ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಬದಲಾವಣೆಗಾಗಿ ಶರಣರ ಬಲಿದಾನ

ಮರಣವೇ ಮಹಾನವಮಿ ಮಹೋತ್ಸವ ಸಮಾರೋಪ: ಸಿಇಒ ಬೀಳಗಿ ಹೇಳಿಕೆ
Last Updated 20 ಅಕ್ಟೋಬರ್ 2018, 15:24 IST
ಅಕ್ಷರ ಗಾತ್ರ

ಬೀದರ್: ‘ಶರಣರು ಸಾಮಾಜಿಕ ಬದಲಾವಣೆಗಾಗಿ ಬಲಿದಾನ ಮಾಡಿದ್ದಾರೆ. ಅವರ ಸ್ಮರಣೆಗಾಗಿ ಸಮಾಜದಲ್ಲಿ ಸಣ್ಣ ಬದಲಾವಣೆಯನ್ನಾದರೂ ತರುತ್ತೇನೆ ಎನ್ನುವ ಕಳಕಳಿ ಎಲ್ಲರಲ್ಲಿ ಇರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ನುಡಿದರು.

ಲಿಂಗಾಯತ ಮಹಾಮಠದ ಆಶ್ರಯದಲ್ಲಿ ನಗರದ ಶರಣ ಉದ್ಯಾನದಲ್ಲಿ ನಡೆದ ಮರಣವೇ ಮಹಾನವಮಿ ಮಹೋತ್ಸವ ಸಮಾರೋಪ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶರಣರ ನೆಲ ಬೀದರ್ ಎಂದರೇನೆ ರೋಮಾಂಚನ. ಎನಗಿಂತ ಕಿರಿಯರಿಲ್ಲ ಎನ್ನುವ ಶರಣರ ತತ್ವದಂತೆ ವಿನಯಶೀಲರಾಗಿ ಸೇವೆ ಮಾಡಬೇಕು’ ಎಂದು ಸಲಹೆ ಮಾಡಿದರು.

‘ಹತ್ತು ಸಾವಿರ ವರ್ಷದ ಪ್ರಾಚೀನ ಭಾರತದ ಧಾರ್ಮಿಕ ಆಯಾಮಕ್ಕೆ ಮಹತ್ವದ ತಿರುವು ಕೊಟ್ಟವರು ಬಸವಣ್ಣ’ ಎಂದು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತು ಉಪನ್ಯಾಸ ನೀಡಿದ ರಾಮದುರ್ಗದ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

‘ಜಾತಿ, ವರ್ಗ, ವರ್ಣ, ಲಿಂಗ ಮತ್ತು ಕಾಯಕ ಭೇದಗಳೆಂಬ ಪಂಚ ಭೇದಗಳನ್ನು ನಿವಾರಿಸಿ, ಸಮತೆ, ಸ್ವಾತಂತ್ರ್ಯ ವಿಶ್ವಬಂಧುತ್ವ, ಮಾನವೀಯತೆ ಮತ್ತು ಕಾಯಕ-ದಾಸೋಹಗಳೆಂಬ ಪಂಚತತ್ವಗಳನ್ನು ನೀಡಿದ್ದು ಕಲ್ಯಾಣ ಕ್ರಾಂತಿಯ ಮಹತ್ವದ ಸಾಧನೆ’ ಎಂದು ಬಣ್ಣಿಸಿದರು.

‘ಕಲ್ಯಾಣ 36 ವರ್ಷ ಭಕ್ತಿಗೆ ಬೀಡಾಗಿತ್ತು. 27 ವರ್ಷ ಅನುಭವಕ್ಕೆ ಶಿವಸದನವಾಗಿತ್ತು’ ಎಂದು ಹೇಳಿದರು.
‘ಅಂದಿನ ಅನುಭವ ಮಂಟಪದ ಚಿಂತನೆಯ ಫಲವಾದ ಕಾಯಕ-ದಾಸೋಹ ತತ್ವಗಳು ಸ್ವಾವಲಂಬಿ ಬದುಕು ರೂಪಿಸಲು ಇಂದಿನ ಸಮಾಜಕ್ಕೂ ಅವಶ್ಯಕವಾಗಿವೆ’ ಎಂದು ಪ್ರತಿಪಾದಿಸಿದರು.

‘ಜಾತಿಯ ಭೂತ ಓಡಿಸಲು ಕಲ್ಯಾಣ ಕ್ರಾಂತಿಯಾಯಿತು. ಮಾನವೀಯತೆಯ ಉತ್ತುಂಗ ಸಾಧಿಸಲು ಹರಳಯ್ಯನ ಮಗ ಶೀಲವಂತ ಮತ್ತು ಮಂತ್ರಿ ಮಧುವರಸರ ಮಗಳು ಲಾವಣ್ಯರ ವಿವಾಹವನ್ನು ಅನುಭವ ಮಂಟಪದಲ್ಲಿ ನೆರವೇರಿಸಲಾಯಿತು. ಇದು ವರ್ಣ ವ್ಯವಸ್ಥೆಗೆ ವಿರುದ್ಧವಾದ ವಿಲೋಮ ವಿವಾಹವೆಂದು ಸಂಪ್ರದಾಯವಾದಿಗಳು ಬೊಬ್ಬೆಯಿಟ್ಟರು. ವಿಶ್ವಬಂಧುತ್ವ ಸಾರಲೋಸುಗ ಅವರು ಎಳೆಹೂಟೆ ಶಿಕ್ಷೆಯನ್ನು ಸ್ವಿಕರಿಸಿ ಪ್ರಾಣಾರ್ಪಣೆಗೈದರು’ ಎಂದು ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಹೇಳಿದರು.

‘ಶರಣರ ತ್ಯಾಗ, ಬಲಿದಾನವನ್ನು ಜಗತ್ತು ಎಂದೂ ಮರೆಯಬಾರದು. ತನ್ಮೂಲಕ ಶರಣರನ್ನು ಗೌರವಿಸಬೇಕು’ ಎಂದು ತಿಳಿಸಿದರು.
‘ಶರಣರು ಹಿಂಸಾ ಮಾರ್ಗ ಅನುಸರಿಸದೆ ಮನಃಪರಿವರ್ತನೆಯ ಮಾರ್ಗದಿಂದ ಕ್ರಾಂತಿ ಮಾಡಿದ್ದರು’ ಎಂದು ಅಧ್ಯಕ್ಷತೆ ವಹಿಸಿದ್ದ ಡಾ.ವಿಜಯಶ್ರೀ ಬಶೆಟ್ಟಿ ತಿಳಿಸಿದರು.

ಅನುಪಮಾ ಎರೋಳಕರ್, ಡಾ. ಸರೋಜಾ ಪಾಟೀಲ, ವಿದ್ಯಾವತಿ ಬಲ್ಲೂರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವನಿತಾ ಗುಂಡಪ್ಪ ಬಳತೆ ಧ್ವಜಾರೋಹಣ ಮಾಡಿದರು. ಕಲ್ಪನಾ ಬೀದೆ ಸ್ವರಚಿತ ಭಕ್ತಿಗೀತೆ ಹಾಡಿದರು. ಶೋಭಾ ಗಾಯತೊಂಡ ವಚನ ಪಠಣ ಮಾಡಿದರು. ರಮೇಶ ಮಠಪತಿ ಸ್ವಾಗತಿಸಿದರು. ಮಲ್ಲಮ್ಮ ರಾಚಪ್ಪ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT