ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಜಾನಪದ ಸಂಭ್ರಮ ಇಂದಿನಿಂದ

ವಿಚಾರ ಸಂಕಿರಣ, ಜಾನಪದ ಗಾಯನ, ಕಲಾ ಪ್ರದರ್ಶನ
Last Updated 25 ಡಿಸೆಂಬರ್ 2018, 17:12 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ರಾಜ್ಯ ಮಟ್ಟದ ಜಾನಪದ ಸಂಭ್ರಮ ಹಾಗೂ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಡಿ.26 ಹಾಗೂ 27 ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ‘ಜಾನಪದ ಸೌಹಾರ್ದತೆಯ ನೆಲೆಗಳು’ ವಿಚಾರ ಸಂಕಿರಣವನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಉದ್ಘಾಟಿಸುವರು. ಕೌಠಾ ಬಸವೇಶ್ವರ ಕೇಂದ್ರ ಆಶ್ರಮದ ಸಿದ್ರಾಮ ಬೆಲ್ದಾಳ ಶರಣರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ ಉಪಸ್ಥಿತರಿರುವರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಗನ್ನಾಥ ಹೆಬ್ಬಾಳೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಜಯದೇವಿ ಗಾಯಕವಾಡ ಉಪಸ್ಥಿತರಿರುವರು.

ಸಾಹಿತಿ ಕೆ.ನೀಲಾ ಅವರು ‘ತತ್ವಪದಕಾರರು ಕಂಡಂತೆ ಮಾನವ ಸಂಬಂಧಗಳು’, ಗ್ಗಾಂವಿಯ ಸೊಬಟಿ ಚಂದ್ರಪ್ಪ ಅವರು ‘ಜನಪದರ ನುಡಿಯಲ್ಲಿ ವಚನಕಾರರು’ ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಅರಡಿ ಮಲ್ಲಯ್ಯ ಅವರು ‘ಜನಪದರು ಕಂಡಂತೆ ಭಾಷಾ ಸೌಹಾರ್ದತೆ’ ಕುರಿತು ಪ್ರಬಂಧ ಮಂಡಿಸುವರು.

ಅಂದು ಮಧ್ಯಾಹ್ನ 2 ಗಂಟೆಗೆ ಜಾನಪದ ಗಾಯನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹಾದೇವ ಉಪಸ್ಥಿತರಿರುವರು. ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಅಧ್ಯಕ್ಷತೆ ವಹಿಸುವರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಡಾ.ಸಿದ್ದಾರೆಡ್ಡಿ ಫೌಂಡೇಷನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಹಾಗೂ ಜಾನಪದ ಕಲಾವಿದ ಶಂಭುಲಿಂಗ ವಾಲ್ದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಾನಪದ ಗಾಯಕರು ಹಾಗೂ ಕಲಾ ತಂಡಗಳು ಜಾನಪದ ಗಾಯನ ಕಾರ್ಯಕ್ರಮ ನಡೆಸಿಕೊಡುವರು.

ಡಿ.27 ರಂದು ಬೆಳಿಗ್ಗೆ 10 ಗಂಟೆಗೆ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿಮ ಮೆರವಣಿಗೆಗೆ ಚಾಲನೆ ನೀಡುವರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಭಾಗವಹಿಸಲಿದ್ದಾರೆ. ಮೆರವಣಿಗೆಯು ಡಾ.ಅಂಬೇಡ್ಕರ್ ವೃತ್ತದಿಂದ ಭಗತ್‌ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತದಿಂದ ಜಿಲ್ಲಾ  ರಂಗ ಮಂದಿರಕ್ಕೆ ಬರಲಿದೆ.

ಮಧ್ಯಾಹ್ಯ 3 ಗಂಟೆಗೆ ರಾಜ್ಯ ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಬೀದರ್‌ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಬರೂರ ಉದ್ಘಾಟಿಸುವರು. ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾಧಿಕಾರಿ ಬಲಭೀಮ ಕಾಂಬಳೆ, ಕೆಎಸ್‌ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮಾದಿಗ ದಂಡೋರಾ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡೀಸ್ ಹಿಪ್ಪಳಗಾಂವ ಉಪಸ್ಥಿತರಿರುವರು.

ಸಂಜೆ 6 ಗಂಟೆಗೆ 2018ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಪ್ರಶಸ್ತಿ ಪ್ರದಾನ ಮಾಡುವರು. ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಜನಪದ ಕೃತಿ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಚಿವ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ ಆಶಯ ನುಡಿ ನುಡಿಯಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಬಲವಂತರಾವ್ ಪಾಟೀಲ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಬಿ.ನಾರಾಯಣರಾವ್, ಶಾಸಕರಾದ ಈಶ್ವರ ಖಂಡ್ರೆ, ಪ್ರಭು ಚವಾಣ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಶರಣಪ್ಪ ಮಟ್ಟೂರ್, ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT