ತಡೆದು, ತಳ್ಳಾಟ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದು ಕೂಡ ಇದರ ಭಾಗವೇ ಆಗಿದೆ ಎಂದು ಟೀಕಿಸಿದರು.

ವಿರೋಧ ಪಕ್ಷಗಳನ್ನು ಹಣೆಯುವ ಬಿಜೆಪಿಯ ಪ್ರಯತ್ನ ಕೈಗೂಡುವುದಿಲ್ಲ. ನಾವು ಅದಕ್ಕೆ ಅಂಜುವುದಿಲ್ಲ ಎಂದು ಹೇಳಿದರು.

ಹಾಥರಸ್ ಅತ್ಯಾಚಾರ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಮುಖಂಡರಾದ ಶಿವರಾಜ ಹಾಸನಕರ್, ರಾಜಶೇಖರ ಪಾಟೀಲ ಅಷ್ಟೂರ, ಅಮೃತರಾವ್ ಚಿಮಕೋಡೆ, ರೋಹಿದಾಸ ಘೋಡೆ, ಮುರಳಿಧರ ಎಕಲಾರಕರ್, ಶಂಕರ ರೆಡ್ಡಿ ಚಿಟ್ಟಾ, ಇರ್ಷಾದ್ ಅಲಿ ಪೈಲ್ವಾನ್, ಸಂಜುಕುಮಾರ ಡಿ.ಕೆ., ಜಾರ್ಜ್ ಫರ್ನಾಂಡೀಸ್, ಪರ್ವೇಜ್ ಕಮಲ್, ಅಜಮತ್ ಪಟೇಲ್ ಮೊದಲಾದವರು ಇದ್ದರು.

ಹಾಥರಸ್ ಅತ್ಯಾಚಾರ ಪ್ರಕರಣದ ಯುವತಿಯ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು