ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಬೀನ್ ಬಿತ್ತನೆ ಬೀಜ ಕೊರತೆ

ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲು ಒತ್ತಾಯ
Last Updated 14 ಜೂನ್ 2021, 5:18 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಬೀಳುತ್ತಿದೆ. ಇದರಿಂದ ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಸದ್ಯ ಸೋಯಾಬೀನ್ ಬೀಜದ ಕೊರತೆ ಆತಂಕ ಪಡುವಂತೆ ಮಾಡಿದೆ.

ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಮಳೆ ಇಲ್ಲದೆ ಕೆಲ ರೈತರು ಬೆಳೆದ ಸೋಯಾಬೀನ್ ಬೆಳೆ ಮೊಳಕೆಯೊಡೆದು ಹಾಳಾಗಿದೆ. ಇನ್ನು ಕೆಲವರದ್ದು ಮಳೆಯಿಂದ ಹಾಳಾಗಿದೆ. ಹೀಗಾಗಿ ಬಹುತೇಕ ರೈತರ ಹತ್ತಿರ ಬಿತ್ತನೆ ಬೀಜ ಇಲ್ಲ. ಸದ್ಯ ಸೋಯಾಬೀನ್‌ಗೆ ಉತ್ತಮ ಬೆಲೆ ಇದೆ. ಆದ್ದರಿಂದ ರೈತರು ಸೋಯಾಬೀನ್ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ, ಬೀಜದ ಕೊರತೆ ಅವರ ಆಸೆಗೆ ಅಡ್ಡಿಯಾಗಿದೆ.

‘ಪ್ರತಿದಿನ ಬೆಳಿಗ್ಗೆ ರೈತರು ಸೋಯಾ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬರುತ್ತಿದ್ದಾರೆ. ಆದರೆ ಅಲ್ಲಿ ಬೀಜ ಸಿಗುತ್ತಿಲ್ಲ ಎಂದು ಗೊತ್ತಾಗುತ್ತಲೇ ಬೇಸರಪಡುತ್ತಿದ್ದಾರೆ. ಅಲ್ಲದೇ ಕೆಲವು ಕಡೆ ಕೃಷಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಯೂ ಆಗುತ್ತಿವೆ’ ಎಂದು ರೈತ ಅನಿಲ ಜಾಧವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೃಷಿಯನ್ನೇ ನಂಬಿ ಅನೇಕ ರೈತ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗದಿದ್ದರೆ ರೈತರಿಗೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಸರ್ಕಾರ ರೈತರಿಗೆ ಬೇಕಾಗುವಷ್ಟು ಬೀಜ ಹಾಗೂ ರಸಗೊಬ್ಬರ ಪೂರೈಸಬೇಕು’ ಎಂದು ರೈತ ಸಂಜುಕುಮಾರ ಪಾಟೀಲ ಒತ್ತಾಯಿಸುತ್ತಾರೆ.

‘ಸೋಯಾಬೀನ್ ಪ್ರತಿ ಕ್ವಿಂಟಲ್‌ಗೆ ₹ 7.5 ಸಾವಿರದಂತೆ ಮಾರಾಟವಾಗುತ್ತಿದೆ. ಹೀಗಾಗಿ ಬಹುತೇಕ ರೈತರು ಸೋಯಾಬೀನ್ ಬೆಳೆ ಬೆಳೆಯಲು ಉತ್ಸುಕರಾಗಿದ್ದಾರೆ. ಇದರಿಂದ ಬೀಜಕ್ಕಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ದುಬಾರಿ ಹಣ ಕೊಟ್ಟು ಖರೀದಿಸುತ್ತಾರೆ. ಅಲ್ಲದೇ ಕೆಲವರು ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ತೆರಳಿ ದುಪ್ಪಟ್ಟು ಹಣ ಕೊಟ್ಟು ಖರೀದಿಸುತ್ತಿದ್ದಾರೆ’ ಎಂದು ರೈತ ಸಂಗಮೇಶ್ವರ ಜ್ಯಾಂತೆ ಹೇಳುತ್ತಾರೆ.

‘ಸೋಯಾ ಬೀಜದ ಕೊರತೆ ಇರುವುದರಿಂದ ಪರ್ಯಾಯ ಬೆಳೆ ಬೆಳೆಸುವಂತೆ ರೈತರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸೋಯಾ ಬಿಟ್ಟು ಇತರೆ ಯಾವುದೇ ಬೀಜದ ಕೊರತೆ ಇಲ್ಲ’ ಎಂದು ಕೃಷಿ ಅಧಿಕಾರಿ ಬಸವಪ್ರಭು ತಿಳಿಸುತ್ತಾರೆ.

‘ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಬೇಕು’ಎಂದು ರೈತ ಧನರಾಜ ಮುತ್ತಂಗೆ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT