ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯಲ್ಲಿ ನೆಲ ಕಚ್ಚಿದ ಘನತ್ಯಾಜ್ಯ ವಿಲೇವಾರಿ

Last Updated 14 ಫೆಬ್ರುವರಿ 2021, 12:18 IST
ಅಕ್ಷರ ಗಾತ್ರ

ಬೀದರ್‌: ಘನತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ಸ್ವಚ್ಛ ಭಾರತ ಮಿಷನ್‌ ಯೋಜನೆ ಜಿಲ್ಲೆಯಲ್ಲಿ ನೆಲಕಚ್ಚಿದೆ. ಯೋಜನೆಯ ಅನುಷ್ಠಾನ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈಯಲ್ಲಿ ಕಸಬರಿಕೆ ಹಿಡಿದು ಪೋಟೊ ತೆಗೆಸಿಕೊಳ್ಳುವುದಕ್ಕೆ ಸೀಮಿತವಾಗಿದೆ.

ಬೀದರ್‌ ನಗರಸಭೆ ನಗರದ ಹೊರವಲಯದಲ್ಲಿ ಸುಲ್ತಾನಪುರ ಸಮೀಪ ಕಸದಗುಡ್ಡವನ್ನು ಸೃಷ್ಟಿಸಿದೆ. ಘನತ್ಯಾಜ್ಯಗಳ ಸುಟ್ಟ ಹೊಗೆ ಗ್ರಾಮದಲ್ಲಿ ಆವರಿಸಿ ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿದೆ. ಪ್ಲಾಸ್ಟಿಕ್‌ ಹಾಳೆಗಳು ಹೊಲಗದ್ದೆಗಳಲ್ಲಿ ಹಾರಾಡಿ ರೈತರ ಬದುಕಿಗೆ ಸಂಕಷ್ಟ ತಂದೊಡ್ಡಿವೆ. ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅವರು ಕಸದ ಗುಡ್ಡೆ ಹಾಕುವ ಬದಲು ಆಳವಾಗಿ ಅಗೆದು ಬಿಟ್ಟಿರುವ ಕ್ವಾರಿಗಳನ್ನು ಬಳಸಿಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಆದೇಶ ಪಾಲನೆಯೇ ಆಗಿಲ್ಲ.

ಹುಮನಾಬಾದ್, ಬಸವಕಲ್ಯಾಣ, ಕಮಲನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕಟ್ಟೆಗಳನ್ನು ಕಟ್ಟಿಬಿಟ್ಟಿದ್ದಾರೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಜಿಲ್ಲಾಡಳಿತ ಸರಿಯಾಗಿ ಮೇಲುಸ್ತುವಾರಿ ಮಾಡುತ್ತಿಲ್ಲ. ಕೇಳುವವರೇ ಇಲ್ಲವಾದ್ದರಿಂದ ನಗರಸಭೆ, ಪುರಸಭೆಗಳಲ್ಲಿನ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ.

ಬೀದರ್‌ ನಗರದಲ್ಲಿ ನಿತ್ಯ 62 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿನ 1.5 ಟನ್‌ನಿಂದ 2 ಟನ್‌ ಪ್ಲಾಸ್ಟಿಕ್‌ ಕಸವನ್ನು ಚಿಂದಿ ಆಯುವವರೇ ವಿಲೇವಾರಿ ಮಾಡುತ್ತಿದ್ದಾರೆ. ಚಿಂದಿ ಆಯುವವರು ನಗರಸಭೆ ಪೌರ ಕಾರ್ಮಿಕರ ಮೇಲಿನ ಒತ್ತಡ ಕಡಿಮೆ ಮಾಡಿದ್ದಾರೆ.

ಪ್ಲಾಸ್ಟಿಕ್ ತಟ್ಟೆ, ಲೋಟ, ಬಾಟಲಿ, ಮೊಬೈಲ್‌, ಟಿ.ವಿ, ಹಾಳಾದ ಕುರ್ಚಿ, ಬಕೆಟ್‌, ಮಗ್‌, ಒಡೆದ ಕೊಡ, ಗುಟ್ಕಾ ಚೀಟಿಗಳು ನಿತ್ಯ ರಾಶಿ ರಾಶಿ ಸಂಗ್ರಹವಾಗುತ್ತಿವೆ. ಜನರು ಸ್ವಚ್ಛತೆಗೆ ಸಹಕಾರ ನೀಡುತ್ತಿಲ್ಲ. ಜನರ ಸಹಕಾರ ಇಲ್ಲದಿದ್ದರೆ ನಾವು ಎಷ್ಟೇ ಕೆಲಸ ಮಾಡಿದರೂ ವ್ಯರ್ಥ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಅವರು ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ಅವರು ವರ್ಗಾವಣೆಯಾಗಿ ಹೋದ ಮರುದಿನವೇ ಮತ್ತೆ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್, ತಟ್ಟೆ, ಇನ್ನಿತರ ವಸ್ತುಗಳು ಬಂದು ಕುಳಿತಿವೆ. ಜಿಲ್ಲೆಯಲ್ಲಿ ಇದೀಗ ಕೇಳುವವರೇ ಇಲ್ಲವಾಗಿದ್ದಾರೆ ಎಂದು ನಗರ ನಿವಾಸಿ ಮಲ್ಲಿಕಾರ್ಜುನ ಚಿಟ್ಟಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಾಕಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸ್ಥಳ ಗುರುತಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ 2020ರ ನವೆಂಬರ್‌ನಲ್ಲೇ ಸೂಚನೆ ನೀಡಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ದಿಸೆಯಲ್ಲಿ ಈವರೆಗೂ ಕ್ರಮ ಕೈಗೊಂಡಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಮಾತ್ರ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆಗಳು ನಡೆಯುತ್ತಿವೆ. ಯೋಜನೆಗಳ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ.

ಬಸವಕಲ್ಯಾಣ: ವಾಹನದ ಮೂಲಕ ಕಸ ಸಂಗ್ರಹ

ಬಸವಕಲ್ಯಾಣ: ಇಲ್ಲಿ ವಾಹನಗಳನ್ನು ಮನೆ ಮನೆಗೆ ಕೊಂಡೊಯ್ಯುವ ಮೂಲಕ ಕಸ ಸಂಗ್ರಹಿಸುವ ವ್ಯವಸ್ಥೆ ಇದೆ.

ಇದಲ್ಲದೆ ಓಣಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಸದ ಬುಟ್ಟಿಗಳನ್ನು ನೇತು ಹಾಕಲಾಗಿದ್ದು ಎರಡು ದಿನಕ್ಕೊಮ್ಮೆ ನಗರಸಭೆ ಸಿಬ್ಬಂದಿ ಇವುಗಳಲ್ಲಿನ ಕಸವನ್ನು ವಾಹನದಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಾರೆ.

ಓಣಿಗಳಲ್ಲಿ ಪ್ರತಿದಿನ ಕಸಗೂಡಿಸುವ ಮಹಿಳೆಯರು ಸಂಗ್ರಹಿಸಿದ ಕಸ ಕೂಡ ವಾಹನಗಳಲ್ಲಿ ತುಂಬಿಕೊಂಡು ಬೇರೆಡೆ ಸಾಗಿಸಲಾಗುತ್ತಿದೆ. ಕಸ ವಿಲೇವಾರಿಗೆ ಈಚೆಗೆ ನಗರಸಭೆಯಿಂದ ಆಧುನಿಕ ಸೌಲಭ್ಯವಿರುವ ₹ 35 ಲಕ್ಷ ಬೆಲೆಯ ವಾಹನ ಖರೀದಿಸಿದ್ದು ಹೆಚ್ಚಿನ ಕಸ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಸಂಗ್ರಹಿಸಿದ ಕಸವನ್ನೆಲ್ಲ ಗೌರ್ ರಸ್ತೆಯ ಬದಿಯ ನಗರಸಭೆ ಜಾಗದಲ್ಲಿ ಎಸೆಯಲಾಗುತ್ತಿದೆ.

ಅಲ್ಲಿ ಕಸವನ್ನು ಘನತ್ಯಾಜ್ಯ ಹಾಗೂ ಇತರೆ ಪ್ರಕಾರಗಳಲ್ಲಿ ‌ಬೇರ್ಪಡಿಸಿ ಬೆಂಕಿ ಹಚ್ಚಿ ಸುಡಲಾಗುತ್ತದೆ. ಇದಕ್ಕಾಗಿ ನಗರಸಭೆ 3 ಎಕರೆ ಜಾಗಕ್ಕೆ ಆವರಣ ಗೋಡೆ‌ ನಿರ್ಮಿಸಿ ವ್ಯವಸ್ಥೆ ಮಾಡಿದೆ.

ಔರಾದ್: ಕಸ ವಿಲೇವಾರಿಯದ್ದೇ ಸಮಸ್ಯೆ

ಔರಾದ್ ಪಟ್ಟಣದಲ್ಲಿ ಸರಿಯಾಗಿ ಕಸ ವಿಲೇ ಆಗದೇ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಜನತಾ ಕಾಲೊನಿ ಸೇರಿದಂತೆ ಕೆಲ ಕಡೆ ಕಸದ ರಾಶಿ ಬಿದ್ದು ಗಬ್ಬು ನಾರುತ್ತಿದೆ. ಬೇರೆ ಬೇರೆ ಕಡೆಯಿಂದ ಜನ ಕಸ ತಂದು ಇಲ್ಲಿ ಹಾಕುತ್ತಿದ್ದಾರೆ. ಇದರಿಂದ ನಾಯಿ, ಹಂದಿಗಳ ಕಾಟ ಜಾಸ್ತಿಯಾಗಿದೆ ಎಂದು ಜನತಾ ಕಾಲೊನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಆದಷ್ಟು ಕಸ ವಿಲೇವಾರಿ ಮಾಡುತ್ತಿದ್ದೇವೆ. ಆದರೆ ಕಾರ್ಮಿಕರ ಕೊರತೆಯಿಂದ ಆಗಾಗ ಸಮಸ್ಯೆಯಾಗುತ್ತಿದೆ ಎಂದು ನೈರ್ಮಲ್ಯ ನಿರೀಕ್ಷಕ ಎಂ.ಡಿ. ಸಮಿ ತಿಳಿಸಿದ್ದಾರೆ.

ಕಮಲನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಚಿಕ್ಕದಾದ ಘಟಕ ನಿರ್ಮಿಸಲಾಗಿದೆ. ಆದರೆ, ಅದನ್ನು ಸರಿಯಾಗಿ ಬಳಸುತ್ತಿಲ್ಲ. ಹಸಿ ಹಾಗೂ ಒಣ ಕಸ ಬೇರ್ಪಡಿಸುವ ವ್ಯವಸ್ಥೆ ಮಾಡಿಲ್ಲ. ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆಯೂ ಇಲ್ಲ. ಇದರಿಂದ ಜನ ಖಾಲಿ ಜಾಗದಲ್ಲಿ ಕಸ ಸುರಿದು ಹೋಗುವುದು ಸಾಮಾನ್ಯವಾಗಿದೆ.

ಹೊಸ ತಾಲ್ಲೂಕು ಕೇಂದ್ರ ಕಮಲನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ಕೊಡಬೇಕಿದೆ. ಸ್ವಚ್ಛ ಸುಂದರ ಪಟ್ಟಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಮನವಿ ಮಾಡುತ್ತಾರೆ.

ಚಿಟಗುಪ್ಪ ಪಟ್ಟಣದಲ್ಲಿ ಪುರಸಭೆಯ ಆರು ಆಟೊ ಟಿಪ್ಪರ್‌ಗಳು ನಿತ್ಯ ಮನೆ ಮನೆಗೆ ತೆರಳಿ ಒಣ, ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹಿಸುತ್ತಿವೆ. ವಾಹನಗಳಿಗೆ ಧ್ವನಿ ವರ್ಧಕ ಅಳವಡಿಸಿ ನೈರ್ಮಲ್ಯ ಜಾಗೃತಿ ಮೂಡಿಸಲಾಗುತ್ತಿದೆ. ಕೆಲ ಕಡೆ ಕಸದ ತೊಟ್ಟಿಗಳನ್ನು ಇಟ್ಟರೂ ಸಕಾಲದಲ್ಲಿ ವಿಲೇವಾರಿ ಮಾಡುತ್ತಿಲ್ಲ. ಇಲ್ಲಿ ಹಂದಿಗಳ ಹಾವಳಿಯೇ ಹೆಚ್ಚಾಗಿದೆ.

ಭಾಲ್ಕಿ: ಪ್ರತಿನಿತ್ಯ 15 ಟನ್‌ ಸಂಗ್ರಹಣೆ

ಭಾಲ್ಕಿ: ಪಟ್ಟಣದದಲ್ಲಿ ನಿತ್ಯ 15 ಟನ್‌ ಕಸ ಸಂಗ್ರಹವಾಗುತ್ತದೆ. ಚಿಂದಿ ಆಯುವರು ಪ್ರತಿದಿನ 500 ಕೆ.ಜಿ. ಪ್ಲಾಸ್ಟಿಕ್‌, ಬಾಟಲಿ, ಮದ್ಯದ ಬಾಟಲಿ ಸೇರಿದಂತೆ ಇತರೆ ವಸ್ತುಗಳನ್ನು ಬೇರ್ಪಡಿಸಿ ಒಯ್ಯುವ ಮೂಲಕ ಪೌರ ಕಾರ್ಮಿಕರ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದಾರೆ.

ಪ್ರತಿದಿನ ಸಂಗ್ರಹವಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಟರ್‌ ಯಂತ್ರದ ಮೂಲಕ ಒಟ್ಟುಗೂಡಿಸಲಾಗುತ್ತಿದೆ. ಇದನ್ನು ಸಿಮೆಂಟ್‌ ಕಾರ್ಖಾನೆಯವರು ಉಚಿತವಾಗಿ ಕೊಂಡೊಯ್ಯುತ್ತಿದ್ದಾರೆ. ಪೌರ ಕಾರ್ಮಿಕರು ಮನೆಗಳ ಮುಂದೆ ಬಂದಾಗ ಸಾರ್ವಜನಿಕರು ಸಹ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಕೊಟ್ಟು ನಗರ ನೈರ್ಮಲ್ಯ ಕಾಪಾಡಲು ಸಹಕಾರ ನೀಡಬೇಕು. ಎಂದು ಪುರಸಭೆ ಜೆ.ಇ.ವೀರಶೆಟ್ಟಿ ಹೇಳುತ್ತಾರೆ.

ಸರ್ಕಾರ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಿದರೂ ಭಾಲ್ಕಿ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ಅವ್ಯಾಹತವಾಗಿ ಮುಂದುವರಿದಿದೆ. ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ನಗರ ನಿವಾಸಿಗಳು ಒತ್ತಾಯಿಸುತ್ತಾರೆ.

ಪೂರಕ ಮಾಹಿತಿ:
ಮಾಣಿಕ ಭುರೆ, ಮನ್ಮಥಪ್ಪ ಸ್ವಾಮಿ, ಮನೋಜಕುಮಾರ ಹಿರೇಮಠ, ವೀರೇಶ ಮಠಪತಿ, ಬಸವರಾಜ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT