ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚುವ ಸ್ಥಿತಿಗೆ ಬಂದ ಕ್ರೀಡಾ ಹಾಸ್ಟೆಲ್‌

ನಿರ್ಮಾಣ ಹಂತದಲ್ಲೇ ₹ 40 ಲಕ್ಷ ವೆಚ್ಚದ ಕಟ್ಟಡ ಹಾಳು: ವಿದ್ಯಾರ್ಥಿಗಳ ಸಂಖ್ಯೆ 12ಕ್ಕೆ ಕುಸಿತ
Last Updated 24 ಸೆಪ್ಟೆಂಬರ್ 2022, 5:52 IST
ಅಕ್ಷರ ಗಾತ್ರ

ಬೀದರ್: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಜಿಲ್ಲೆಯ ಏಕೈಕ ಕ್ರೀಡಾ ವಸತಿ ಶಾಲೆ ಸೌಲಭ್ಯಗಳ ಕೊರತೆಯಿಂದ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ. ವಸತಿ ಹಾಗೂ ಊಟದ ವ್ಯವಸ್ಥೆಯೂ ಇಲ್ಲದ ಕಾರಣ ಹಾಸ್ಟೆಲ್‌ ವಿದ್ಯಾರ್ಥಿಗಳ ಸಂಖ್ಯೆ 12ಕ್ಕೆ ಕುಸಿದಿದೆ.

ಸುಸಜ್ಜಿತ ಕಟ್ಟಡ ಇಲ್ಲದಿರುವುದರಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಉಳಿದುಕೊಂಡಿದ್ದಾರೆ.

ಅಂಕಣದ ಒಂದು ಮೂಲೆಯಲ್ಲಿ ಬಚ್ಚಲು ನಿರ್ಮಿಸಿ ಒಳಾಂಗಣ ಹಾಳು ಮಾಡಲಾಗಿದೆ. ಕಟ್ಟಡದಲ್ಲಿ ಸ್ನಾನಗೃಹ ಇಲ್ಲ. ಹೀಗಾಗಿ ಮಕ್ಕಳು ಸಾರ್ವಜನಿಕ ಶೌಚಾಲಯವನ್ನು ಸ್ನಾನಕ್ಕಾಗಿ ಬಳಸುತ್ತಿದ್ದಾರೆ.

ಕಟ್ಟಡದೊಳಗೆ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ.

ಜನರೇಟರ್‌ ಸಹ ಇಲ್ಲ. ವಿದ್ಯುತ್‌ ಕೈಕೊಟ್ಟರೆ ಕಟ್ಟಡದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತಿದೆ. ವಿದ್ಯಾರ್ಥಿಗಳಿಗೆ ಎರಡು ಜತೆ ಶೂ ಹಾಗೂ ಸಾಕ್ಸ್ ಕೊಡಬೇಕು. ಒಂದೇ ಜತೆ ಕೊಡಲಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ.

ಹಾಸ್ಟೆಲ್‌ನಲ್ಲಿ ಊಟ ಕೊಡದ ಕಾರಣ ವಿದ್ಯಾರ್ಥಿಗಳು ಖಾನಾವಳಿಗೆ ಹೋಗುತ್ತಿದ್ದಾರೆ.

ಉಪಾಹಾರದ ವ್ಯವಸ್ಥೆಯೂ ಸರಿಯಾಗಿಲ್ಲ. ಮಕ್ಕಳಿಗೆ ಹಾಸಿಗೆ ಹೊದಿಕೆ, ತಲೆದಿಂಬು, ಸೊಳ್ಳೆ ಪರದೆ ಕೊಟ್ಟಿಲ್ಲ. ವಿದ್ಯಾರ್ಥಿಗಳಿಗೆ ನಿತ್ಯ ಮೊಟ್ಟೆ ಹಾಗೂ ಹಾಲು ಕೊಡಬೇಕು ಎನ್ನುವ ನಿಯಮ ಇದೆ. ಯಾವುದನ್ನೂ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ವಿಧಾನ ಪರಿಷತ್ತಿನ ಸದಸ್ಯ ರಾದ ಅರವಿಂದಕುಮಾರ ಅರಳಿ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ರೀಡಾ ಹಾಸ್ಟೆಲ್‌ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಊಟಕ್ಕೆ ಖಾನಾವಳಿಗೆ ಹೋಗುತ್ತಿದ್ದೇವೆ. ಉಪಾಹಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ದೂರಿದ್ದಾರೆ.

‘ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ’ ಎಂದು ತಿಳಿಸಿದ್ದಾರೆ.

‘ಹೀಗಾಗಿ ವಿದ್ಯಾರ್ಥಿಗಳಿಗೆ ಉದ್ರಿ ಊಟ ಕೊಡಿಸುತ್ತಿದ್ದೇವೆ. ಅನುದಾನ ಬಿಡುಗಡೆಯಾದ ನಂತರ ಖಾನಾವಳಿ ಮಾಲೀಕನಿಗೆ ಹಣ ಪಾವತಿಸುತ್ತೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತ ಅಷ್ಟಗಿ ಹೇಳುತ್ತಾರೆ.

‘ನಿಯಮದಂತೆ ಆಯ್ಕೆ ನಡೆಯಲಿ’

ಕ್ರೀಡಾ ಹಾಸ್ಟೆಲ್‌ಗಳಿಗೆ ತಾಲ್ಲೂಕು ಮಟ್ಟದಲ್ಲಿ ಆಯ್ಕೆ ನಡೆಯಬೇಕು. ಎರಡು ವರ್ಷಗಳಿಂದ ಹಾಸ್ಟೆಲ್‌ಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಒಂದು ವರ್ಷದಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ ಗರಿಷ್ಠ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶ ಇದೆ. ಆದರೆ, ರಾಜ್ಯ ಸರ್ಕಾರ ಕ್ರೀಡಾ ಹಾಸ್ಟೆಲ್‌ಗೆ ಅನುದಾನವನ್ನೇ ಕೊಡುತ್ತಿಲ್ಲ. ಹೀಗಾಗಿ ಈ ವರ್ಷ ಆಯ್ಕೆ ಪ್ರಕ್ರಿಯೆಯೇ ಆರಂಭವಾಗಿಲ್ಲ.

ಹಾಸ್ಟೆಲ್‌ನಲ್ಲಿ ನುರಿತ ತರಬೇತುದಾರರು ಇಲ್ಲ. ಕೆಎಸ್‌ಎ ಪ್ರಮಾಣಪತ್ರ ಪಡೆದ ಅಥವಾ ಎನ್‌ಐಎಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ತರಬೇತುದಾರರನ್ನಾಗಿ ನೇಮಕ ಮಾಡಬೇಕು. ಆದರೆ, ತರಬೇತುದಾರರ ನೇಮಕಾತಿಯೂ ಸಮರ್ಪಕವಾಗಿ ನಡೆಸಿಲ್ಲ. ಒಬ್ಬ ಅಧಿಕಾರಿ ಮಾತ್ರ ಕಾಯಂ ಇದ್ದಾರೆ. ಉಳಿದ ಎಲ್ಲ 18 ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆಯೇ ನೇಮಕಗೊಂಡಿದ್ದಾರೆ. ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ಪಾವತಿಸಿಲ್ಲ. ಹೀಗಾಗಿ ಅವರೂ ಉತ್ಸಾಹ ಕಳೆದುಕೊಂಡಿದ್ದಾರೆ.

ಹಾಳಾದ ಕಟ್ಟಡ

2006ರಲ್ಲಿ ಅಂದಿನ ಜಿಲ್ಲಾಧಿಕಾರಿ ಮುನಿಷ್‌ ಮೌದ್ಗಿಲ್‌ ಪ್ರಯತ್ನದ ಫಲವಾಗಿ ಬೀದರ್‌ಗೆ ಕ್ರೀಡಾ ಹಾಸ್ಟೆಲ್‌ ಮಂಜೂರಾಗಿದೆ. ಮೊದಲ ವರ್ಷ ತಾಲ್ಲೂಕು ಕೇಂದ್ರಗಳಲ್ಲಿ ಮಕ್ಕಳನ್ನು ಆಯ್ಕೆ ಮಾಡಿ ಕ್ರೀಡಾಂಗಣದಲ್ಲೇ ತಾತ್ಕಾಲಿಕವಾಗಿ ಕೊಠಡಿಗಳನ್ನು ನಿರ್ಮಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

₹ 40 ಲಕ್ಷ ವೆಚ್ಚದ ಕ್ರೀಡಾ ಹಾಸ್ಟೆಲ್‌ ನಿರ್ಮಾಣ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಿ ಕೊಡಲಾಗಿತ್ತು. ಆದರೆ, ನಿಗಮದ ಅಂದಿನ ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಪ್ರತಾಪನಗರದಲ್ಲಿ ಕಟ್ಟಡ ನಿರ್ಮಿಸಿದ ಜಾಗ ವಿವಾದಕ್ಕೆ ಸಿಲುಕಿತು. ಭೂ ಮಾಲೀಕರು ಕೋರ್ಟ್ ಮೊರೆ ಹೋದ ಕಾರಣ ಕಟ್ಟಡ ನಿರ್ಮಾಣ ಹಂತದಲ್ಲೇ ಹಾಳಾಯಿತು. ಅಲ್ಲದೆ, ಇದರ ಜತೆಗೆ ಹಣವೂ ಪೋಲಾಯಿತು.

ರಾಜ್ಯ ಸರ್ಕಾರ 2018ರಲ್ಲಿ ಕ್ರೀಡಾ ಹಾಸ್ಟೆಲ್‌ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಮತ್ತೆ ₹ 2.5 ಕೋಟಿ ಬಿಡುಗಡೆ ಮಾಡಿದೆ. ಆದರೆ, ಇಂದಿಗೂ ಕಟ್ಟಡ ಕಾಮಗಾರಿ ಆರಂಭವಾಗಿಲ್ಲ.

ಜಿಲ್ಲಾಧಿಕಾರಿ ಅನುರಾಗ ತಿವಾರಿ ಅವಧಿಯಲ್ಲಿ ಕ್ರೀಡಾಂಗಣದ ಆವರಣದಲ್ಲೇ ಕ್ರೀಡಾ ಶಾಲೆ ನಿರ್ಮಿಸಲು ಸಿದ್ಧತೆ ನಡೆಸಿದ್ದಾಗ ಅವರನ್ನು ದಿಢೀರ್‌ ವರ್ಗಾವಣೆ ಮಾಡಲಾಯಿತು.

ಪ್ರಸ್ತುತ ಕ್ರೀಡಾ ಹಾಸ್ಟೆಲ್‌ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಅಗತ್ಯ ನೆರವು ಒದಗಿಸಬೇಕು ಎಂದು ಟೀಮ್‌ ಯುವಾ ಸಂಚಾಲಕ ವಿನಯ ಮಾಳಗೆ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT