ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಯೋಧನ ಪಾರ್ಥಿವ ಶರೀರದ ಮೆರವಣಿಗೆ

Last Updated 28 ಸೆಪ್ಟೆಂಬರ್ 2021, 3:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ಜಮ್ಮುಕಾಶ್ಮಿರದಲ್ಲಿ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ನಿಧನರಾದ ವೀರಯೋಧ ಪ್ರಮೋದ ಸೂರ್ಯವಂಶಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಜಾಜನಮುಗಳಿಯಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.

ಹವಾಮಾನ ವೈಪರೀತ್ಯದ ಕಾರಣ ಯೋಧನ ಪಾರ್ಥಿವ ಶರೀರ ಎರಡು ದಿನಗಳ ನಂತರ ಬಂದು ತಲುಪಿತು. ಭಾನುವಾರ ರಾತ್ರಿ ಬಸವಕಲ್ಯಾಣದ ಆಸ್ಪತ್ರೆಯಲ್ಲಿಡಲಾಗಿತ್ತು. ಸೋಮವಾರ ಬೆಳಿಗ್ಗೆ ನಗರದಲ್ಲಿ ಪುಷ್ಪಗಳಿಂದ ಅಲಂಕೃತವಾದ ತೆರೆದ ವಾಹನದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ನಂತರ ಜಾಜನಮುಗಳಿಗೆ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಪ್ರತಾಪುರ, ತಳಭೋಗ, ಮೋರಖಂಡಿ, ರಾಮತೀರ್ಥ ಹಾಗೂ ಘೋಟಾಳ ಗ್ರಾಮಗಳಲ್ಲಿ ಸಾವಿರಾರು ಜನರು ರಸ್ತೆ ಬದಿ ನಿಂತು ವಾಹನದ ಮೇಲೆ ಪುಷ್ಪಗಳನ್ನು ಹಾಕಿ, ಅಂತಿಮ ದರ್ಶನ ಪಡೆದರು. ದಾರಿಯುದ್ದಕ್ಕೂ ರಂಗೋಲಿ, ಸ್ವಾಗತ ಕಮಾನುಗಳನ್ನು ಕಟ್ಟಲಾಗಿತ್ತು. ಭಾರತ ಮಾತಾ ಕೀ ಜೈ, ವೀರ ಜವಾನ್ ಅಮರ‌ ರಹೇ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ಜಾಜನಮುಗಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಪಾರ್ಥಿವ ಶರೀರವನ್ನು ಕೆಲಕಾಲ ಅಂತಿಮ ದರ್ಶನಕ್ಕಿಟ್ಟು ನಂತರ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸರು ಎರಡು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸೇನೆಯ ಅಧಿಕಾರಿಗಳು ಪುಷ್ಪಗುಚ್ಛಗಳನ್ನು ಇಟ್ಟು ಗೌರವ ಸಲ್ಲಿಸಿದರು. ಶಾಸಕ ಶರಣು ಸಲಗರ, ವಿಧಾನಪರಿಷತ್ ಸದಸ್ಯ ವಿಜಯಸಿಂಗ್, ಮುಖಂಡರಾದ ಮಾಲಾ ಬಿ.ನಾರಾಯಣರಾವ್, ಬಾಬು ಹೊನ್ನಾನಾಯಕ, ಸಂಜಯ ಪಟವಾರಿ, ತಹಶೀಲ್ದಾರ್ ಸಾವಿತ್ರಿ ಸಲಗರ ಮೊದಲಾದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮೂರು ದಿನಗಳಿಂದ ಸಿದ್ಧತೆ: ನಿಧನದ ಸುದ್ದಿ ತಿಳಿದಾಗಿನಿಂದ 3 ದಿನಗಳ ಕಾಲ ಶಾಸಕ ಶರಣು ಸಲಗರ ಅವರು ಗ್ರಾಮದಲ್ಲಿ ಠಿಕಾಣಿ ಹೂಡಿ ಅಂತ್ಯಕ್ರಿಯೆಯ ಸಿದ್ಧತೆ ಕೈಗೊಂಡಿದ್ದರು. ವಿವಿಧ ಸ್ಥಳಗಳಲ್ಲಿ ಸ್ವಾಗತ ಕಮಾನು ಅಳವಡಿಸಲಾಗಿತ್ತು. ಗ್ರಾಮದಲ್ಲಿ ವೀರಯೋಧನ ಮನೆ ಸಮೀಪದಲ್ಲಿ ಹಾಗೂ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ವಾಟರ್ ಪ್ರೂಫ್ ಮಂಟಪಗಳನ್ನು ನಿರ್ಮಿಸಿ ಉತ್ತಮ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಅಂತ್ಯಕ್ರಿಯೆಯ ಸ್ಥಳದಲ್ಲಿಯೂ ಹಾಸುಗಲ್ಲುಗಳನ್ನು ಹಾಗೂ ತಗಡುಗಳನ್ನು ಹಾಕಲಾಗಿತ್ತು. ಶಾಸಕರು ಪಾರ್ಥಿವ ಶರೀರದ ಮುಂದೆ ನಡೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT