ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕೆರೆ ಅಭಿವೃದ್ಧಿ: ಮರಳದ ಸಂಭ್ರಮ

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ; ಅಧಿಕಾರಿಗಳಿಂದ ಸಿಗದ ಸಮರ್ಪಕ ಸ್ಪಂದನೆ
Last Updated 21 ಮಾರ್ಚ್ 2022, 4:53 IST
ಅಕ್ಷರ ಗಾತ್ರ

ಬೀದರ್‌: ಕೆರೆಯ ಅಭಿವೃದ್ಧಿ ವಿಷಯ ಪ್ರಸ್ತಾಪವಾದರೆ, ಜಿಲ್ಲೆಯ ಜನ ಮೊದಲಿಗೆ ಸ್ಮರಿಸಿಕೊಳ್ಳುವುದು ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರನ್ನು. ಅವರ ಆಡಳಿತ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ನೂರಕ್ಕೂ ಅಧಿಕ ಕೆರೆಗಳ ಹೂಳೆತ್ತಲಾಯಿತು. ಏಳು ಕೆರೆಗಳಿಗೆ ಹೊಸ ರೂಪ ನೀಡಿ, ಪ್ರವಾಸೋದ್ಯಮ ಉತ್ತೇಜಿಸಲು ಯೋಜನೆ ರೂಪಿಸಲಾಗಿತ್ತು. ಈಗ ಕೆರೆ ಅಭಿವೃದ್ಧಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕಡತಗಳು ಕಚೇರಿಗಳಲ್ಲಿ ದೂಳು ಹಿಡಿದಿವೆ.

ಜಿಲ್ಲಾಧಿಕಾರಿಗಳಾಗಿದ್ದ ಹರ್ಷ ಗುಪ್ತ ಮತ್ತು ಅನುರಾಗ ತಿವಾರಿ ಅವರ ದಿಟ್ಟ ಕ್ರಮದಿಂದ ಶಿವನಗರ ಉತ್ತರ ಬಡಾವಣೆಯ ಕೊಳಚೆ ನೀರು ‘ಪಾಪನಾಶ ಕೆರೆ’ ಸೇರುವುದು ತಪ್ಪಿತು. ಕೆರೆಯ ಬಲ ದಂಡೆ ಕಡೆಯ 500 ಮೀಟರ್‌ ಉದ್ದದ ಗುಡ್ಡವನ್ನು 25 ಅಡಿ ಎತ್ತರ ಕೊರೆದು ಚರಂಡಿ ನೀರು, ಹೊರಗೆ ಹೋಗುವಂತೆ ಮಾಡಲಾಯಿತು.

ಕೆರೆ ಆವರಣದಲ್ಲಿ ಪ್ರವಾಸಿಗರ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಕೆರೆ ಒಡ್ಡು ಗಟ್ಟಿಗೊಳಿಸಿ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ. ಇಷ್ಟು ಬಿಟ್ಟರೆ ಬೇರೇನೂ ಆಗಿಲ್ಲ. ನಂತರ ಬಂದ ಜಿಲ್ಲಾಧಿಕಾರಿಗಳು ಕೃಷಿ ಜಮೀನನ್ನು ಕೃಷಿಯೇತರ ಆಗಿ ಪರಿವರ್ತಿಸಲು ಹೆಚ್ಚಿನ ಆದ್ಯತೆ ನೀಡಿದ್ದರಿಂದ ಕೆರೆ ಅಭಿವೃದ್ಧಿ ಮರೀಚಿಕೆ ಆಯಿತು.

ಪಾಪನಾಶ ಕೆರೆಯ ದಂಡೆಯ ಮೇಲೆ ಅಲಂಕಾರಿಕ ವಿದ್ಯುತ್‌ ಕಂಬಗಳ ಅಳವಡಿಕೆ, ಕಾರಂಜಿ ನಿರ್ಮಾಣ, ಆಸನಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. 15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಆರಂಭಿಸಿದ್ದ ದೋಣಿ ವಿಹಾರಕ್ಕೆ ಮರು ಚಾಲನೆ ನೀಡುವ ತಯಾರಿ ನಡೆದಿತ್ತು. ಅವರ ವರ್ಗಾವಣೆ ಬಳಿಕ ಪ್ರವಾಸೋದ್ಯಮ ನೆಲ ಕಚ್ಚಿತು. ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತವು ಕೊಳಕು ನೀರಿನಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಲು ಯೋಜನೆ ರೂಪಿಸಿತು. ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಯೋಜನೆ ಕೈಬಿಟ್ಟಿತು.

‘ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತ ನಿಷ್ಕ್ರಿಯಗೊಂಡಿದೆ. ಕೆಲಸ ಮಾಡುವ ಮನಸ್ಸಿನ ಅಧಿಕಾರಿಗಳು ಜಿಲ್ಲೆಗೆ ಬರುತ್ತಿಲ್ಲ. ಇದು ಜಿಲ್ಲೆಯ ಜನರ ದುರಂತ. ಅಧಿಕಾರಿಗಳ ನಿರಾಸಕ್ತಿಯಿಂದ ಪಾಪನಾಶ ಕೆರೆ ಅಭಿವೃದ್ಧಿ ಕುಂಠಿತಗೊಂಡಿವೆ’ ಎಂದು ಟೀಮ್‌ ಯುವಾದ ಸಂಚಾಲಕ ವಿನಯ್‌ ಮಾಳಗೆ ಹಾಗೂ ಸಾಮಾಜಿಕ ಕಾರ್ಯಕರ್ತ ಜೋಳದಾಬಕಾ ಹೇಳುತ್ತಾರೆ.

‘ಕೋವಿಡ್‌ ಕಾರಣ ಎರಡು ವರ್ಷ ಕೆಲ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ಎಲ್ಲವನ್ನೂ ಪರಿಶೀಲಿಸಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಕೆರೆಯಲ್ಲಿ ಮೂರ್ತಿ ನಿರ್ಮಿಸಿ

ಹುಲಸೂರ ತಾಲ್ಲೂಕಿನ ಬೇಲೂರು ಹೋಬಳಿಯಲ್ಲಿ ಕರ್ನಾಟಕ ನೀರಾವರಿ ನಿಗಮ ಸಿದ್ಧರಾಮೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕೆರೆ ಆವರಣದಲ್ಲಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಮಾಡುವ ಕಾಮಗಾರಿ ನಡೆದಿದೆ.

’ಕೆರೆಯಲ್ಲಿ 51 ಅಡಿ ಎತ್ತರದ ಸಿದ್ಧರಾಮೇಶ್ವರ ಮೂರ್ತಿ ಪ್ರತಿಷ್ಠಾಪಿಸಿ, ಕೆರೆ ಆವರಣದಲ್ಲಿ ಉದ್ಯಾನ ನಿರ್ಮಿಸಿದರೆ ಆಕರ್ಷಕ ತಾಣವಾಗಲಿದೆ‘ ಎಂದು ಬೇಲೂರು ಸಿದ್ಧರಾಮೇಶ್ವರ ಪಂಚ ಸಮಿತಿ ಅಧ್ಯಕ್ಷ ಪ್ರಕಾಶ್ ಮಂಡೋಳೆ ಹೇಳುತ್ತಾರೆ.

ಚಾಂಗಲೇರಾ: ಕೆರೆ

ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆಲ ದಿನಗಳ ಹಿಂದೆ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ನರೇಗಾದಲ್ಲಿ ಕೆರೆಯ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಪಟ್ಟಣದ ಜನ ಕೆರೆಯ ಮೇಲೆ ಬೆಳೆದಿದ್ದ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸಿದರು. ನಂತರ ನಿಂತ ಕೆಲಸ ಮತ್ತೆ ಆರಂಭವಾಗಿಲ್ಲ.

ಹಳ್ಳಿಖೇಡ(ಕೆ) ಗ್ರಾಮದಲ್ಲಿ 50 ಅಡಿ ಎತ್ತರದ ಶಿವನ ಮೂರ್ತಿ, ಗುಡ್ಡದ ಮೇಲಿರುವ 12ನೇ ಶತಮಾನದ ಕಿನ್ನರಿ ಬೊಮ್ಮಯ್ಯ ಸ್ಮಾರಕ ಹಾಗೂ ಕೆರೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿವೆ. ಕೆರೆ ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಉದಯಕುಮಾರ್ ವಾರದ್
ಹೇಳುತ್ತಾರೆ.

’ಔರಾದ್‌ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯಿತಿ ಕೆರೆ ಅಭಿವೃದ್ಧಿ ಪಡಿಸಿ ಉತ್ತಮ ಕೆಲಸ ಮಾಡಿದೆ. ಹಳ್ಳಿಖೇಡದಲ್ಲಿ ಪಂಚಾಯಿತಿಗೆ ಅಭಿವೃದ್ಧಿಯ ಆಸಕ್ತಿಯೇ ಇಲ್ಲ. ಹೀಗಾಗಿ ಕೆರೆ ಸೇರಿದಂತೆ ಪ್ರವಾಸಿ ತಾಣಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ‘ ಎಂದು ಪ್ರಕಾಶ್ ಬಾವಗಿ ಬೇಸರ ವ್ಯಕ್ತಪಡಿಸುತ್ತಾರೆ.

ಹಾಳು ಬಿದ್ದ ದೇಶಮುಖ ಕೆರೆ

ಔರಾದ್: ಪಟ್ಟಣದ ದೇಶಮುಖ ಕೆರೆ ಅಭಿವೃದ್ಧಿ ಪಡಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಅನುರಾಗ ತಿವಾರಿ ಜಿಲ್ಲಾಧಿಕಾರಿ ಇದ್ದಾಗ ಕೆರೆ ಸುತ್ತಲಿನ ಒತ್ತುವರಿ ಜಾಗ ತೆರವು ಮಾಡಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕೆರೆ ಆವರಣದಲ್ಲಿ ವಾಕಿಂಗ್ ಟ್ರ್ಯಾಕ್ ಹಾಗೂ ಉದ್ಯಾನ ನಿರ್ಮಾಣ ಮಾಡುವ ಉದ್ದೇಶಕ್ಕೆ ಯೋಜನೆಯನ್ನೂ
ರೂಪಿಸಲಾಗಿತ್ತು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಔರಾದ್‌ಗೆ ಭೇಟಿ ನೀಡಿ ಕೆರೆ ಹೂಳು ತೆಗೆಯುವ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾಸಕ ಪ್ರಭು ಚವಾಣ್‌ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಕೊಡಬೇಕು ಎಂದು ಕೈಮುಗಿದು ಕೇಳಿಕೊಂಡಿದ್ದರು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲವೂ ನಿಂತು ಹೋಗಿದೆ. ಕೆರೆ ಅಭಿವೃದ್ಧಿ ಯೋಜನೆಯ ಮಾಹಿತಿಯೇ ಇಲ್ಲ ಎಂದು ಅಧಿಕಾರಿಗಳು ಹೇಳತೊಡಗಿದ್ದಾರೆ.

‘ಔರಾದ್ ಕೆರೆ ಅಭಿವೃದ್ಧಿ ಕುರಿತು ಹಿಂದೆ ಏನಾಗಿತ್ತು ನನಗೆ ಗೊತ್ತಿಲ್ಲ. ಆದರೆ ಈಗ ಸರ್ಕಾರ ಅನುದಾನ ಕೊಟ್ಟರೆ ಕೆರೆ ಬಹಳ ಅದ್ಭುತವಾಗಿ ಮಾಡಬಹುದು’ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಎಂಜಿನಿಯರ್ ಅಶೋಕ ಸಜ್ಜನಶೆಟ್ಟಿ
ಹೇಳುತ್ತಾರೆ.

ಅಭಿವೃದ್ಧಿಗಿಲ್ಲ ಯೋಜನೆ

ಚಿಟಗುಪ್ಪ ತಾಲ್ಲೂಕಿನಲ್ಲಿ ಸರ್ಕಾರ ಒಂದು ಕೆರೆಯನ್ನೂ ಅಭಿವೃದ್ಧಿ ಪಡಿಸಿಲ್ಲ. ಅಭಿವೃದ್ಧಿಗೆ ಯೋಜನೆಯನ್ನೂ ರೂಪಿಸಿಲ್ಲ.

ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ದೇವಾಲಯ ಹಿಂಭಾಗದ ಮುತ್ತಂಗಿ ಕಡೆ ಹೋಗುವ ರಸ್ತೆ ಪಕ್ಕದಲ್ಲಿ ಅರ್ಧ ಎಕರೆಯಲ್ಲಿ ಚಿಕ್ಕ ಕೆರೆ ಇದೆ. ಶಾಸಕ ಬಂಡೆಪ್ಪ ಕಾಶೆಂಪೂರ ಈಚೆಗೆ ಕೆರೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆರೆಯಲ್ಲಿ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ದೋಣಿ ವಿಹಾರ ಶುರು ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾಲ್ಕಿ: ಬೆಳಗದ ವಿದ್ಯುತ್‌ ದೀಪಗಳು

ಭಾಲ್ಕಿ: ಪಟ್ಟಣದ ಸೌಂದರ್ಯ ಹೆಚ್ಚಿಸಲು, ಮಕ್ಕಳಿಗೆ ಮನರಂಜನೆ ಒದಗಿಸಲು, ಜನರು ವಾಕಿಂಗ್‌ ಕೈಗೊಳ್ಳಲು ಮತ್ತು ಸಕಲ ಅನುಕೂಲ ಕಲ್ಪಿಸಲು 2017ರಲ್ಲಿ ಉದ್ಘಾಟನೆಯಾದ ಇಲ್ಲಿಯ ಕೆರೆ ಪಕ್ಕದ ಮಕ್ಕಳ ಉದ್ಯಾನ ಮತ್ತು ನಡಿಗೆ ಪಥ ಸೂಕ್ತ ನಿರ್ವಹಣೆ ಕಾಣದೇ ಕಳೆಗುಂದಿವೆ. ಉದ್ಯಾನ ಕೆಲ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವುದು ಸಾರ್ವಜನಿಕರಿಗೆ ಬೇಸರ ಉಂಟು ಮಾಡಿದೆ.

ಕೆರೆಯ ಸುತ್ತ ನಿರ್ಮಿಸಲಾದ ನಡಿಗೆ ಪಥದ ಬದಿಯಲ್ಲಿ ಅಳವಡಿಸಲಾದ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ವಿವಿಧೆಡೆ ಅನಗತ್ಯ ಹುಲ್ಲು, ಗಿಡ ಬೆಳೆದಿವೆ. ಕೆಲವೆಡೆ ತಂತಿ ಜಾಲಿ ಹಾಳಾಗಿದೆ. ಮಕ್ಕಳ ಆಟದ ಕೆಲ ಸಾಮಗ್ರಿ ಹಾಳಾಗಿವೆ. ಇದರಿಂದ ಸಾರ್ವಜನಿಕರು, ಮಕ್ಕಳು ಉದ್ಯಾನ, ನಡಿಗೆ ಪಥದತ್ತ ಸುಳಿಯದೆ ಬೆಳಿಗ್ಗೆ, ಸಂಜೆ ವಾಕಿಂಗ್‌ಗೆ ಬೇರೆ ಕಡೆಗೆ ತೆರಳುತ್ತಿದ್ದಾರೆ.

ವಿದ್ಯುತ್‌ ದೀಪ ಸೇರಿದಂತೆ ಉದ್ಯಾನದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಪಟ್ಟಣದ ನಿವಾಸಿಗಳ ಅನುಕೂಲಕ್ಕೆ ಉದ್ಯಾನ ಅಭಿವೃದ್ಧಿಪಡಿಸಬೇಕು ಎಂದು ರಾಜು ಎಂ, ಕೀರ್ತಿಕುಮಾರ ಒತ್ತಾಯಿಸುತ್ತಾರೆ.

ತ್ರಿಪುರಾಂತ ಕೆರೆ ದಂಡೆ: ನಡಿಗೆ ಪಥ ನಿರ್ಮಾಣಕ್ಕೆ ಗ್ರಹಣ

ಬಸವಕಲ್ಯಾಣ: ನಗರದ ಐತಿಹಾಸಿಕ ಹಾಗೂ ದೊಡ್ಡ ಕೆರೆಯಾದ ತ್ರಿಪುರಾಂತ ಕೆರೆಯ ದಂಡೆಯಲ್ಲಿನ ನಡಿಗೆ ಪಥ ಕೆಲಸಕ್ಕೆ ಗ್ರಹಣ ಹಿಡಿದಿದೆ. ಕೆರೆ ಹೂಳು ತೆಗೆದು ಒಳಗಡೆ ಗುರು ಬಸವಣ್ಣನವರ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಭವ್ಯ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯ ಕೈಗೊಳ್ಳಲಾಗುತ್ತಿದೆ. ₹ 25 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು, ಈಗಾಗಲೇ ₹ 5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ. ವಿಕಾಸ ಕಾರ್ಯಕ್ಕೆ ಈಗಾಗಲೇ ಒಳಗಿನ ನೀರು ಹೊರ ಬಿಟ್ಟು ಕೆರೆ ಖಾಲಿ ಮಾಡಲಾಗುತ್ತಿದೆ. ಶರಣ ನುಲಿ ಚಂದಯ್ಯ ಗವಿ ಹಿಂಭಾಗದ ದಂಡೆಯಲ್ಲಿ ₹ 5 ಕೋಟಿ ಖರ್ಚಿನಲ್ಲಿ ಮಕ್ಕಳ ಉದ್ಯಾನ ನಿರ್ಮಿಸುವ ಕೆಲಸವೂ ಪ್ರಗತಿಯಲ್ಲಿದೆ.

ಈ ಸ್ಥಳದಲ್ಲಿ ಗಿಡ ಮರಗಳಿಂದ ಹಸಿರು ಕಂಗೊಳಿಸುತ್ತಿದ್ದು, ಪ್ರಶಾಂತ ವಾತಾವರಣ ಇರುವ ಕಾರಣ ದಿನವೂ ಬೆಳಿಗ್ಗೆ ಮತ್ತು ಸಂಜೆ ಮಹಿಳೆಯರು, ಮಕ್ಕಳು ಸೇರಿ ನೂರಾರು ಜನ ಇಲ್ಲಿ ವಾಯು ವಿಹಾರಕ್ಕೆ ಬರುತ್ತಾರೆ. ಅವರಿಗಾಗಿ ನಡಿಗೆ ಪಥ (ವಾಕಿಂಗ್ ಪಾಥ್) ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ.

ಖೂಬಾ ಕಾಲೇಜು ಹಿಂಬದಿ ಕೆರೆ ದಂಡೆಯಲ್ಲಿ ನಡಿಗೆ ಪಥ ನಿರ್ಮಿಸುತ್ತಿರುವುದಾಗಿ ಈ ಹಿಂದಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತರು ಹೇಳಿದ್ದರು. ಅದರಂತೆ ಕೆಲ ಪ್ರಮಾಣದಲ್ಲಿ ಕೆಲಸವೂ ಆಗಿತ್ತು. ಶಾಸಕರ ಮತ್ತು ಸಂಸದರ ನಿಧಿಯಲ್ಲಿ ಅಲ್ಲಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನೋಡಿಕೊಳ್ಳುವವರು ಇಲ್ಲದೆ ಅವೆಲ್ಲ ಹಾಳಾಗಿವೆ. ವಾಕಿಂಗ್ ಬರುವವರೇ ಕೆಲಕಾಲ ಕುಳಿತು ವಿಶ್ರಾಂತಿ ಪಡೆಯುವುದಕ್ಕಾಗಿ ಅಲ್ಲಲ್ಲಿ ಹಾಸುಗಲ್ಲುಗಳನ್ನು ಪೋಣಿಸಿಟ್ಟು ಆಸನಗಳನ್ನು ನಿರ್ಮಿಸಿರುವುದು ಕಾಣಬಹುದು.

‘ದಂಡೆಯಲ್ಲಿ ಬರೀ ಮಣ್ಣಿದ್ದು ದೂಳು ಬರುತ್ತಿದೆ. ಆದ್ದರಿಂದ ಎಲ್ಲೆಡೆ ಹುಲ್ಲು ಬೆಳೆಸಬೇಕು. ಸುತ್ತಲಿನ ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛತೆ ಕೈಗೊಳ್ಳಬೇಕು’ ಎಂದು ಹಿರಿಯರಾದ ಕಮಲಾಕರ್ ಶಿವಪುರೆ ಕೋರುತ್ತಾರೆ. ‘ವಾಯು ವಿಹಾರಕ್ಕೆ ಬರುವವರಿಗೆ ಕುಡಿಯಲು ಹಾಗೂ ಕೈಕಾಲು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ದತ್ತುರಾವ್ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT