ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ದಾಳವಾದ ಸಾಮಾಜಿಕ ನ್ಯಾಯ

ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕಡ್ಯಾಳ ಆರೋಪ
Last Updated 21 ಅಕ್ಟೋಬರ್ 2020, 14:35 IST
ಅಕ್ಷರ ಗಾತ್ರ

ಬೀದರ್: ‘ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಹೊಸಕಿ ಹಾಕಿವೆ. ಇದರಿಂದ ಶೋಷಿತ ಸಮುದಾಯ ರಾಜಕೀಯ ಸೌಲಭ್ಯ ಹಾಗೂ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕಡ್ಯಾಳ ಆಗ್ರಹಿಸಿದರು.

‘ದಲಿತ ಸಮುದಾಯದವರು ಬೆಳಗಾವಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಆದರೆ, ಸರ್ಕಾರ ಇಂದಿಗೂ ಗಟ್ಟಿ ನಿರ್ಧಾರ ಕೈಗೊಳ್ಳಲು ಸಿದ್ಧವಿಲ್ಲ’ ಎಂದು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕೀಯ ಲಾಭಕ್ಕಾಗಿ ಅನೇಕ ಜಾತಿಗಳನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ನಿಜವಾದ ಪರಿಶಿಷ್ಟರಿಗೆ ಯಾವುದೇ ಸೌಲಭ್ಯಗಳು ದೊರಕದಂತೆ ಆಗಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಬಂದ ನಂತರ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಅಧಿಕಾರ ಸಿಕ್ಕು ಶೋಷಿತ ಸಮುದಾಯ ಮತ್ತೆ ಅನ್ಯಾಯಕ್ಕೆ ಒಳಾಗಿದೆ. ಹೀಗಾಗಿ ಸಮುದಾಯ ಮತ್ತೆ ಹೋರಾಟಕ್ಕೆ ಇಳಿದು ನ್ಯಾಯಯುತವಾದ ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ನವೆಂಬರ್ 2 ರಂದು ಜನವಾಡದಲ್ಲಿ ಹಲಗೆ ಚಳವಳಿ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು. ನಂತರ ಗ್ರಾಮ ಮಟ್ಟದಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ನ.12ರಂದು ಬೀದರ್‌ ನಗರದಲ್ಲಿ ತಮಟೆ ಚಳವಳಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ರಮೇಶ ಕಟ್ಟಿತೂಗಾಂವ, ಯಶವಂತ ಗೋರಚಿಂಚೋಳಿ, ಪ್ರಸಾದ ಮನ್ನಳ್ಳಿ, ಬಂಟೆ ದರ್ಬಾರೆ, ರಾಮಣ್ಣ ಉಜನಿ, ಸಂಜೀವಕುಮಾರ ಬೇಂದ್ರೆ, ಜೀವನ ರಿಕ್ಕಿ, ಕಮಲಾಕರ್ ಹೆಗ್ಡೆ, ಸಿ.ಎಂ.ದಾಸ, ವಿಲ್ಸನ್‌ ಕಮಲಾಪುರೆ, ಗುಂಡಪ್ಪ ಹೊನ್ನಿಕೇರಿ, ದೀಪಕ ರಿಕ್ಕೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT