ಭಾನುವಾರ, ಜೂನ್ 20, 2021
28 °C
ಬೀದರ್ ನಗರಸಭೆ: 32 ಸ್ಥಾನಗಳಿಗೆ ಚುನಾವಣೆ

ವಾರ್ಡ್‍ಗಳಲ್ಲಿ ಬಿರುಸಿನ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರಸಭೆ ಚುನಾವಣೆಗೆ ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ನಗರದ ವಾರ್ಡ್‍ಗಳಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ಬಿರುಸು ಪಡೆದುಕೊಂಡಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅಭ್ಯರ್ಥಿಗಳು ಆಯಾ ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಜತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಕೋವಿಡ್ ಕಾರಣ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಭಾಗಿಯಾಗುತ್ತಿರುವವರಲ್ಲಿ ಬಹುತೇಕರು ಮಾಸ್ಕ್ ಧರಿಸಿ ಮತಯಾಚಿಸುತ್ತಿದ್ದಾರೆ.

ನಗರದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರಚಾರಕ್ಕೆ ಮನೆಗಳ ಮುಂದೆ ಬಂದರೂ ಅನೇಕ ಮತದಾರರು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ದೂರದಿಂದಲೇ ನಮ್ಮ ಬೆಂಬಲ ನಿಮಗೇ ಇದೆ ಎಂದು ಹೇಳಿ ಕಳುಹಿಸುತ್ತಿದ್ದಾರೆ.

ಹಿಂದಿನಂತೆ ಚುನಾವಣೆಯ ಪ್ರಚಾರ ಅಬ್ಬರ ಕಂಡು ಬರುತ್ತಿಲ್ಲ. ಕೋವಿಡ್ ಸೋಂಕಿನ ಭಯವೇ ಇದಕ್ಕೆ ಕಾರಣವಾಗಿದೆ. ಆದರೂ, ಅಖಾಡಕ್ಕೆ ಧುಮುಕಿರುವ ಮಾಜಿ ಸದಸ್ಯರು, ಮುಖಂಡರು ಹಾಗೂ ಯುವಕರು ಮತದಾರರನ್ನು ತಲುಪಲು ಹಾಗೂ ಅವರ ಮನವೊಲಿಸಲು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ.

ಬೀದರ್ ನಗರಸಭೆಯು ಒಟ್ಟು 35 ವಾರ್ಡ್‍ಗಳನ್ನು ಹೊಂದಿದೆ. ವಾರ್ಡ್ ಸಂಖ್ಯೆ 28 ರಿಂದ ರಾಜಾರಾಮ ಚಿಟ್ಟಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಾರ್ಡ್ ಸಂಖ್ಯೆ 26 ಮತ್ತು 32 ಹೊರತುಪಡಿಸಿ ಉಳಿದ 32 ವಾರ್ಡ್‍ಗಳ ಸದಸ್ಯ ಸ್ಥಾನಗಳಿಗೆ ಸದ್ಯ ಚುನಾವಣೆ ನಡೆಯಲಿದೆ. 27 ರಂದು ಮತದಾನ ಹಾಗೂ 30 ರಂದು ಮತ ಎಣಿಕೆ ಜರುಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು