ಮಂಗಳವಾರ, ಡಿಸೆಂಬರ್ 10, 2019
26 °C
ಯೋಜನೆಗಳು ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವುದಕ್ಕಲ್ಲ

ಬಹುಗ್ರಾಮ ಯೋಜನೆ ತೊಡಕು ನಿವಾರಣೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್‌: ‘ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಿಲ್ಲ. ಬಹುಗ್ರಾಮ ಯೋಜನೆಯ ಗ್ರಾಮಗಳಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಎರಡು ತಿಂಗಳ ನಂತರವೂ ಪರಿಸ್ಥಿತಿ ಸುಧಾರಿಸದಿದ್ದರೆ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗುವುದು’ ಎಂದು ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಅರ್ಜಿಗಳ ಸಮಿತಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬೀದರ್‌ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ವೈಫಲ್ಯ ಕಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಎರಡು ತಿಂಗಳ ನಂತರ ಯೋಜನೆ ವ್ಯಾಪ್ತಿಯ 56 ಹಳ್ಳಿಗಳ ಪೈಕಿ ಕೆಲ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಗಲೂ ಹಳ್ಳಿಯ ಜನ ನೀರಿನ ಸಮಸ್ಯೆ ಹೇಳಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಇಲಾಖೆಯ ಸಹಾಯಕ ಎಂಜಿನಿಯರ್‌ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸದನ ಸಮಿತಿಯ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಇರುವಂತೆ ಸೂಚಿಸಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ವಿಶಾಲ ಅವರಿಗೆ ಸೂಚನೆ ನೀಡಿದರು.

ಔರಾದ್(ಎಸ್) ಮತ್ತು ಭೈರನಳ್ಳಿ, ಚಟ್ನಳ್ಳಿ, ಮಲ್ಕಾಪುರ, ಸುಲ್ತಾನಪುರ, ಕಮಠಾಣ ಮತ್ತು ಇತರೆ 17 ಜನವಸತಿಗಳನ್ನು ಒಳಗೊಂಡ ಬಹುಗ್ರಾಮ ನೀರು ಸರಬರಾಜು ಯೋಜನೆ ಸೇರಿ ಒಟ್ಟು ಐದು ಯೋಜನೆಗಳಡಿ 27 ಜನ ವಸತಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ವಿಶ್ವಬ್ಯಾಂಕ್ ನೆರವಿನ ಜಲನಿರ್ಮಲ ಯೋಜನೆಯಡಿ 2011ರಲ್ಲಿ ಆರಂಭಿಸಿದ ಯೋಜನೆ 2014ರಲ್ಲಿ ಪೂರ್ಣಗೊಂಡಿದೆ. ನಿರ್ವಹಣೆಯ ಕೊರತೆಯಿಂದ ಯೋಜನೆ ವಿಫಲವಾಗಿದೆ’ ಎಂದು ಸಹಾಯಕ ಎಂಜಿನಿಯರ್ ಶಿವಾನಂದ ಸಭೆಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಗಳಿಂದ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎನ್ನುವುದು ಗೊತ್ತಾದ ಬಳಿಕ ನಿರ್ವಹಣೆಯ ಹೊಣೆಯನ್ನು ಇಲಾಖೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಹುಗ್ರಾಮ ಯೋಜನೆಯಲ್ಲಿ 56 ಹಳ್ಳಿಗಳಲ್ಲಿ 82 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. 57 ಓವರ್‌ ಹೆಡ್‌ ಟ್ಯಾಂಕರ್‌ಗಳು ಬಳಕೆಯಲ್ಲಿವೆ. ಪ್ರತಿಯೊಂದು ಮನೆಗೆ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗದಿದ್ದರೆ ಯೋಜನೆಯ ಉಪಯೋಗವೇನು, ಕಳಪೆ ಪೈಪ್‌ ಅಳವಡಿಸಿದರೆ ನೀರು ಸರಬರಾಜು ಹೇಗೆ ಸಾಧ್ಯವಾಗುತ್ತದೆ ಎಂದು ಸಮಿತಿಯ ಸದಸ್ಯರು ಅಧಿಕಾರಿಗಳಿಂದ ವಿವರಣೆ ಕೇಳಿದರು.

ಕಮಠಾಣ ಮತ್ತು ಇತರೆ ಕೆಲ ಜನವಸತಿಗಳಿಗೆ ಓಎಚ್‌ಟಿ ಮೂಲಕ ನೀರು ಬಿಡುತ್ತಿದ್ದೇವೆ. ಜಲಮೂಲದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಸಮರ್ಪಕವಾಗಿ ನೀರು ಪೂರೈಸಲು ಆಗುತ್ತಿಲ್ಲ. ಕಾರಣ ಕೊಳವೆ ಬಾವಿಗಳ ಮೂಲಕ ಈಗ ನೀರು ಕೊಡುತ್ತಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

‘ಬೀದರ್, ಭಾಲ್ಕಿ, ಹುಮನಾಬಾದ್ ಪಟ್ಟಣಕ್ಕೆ ಕಾರಂಜಾ ನೀರನ್ನೇ ಬಳಸಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ತಿಳಿಸಿದರು.

‘ಪೈಪ್‌ಲೈನ್, ಜಲ ಶುದ್ಧೀಕರಣ ಘಟಕದ ಸ್ಥಾವರದ ನಿರ್ವಹಣೆಗೆ ಸರ್ಕಾರ ಪ್ರತಿ ವರ್ಷ ₹ 22 ಲಕ್ಷ ನೀಡುತ್ತಿದ್ದು, ಈ ಹಣ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಸಮಿತಿಯ ಅಧ್ಯಕ್ಷರು ಇಲಾಖೆಯ ಆಯುಕ್ತರಿಗೆ ಸೂಚಿಸಿದರು.
ಪೈಪ್‌ಲೈನ್ ದುರಸ್ತಿ ಸೇರಿದಂತೆ ಈ ಯೋಜನೆಯ ಕಾರ್ಯನಿರ್ವಹಣೆ ಹೊಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸದೇ ಇಲಾಖೆಗೆ ವಹಿಸಬೇಕು ಎಂದು ಆಯುಕ್ತರು ತಿಳಿಸಿದರು.

‘ಯೋಜನೆ ವ್ಯಾಪ್ತಿಯ ಹಳ್ಳಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪಟ್ಟಿ ಮಾಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಅವರಿಗೆ ಸೂಚಿಸಿದರು.

ಸಮಿತಿಯ ಸದಸ್ಯರಾದ ಬಿ.ಎ.ಬಸವರಾಜ, ಸೌಮ್ಯ ರೆಡ್ಡಿ, ಮಹೇಶ ಕಮಠಳ್ಳಿ, ಸುರೇಶ ಗೌಡ, ಎಂ.ಪಿ.ಅಪ್ಪಚ್ಚು, ಲಾಲಾಜಿ ಮೆಂಡನ್ ಹಾಗೂ ಸಮಿತಿಯ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು