ಮಂಗಳವಾರ, ನವೆಂಬರ್ 24, 2020
27 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಪ್ರಗತಿ ಪರಿಶೀಲನೆ

ಘನತ್ಯಾಜ್ಯ ಘಟಕ: ವಾರದ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಾಕಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸ್ಥಳ ಗುರುತಿಸಿ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ವಾರದ ಗಡುವು ವಿಧಿಸಿದ್ದಾರೆ.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಘಟಕಗಳ ಸ್ಥಾಪನೆ ಕಾರ್ಯ ತ್ವರಿತವಾಗಿ ನಡೆಯಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಹಾಸ್ಟೆಲ್ ಕೋಣೆಗಳ ದುರಸ್ತಿಗೆ ಒತ್ತು ಕೊಡಬೇಕು ಎಂದರು.

₹168 ಕೋಟಿ ಬೆಳೆ ಹಾನಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 3,70,982 ಹೆಕ್ಟೇರ್ ಬೆಳೆ ಪೈಕಿ 2,47,209 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ₹168 ಕೋಟಿ ನಷ್ಟ ಸಂಭವಿಸಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಸಭೆಗೆ ಮಾಹಿತಿ ನೀಡಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ 2,13,135 ರೈತರು ಬೆಳೆ ನೋಂದಣಿ ಮಾಡಿಸಿದ್ದಾರೆ ಎಂದರು.

2020-21ನೇ ಸಾಲಿನಲ್ಲಿ 34 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 14 ಪ್ರಕರಣಗಳಲ್ಲಿ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಈ ಕುಟುಂಬಗಳಿಗೆ ವಿಶೇಷ ಆರೋಗ್ಯ ಯೋಜನೆ ಸೌಕರ್ಯ ಹಾಗೂ ಪಿಂಚಣಿ ಒದಗಿಸಲಾಗುತ್ತಿದೆ. 11 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ 52 ಮನೆಗಳಿಗೆ ತೀವ್ರ ಹಾನಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ 1,674 ಹಾಗೂ ಪಟ್ಟಣ ಪ್ರದೇಶದಲ್ಲಿ 86 ಮನೆಗಳು ಭಾಗಶಃ ಹಾನಿಗೀಡಾಗಿವೆ. ಆರ್‌ಜಿಆರ್‍ಎಚ್‍ಸಿಎಲ್ ಪೋರ್ಟಲ್‌ ನಲ್ಲಿ ಮಾಹಿತಿ ಅಳವಡಿಸುವ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ 30 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದೆ ಎಂದು ಪಶು ಪಾಲನಾ ಇಲಾಖೆ ಅಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ನಾಗೇಶ ಡಿ.ಎಲ್., ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಇದ್ದರು.

ಕೋವಿಡ್ ಸೋಂಕು ತಡೆಗೆ ಪರೀಕ್ಷೆ ಗುರಿ

ಬೀದರ್: ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಡೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪ್ರತಿದಿನ 350 ರ್‍ಯಾಟ್ ಹಾಗೂ 2,000 ಆರ್‌ಟಿಪಿಸಿಆರ್ ಪರೀಕ್ಷೆ ಗುರಿ ನೀಡಿದ್ದಾರೆ.

ಕಾಲೇಜುಗಳು ಪ್ರಾರಂಭವಾದ ಕಾರಣ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದರು.

ನಿಗದಿತ ಗುರಿ ತಲುಪಲು ಪರೀಕ್ಷೆಗೆ ಕಿಟ್‍ಗಳ ಕೊರತೆ ಆಗಬಹುದು. ಅಗತ್ಯ ಪ್ರಮಾಣದಲ್ಲಿ ಕಿಟ್‍ಗಳ ಪೂರೈಕೆ ಆಗಬೇಕಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.