ಬಸವಕಲ್ಯಾಣ: ‘ಏರುತಿದೆ, ಬಸವಧ್ವಜ ಹಾರುತಿದೆ' ಎಂದು ವಿ.ಸಿದ್ಧರಾಮಣ್ಣನವರು ಹಾಡಿದ ನಂತರವೇ ನಗರದ ನೂತನ ಅನುಭವ ಮಂಟಪದಲ್ಲಿ ಪ್ರತಿಯೊಂದು ಕಾರ್ಯಕ್ರಮ ಆರಂಭ ಆಗುತ್ತಿತ್ತು. ಅವರ ಆ ಸುಮಧುರ ಗಟ್ಟಿಧ್ವನಿಯಲ್ಲಿನ ಗೀತೆ ಸಮಾರಂಭ ಮುಗಿದ ನಂತರವೂ ಗುನಗುನಿಸುವಂತಾಗುತ್ತಿತ್ತು. ಸೋಮವಾರ ಅವರು ಶತಾಯುಷಿಗಳಾಗಿ ಲಿಂಗೈಕ್ಯ ಆಗಿದ್ದರಿಂದ ಆ ಧ್ವನಿ ಈಗ ಇಲ್ಲದಂತಾಗಿದೆ.
ಮೂಲತಃ ಅವರು ಸಂಗೀತಗಾರರು. ವಚನ ಸಂಗೀತ ಸುಶ್ರಾವ್ಯವಾಗಿ ಹಾಡುತ್ತಿದ್ದ ಕಾರಣವೇ ಪ್ರಥಮದಲ್ಲಿ ಲಿಂ.ಲಿಂಗಾನಂದ ಸ್ವಾಮೀಜಿಯವರ ಗಮನ ಸೆಳೆದಿದ್ದರು. ನಂತರದಲ್ಲಿ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರ ಮನಸ್ಸು ಗೆದ್ದರು. ಪಟ್ಟದ್ದೇವರು ಅವರಿಗೆ ನೀವು ಭಾಲ್ಕಿ ಮಠದಲ್ಲಿಯೇ ಇರಬೇಕು ಎಂದು ಕಟ್ಟಪ್ಪಣೆ ಮಾಡಿದ್ದರಿಂದ ಕೆಲವರ್ಷ ಅಲ್ಲಿದ್ದರು. ನಂತರದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಕೊನೆಗಾಲದವರೆಗೂ ವಾಸಿಸಿದ್ದರಿಂದ ಎಲ್ಲರೂ ಅವರನ್ನು ಅನುಭವ ಮಂಟಪದ ಸಂಚಾಲಕರು ಎಂದೇ ಕರೆಯುತ್ತಿದ್ದರು. ಇಲ್ಲಿ ಅವರು ಮಂಟಪದ ಕಸ ಗುಡಿಸುವುದರೊಂದಿಗೆ ಪ್ರವಚನ ಹೇಳುವತನಕವೂ ಎಲ್ಲ ಕಾರ್ಯವನ್ನೂ ನಿರ್ವಹಿಸುತ್ತಿದ್ದರು.
ಎರಡು ದಶಕಗಳವರೆಗೆ ಅನುಭವ ಮಂಟಪದಲ್ಲಿನ ಪ್ರತಿ ಕಾರ್ಯಕ್ರಮ ಅವರ ನೇತೃತ್ವದಲ್ಲಿಯೇ ನಡೆದವು. 2005 ರಲ್ಲಿ ಅವರಿಗೆ ಪ್ರತಿಷ್ಠಿನ ಲಿಂ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಸಹ ನೀಡಲಾಯಿತು. ಅಕ್ಕ ಗಂಗಾಬಿಕಾ ನೇತೃತ್ವದಲ್ಲಿ ಶರಣ ವಿಜಯ ಪ್ರಶಸ್ತಿ ನೀಡಿಯೂ ಸನ್ಮಾನಿಸಲಾಗಿತ್ತು. ಶರಣರ ಕುರಿತಾಗಿ ಅನೇಕ ನಾಟಕಗಳನ್ನು ಸಹ ಬರೆದಿದ್ದಾರೆ. ಸಂಗೀತಗಾರ, ಹೋರಾಟಗಾರ ಆಗಿದ್ದರು.
`ಬಸವತತ್ವಕ್ಕೆ ಜೀವನ ಮುಡಿಪಾಗಿಟ್ಟಿದ್ದ ಅವರು ರಚಿಸಿದ ಶರಣರ ನಾಟಕಗಳು ಜಿಲ್ಲೆಯಾದ್ಯಂತ ಪ್ರದರ್ಶನಗೊಂಡಿವೆ. ಶರಣರ ಕುರಿತಾಗಿ ಅವರು ಬರೆದ ಗೀತೆಗಳು ಅಮರತ್ವ ಪಡೆದಿವೆ. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ' ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
`ಬಸವತತ್ವಕ್ಕೆ ಧಕ್ಕೆಯಾದಾಗ ವಿ.ಸಿದ್ಧರಾಮಣ್ಣನವರು ನಿಷ್ಠುರವಾಗಿ ಖಂಡಿಸುತ್ತಿದ್ದರು. ಶರಣತತ್ವದ ಸಂರಕ್ಷಣೆ, ಬೆಳವಣಿಗೆಯಲ್ಲಿ ಅವರ ಪಾತ್ರ ಬಹಳಷ್ಟಿದೆ' ಎಂದು ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಕೊಳಕೂರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.