ಸಂಸ್ಕಾರ ಕೊರತೆ: ಸ್ವಾಮೀಜಿ ಬೇಸರ

7
ಜನಸೇವಾ ಶಾಲೆಯಲ್ಲಿ ದೀಪಪೂಜನ ಕಾರ್ಯಕ್ರಮ

ಸಂಸ್ಕಾರ ಕೊರತೆ: ಸ್ವಾಮೀಜಿ ಬೇಸರ

Published:
Updated:
Deccan Herald

ಬೀದರ್: ‘ದೇಶದಲ್ಲಿ ಧನ, ಧಾನ್ಯಕ್ಕೆ ದಾರಿದ್ರ್ಯ ಇಲ್ಲ. ಬದಲಾಗಿ, ಸಂಸ್ಕಾರದ ಕೊರತೆ ಕಾಡುತ್ತಿದೆ’ ಎಂದು ತಡೋಳಾ-ಮೇಹಕರದ ರಾಜೇಶ್ವರ ಶಿವಾಚಾರ್ಯ ನುಡಿದರು.

ನಗರದ ಮಾಧವನಗರದ ಜನಸೇವಾ ಶಾಲೆಯಲ್ಲಿ ನಡೆದ ಮಾತೆಯರಿಂದ ದೀಪಪೂಜನ ಹಾಗೂ 14ನೇ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಈಗ ಮನೆಗಳು ವಸತಿ ನಿಲಯಗಳಾಗಿ ಮಾರ್ಪಟ್ಟಿವೆ. ಪ್ರೀತಿ, ಪ್ರೇಮ ಮಾಯವಾಗುತ್ತಿದೆ. ಸಂಸ್ಕಾರ ರಹಿತ ಬದುಕಿನ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಾಯಿ ಹಾಗೂ ಗುರು ದೇವರಿಗೆ ಸಮಾನರು. ಅವರ ಮುಂದೆ ಯಾವತ್ತೂ ಸುಳ್ಳು ಹೇಳಬಾರದು. ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ಹೆಚ್ಚಾಗಿ ಕಂಡು ಬರುತ್ತಿರುವ ಸಕ್ಕರೆ ಕಾಯಿಲೆ ಮತ್ತಿತರ ರೋಗಗಳನ್ನು ಔಷಧಗಿಂತ ನೆಮ್ಮದಿಯ ಬದುಕಿನಿಂದ ನಿಯಂತ್ರಿಸಬಹುದಾಗಿದೆ. ಸಂಗೀತ ಹಾಗೂ ಅಧ್ಯಾತ್ಮದಿಂದ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ‘ಮಕ್ಕಳಿಗೆ ಪಾಲಕರ ಪ್ರೀತಿ, ವಾತ್ಸಲ್ಯ ಹೆಚ್ಚಾದರೆ ದೇಶದಲ್ಲಿ ವೃದ್ಧಾಶ್ರಮ ಸಂಸ್ಕೃತಿ ತನ್ನಿಂದ ತಾನೆ ದೂರವಾಗುತ್ತದೆ’ ಎಂದು ನುಡಿದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘14 ವರ್ಷಗಳ ಹಿಂದೆ 30 ವಿದ್ಯಾರ್ಥಿಗಳಿಂದ ಆರಂಭವಾದ ಜನಸೇವಾ ಶಾಲೆಯಲ್ಲಿ ಈಗ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಗಳಿಸುತ್ತಿದ್ದಾರೆ. ಶಾಲೆಯಲ್ಲಿ ಓದಿದ ಅಪೂರ್ವ ರಾಜಶೇಖರ ವಿಮಾನ ತಯಾರಿಕೆ ತರಬೇತಿ ಪಡೆಯುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ಜನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್ ಯೋಜನೆಯ ನೋಡಲ್ ಅಧಿಕಾರಿ ಗೌತಮ ಅರಳಿ ಮಾತನಾಡಿದರು. ಯುಕ್ತಿ ಅರಳಿ ಹಾಗೂ ಆರ್‌ಟಿಇ ಕಾರ್ಯಕರ್ತ ಗುರುನಾಥ ವಡ್ಡೆ ಅವರಿಗೆ 14ನೇ ಜನಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾತೆಯರಿಂದ ದೀಪಪೂಜನ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪ್ರತಿಷ್ಠಾನದ ನಿರ್ದೇಶಕ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಶಿವಲಿಂಗಪ್ಪ ಜಲಾದೆ. ಆಡಳಿತಾಧಿಕಾರಿ ಸೌಭಾಗ್ಯವತಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ನಿರೂಪಿಸಿದರು. ಶಿಕ್ಷಕಿ ಅನಿತಾ ಹೆಗ್ಗೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !