ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು-ಮೌನ: ಭಾಲ್ಕಿ ಹಿರೇಮಠ ಶ್ರೀ ಲೇಖನ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು
Last Updated 4 ಜುಲೈ 2022, 14:05 IST
ಅಕ್ಷರ ಗಾತ್ರ

ಬೀದರ್‌: ನಾವು ಆಡುವ ಮಾತು ಇನ್ನೊಬ್ಬರ ಹೃದಯಕ್ಕೆ ಆನಂದ ತರುವಂತಿರಬೇಕು. ಅಂತರಂಗದ ಕಲ್ಮಶ ಹೋಗಬೇಕು. ಒಂದು ಒಳ್ಳೆಯ ಮಾತು ಬದುಕನ್ನು ಬದಲಾಯಿಸುತ್ತದೆ. ‘ಮಾತೆಂಬುದು ಜ್ಯೋತಿರ್ಲಿಂಗ’ ಅಲ್ಲಮಪ್ರಭುಗಳು ಹೇಳಿದರೆ, `ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನ್ನಬೇಕು’ ಎಂದು ಬಸವಣ್ಣನವರು ಹೇಳುತ್ತಾರೆ. ಇಂಥ ಮಾತುಗಳಿದ್ದರೆ ಮೌನಕ್ಕಿಂತ ಮಾತೆ ಶ್ರೇಷ್ಠವಾಗುತ್ತದೆ. ಮಾತುಗಳಿಂದ ಯಾವ ಸಾಧನೆಯಾಗದಿದ್ದರೆ ಮಾತಿಗಿಂತ ಮೌನವೇ ಶ್ರೇಷ್ಠವಾಗುತ್ತದೆ.

ಮೌನ ಅಂತರಂಗದ ಆತ್ಮಬಲ ಹೆಚ್ಚು ಮಾಡುತ್ತದೆ. ಮೌನ ಇರುವುದರಿಂದ ಮಾತು ಶಕ್ತಿಯುತವಾಗುತ್ತದೆ. ಮೌನವು ಅಂತರಂಗದ ಅಗತ್ಯ. ಮೌನಕ್ಕೆ ಮಾತು ಹೆರುವ ತವಕ, ಮಾತಿಗೆ ಮೌನದ ಗರ್ಭದಿಂದ ಹೊರಬರುವ ಹಂಬಲ. ನಮ್ಮ ಮಾತು ಅರ್ಥವತ್ತಾಗಿದ್ದರೆ ತನ್ನ ಶಕ್ತಿಯನ್ನು ಉಳಿಸಿಕೊಂಡಿದ್ದರೆ ಮೌನದ ಅಗತ್ಯವೆ ಇರಲಿಲ್ಲವೆನಿಸುತ್ತದೆ. ಅದಕ್ಕೆ ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೆ ಕಾಣಬಹುದು.

ಗಾಂಧೀಜಿಯವರು ಆಗಾಗ್ಗೆ ಮೌನವಾಗಿದ್ದು ಅಂತರಂಗದ ವಿಕಾಸ ಮಾಡಿಕೊಳ್ಳುತ್ತಿದ್ದರು. ಮಾತು ಕೃತಿ ಒಂದಾಗಿರಬೇಕು. `ನಡೆಯೊಳಗೆ ನುಡಿ ತುಂಬಿ ನುಡಿಯೊಳಗೆ ನಡೆ ತುಂಬಿ ನಡೆ-ನುಡಿ ಎರಡು ಪರಿಣಾಮದಲ್ಲಿ ತುಂಬಿ, ಲಿಂಗ ಕೂಡಬಲ್ಲಾತನೆ ಶರಣ”. ನಮ್ಮಿಂದ ಒಳ್ಳೆಯ ಮಾತನ್ನು ಸಾಧ್ಯವಾಗಬೇಕಾದರೆ ಒಳ್ಳೆಯ ಮೌನ ಸಾಧನೆಯಾಗಬೇಕು. ಅಂದೆ ಹುಟ್ಟಿ ಅಂದೆ ಸಾಯುವ ಮಾತುಗಳು ಬೆಳೆಯುವುದು ಇಲ್ಲ. ಅದರಿಂದ ಯಾವ ಫಲವು ಲಭಿಸುವುದಿಲ್ಲ. ಅರಿತು ಆಡಿದ ಶರಣರ, ಸಂತರ, ಮಹಾತ್ಮರ ಮಾತುಗಳು ನಿರಂತರ ನಿತ್ಯನೂತನವಾಗಿವೆ. ನಿತ್ಯ ಸತ್ಯವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT