ಹುಲಸೂರ: ಪಟ್ಟಣದಲ್ಲಿ ಸೇರಿ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಶಾಲಾ ಮಕ್ಕಳು, ಮಹಿಳೆಯರು, ವಯೋ ವೃದ್ಧರು ರಸ್ತೆಯಲ್ಲಿ ಭಯದಲ್ಲಿ ನಡೆದಾಡುವಂತಾಗಿದೆ.
ತಾಲ್ಲೂಕಿನ ಬೇಲೂರ, ಗೋರಟಾ, ತೊಗಲೂರ, ಮೀರಖಲ, ಮುಚಳoಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ನಾಯಿಗಳ ಸಂಖ್ಯೆ ಹೆಚ್ಚಾದರೆ ಮತ್ತೊಂದು ಕಡೆ ಆಹಾರವಿಲ್ಲದೆ ಅನೇಕ ಬೀದಿನಾಯಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ.
ಕೆಲವೊಮ್ಮೆ ಹಸಿದ ನಾಯಿಗೆ ತಿಂಡಿಕೊಡುವ ವೇಳೆ ಕೆಲವರು ನಾಯಿ ಕಡಿತಕ್ಕೂ ಒಳಗಾಗುತ್ತಿದ್ದಾರೆ. ಬೀದಿ ನಾಯಿಗಳ ಬಗ್ಗೆ ಸ್ಥಳೀಯಾಡಳಿತ ಮತ್ತು ಸಾರ್ವಜನಿಕರು ಅಸಡ್ಡೆ ತೋರಿಸುತ್ತಿರುವುದರಿಂದ ಬೀದಿ ನಾಯಿಗಳ ನಿಯಂತ್ರಣ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮೋಟರ್ ಬೈಕ್‌ಗಳು, ವಾಹನಗಳು ಸಂಚರಿಸಿದರೆ ನಾಯಿಗಳು ಬೊಗಳುತ್ತಾ ಹಿಂಬಾಲಿಸುತ್ತವೆ. ಇವುಗಳಿಂದ ತಪ್ಪಿಸಿ ಕೊಳ್ಳಲು ಹಲವು ಸಲ ಬೈಕ್‌ನಿಂದ ಬಿದ್ದು ಸವಾರರು ಗಾಯಗೊಂಡಿದ್ದಾರೆ. ನಾಯಿ ಕಡಿತಕ್ಕೂ ಒಳಗಾಗಿದ್ದಾರೆ.ಬೇರೆ ಊರಿನಿಂದ ತಡರಾತ್ರಿ ಬಸ್‌ನಲ್ಲಿ ಬಂದು, ಮನೆಗೆ ತೆರಳುವಾಗ ಹಲವು ಕಡೆ ಸಮಸ್ಯೆ ತಪ್ಪಿದ್ದಲ್ಲ. ಒಂದು ವೇಳೆ ನಡೆದುಕೊಂಡು ಹೋದರೆ ಅಥವಾ ಬೈಕ್‌ಗಳಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಮನೆ ಸೇರಬೇಕಾದ ಸ್ಥಿತಿ ಇದೆ.
ಮೀರಖಲ ಗ್ರಾಮದಲ್ಲಿ ಈಚೆಗೆ ನೌಕರರೊಬ್ಬರು ರಾತ್ರಿ ಬಸನಿಂದ ಕೆಳಗೆ ಇಳಿದು ವಸತಿಗೃಹಕ್ಕೆ ತೆರಳುವ ಸಂದರ್ಭದಲ್ಲಿ ಬೀದಿನಾಯಿಗಳು ದಾಳಿ ಮಾಡಲು ಮುಂದಾಗಿವೆ. ಇದರಿಂದ ವಿಚಲಿತರಾದ ಸಿಬ್ಬಂದಿ ಸ್ವಲ್ಪ ದೂರ ವಾಪಸ್ ಹೋಗಿದ್ದಾರೆ. ನಾಯಿಗಳು ಬೇರೆಡೆಗೆ ತೆರಳಿದ ಸ್ವಲ್ಪ ಹೊತ್ತಿನ ಬಳಿಕ ಮನೆ ಸೇರಬೇಕಾಯಿತು.ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸ್ಥಳೀಯರಾದ ಭಾಗವತ ಫುಂಡೆ ನೆಡೆದ ಘಟನೆ ಬಗ್ಗೆ ತಿಳಿಸಿದರು.
ಸಂಜೆ ಹಾಗೂ ಮುಂಜಾನೆ ನಡೆದಾಡುವವರನ್ನು, ದ್ವಿಚಕ್ರ ವಾಹನ ಸವಾರರನ್ನು, ಶಾಲೆಗೆ ಹೋಗುವ ಮಕ್ಕಳನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಡರಾತ್ರಿ ಕೆಲಸ ಮುಗಿಸಿಕೊಂಡು ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವರ ಜೊತೆಗೆ ಜಾನುವಾರುಗಳಿಗೂ ಹೆಚ್ಚಾಗಿ ನಾಯಿಗಳು ದಾಳಿ ನಡೆಸುತ್ತಿವೆ.ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯದ ಕಾರಣ ಅವುಗಳ ಸಂಖ್ಯೆ ಮಿತಿ ಮೀರಿ ಜನರಿಗೆ ಸಂಕಷ್ಟ ತಂದೊಡ್ಡುತ್ತಿವೆ.
ಹೊರಗಡೆ ಮೇಯಲು ಬಿಟ್ಟ ದನಕ್ಕೆ ನಾಯಿ ಕಡಿತ ಹೆಚ್ಚಾಗಿದ್ದು ರೈತರು ರಾತ್ರಿಯಿಡಿ ಹೊಲದಲ್ಲೇ ಉಳಿಯಬೇಕಾದ ಪರಸ್ಥಿತಿ ನಿರ್ಮಾಣವಾಗಿದ್ದು, ಆಗಲೇ ಹುಟ್ಟಿದ್ದ ಸಣ್ಣದನಕರುಗಳ ಮೇಲೆ ನಾಯಿಗಳ ಗುಂಪು ದನಕ್ಕೆ ಕಚ್ಚಿ ತಮ್ಮ ಆಹಾರವಾಗಿಸಿವೆ. ಇದರಿಂದ ರೈತರು ಆತಂಕಕ್ಕೆ ಒಳಪಟ್ಟಿದ್ದಾರೆ. ಕೆಲವರು ಸಾಕು ನಾಯಿಗಳ ಮರಿಗಳನ್ನೂ ಬೀದಿಗೆ ಬಿಡುತ್ತಾರೆ ಅವುಗಳೂ ಜನರಿಗೆ ಆಪತ್ತು ತಂದೊಡ್ಡುತ್ತವೆ. ನಾಯಿ ಕಡಿತಕ್ಕೊಳಗಾದವರು ನಿರ್ಲಕ್ಷ್ಯ ವಹಿಸಿ ರೇಬಿಸ್ ನಿರೋಧಕ ಚುಚ್ಚುಮದ್ದು ಪಡೆಯದಿದ್ದರೆ ರೇಬಿಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆಯೂ ಇದೆ.
ತಾಲ್ಲೂಕಿನಲ್ಲಿ ಮಾಂಸ ಮಾರಾಟ ಮಳಿಗೆಗಳು,ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡುವುದರಿಂದ ಅವುಗಳನ್ನು ತಿನ್ನಲು ನಾಯಿಗಳು ಗುಂಪುಗೂಡುತ್ತವೆ. ತಿಂಗಳ ಹಿಂದೆ ಪಟ್ಟಣದಲ್ಲಿ ನಾಯಿಗಳು ಬಾಲಕಿಯೊಬ್ಬಳ ಮೇಲೆ ನಾಯಿ ದಾಳಿ ನಡೆಸಿದ ಘಟನೆ ನಡೆದಿದ್ದು , ಸ್ಥಳೀಯ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಸಾರ್ವಜನಿಕರು ನಾಯಿಕಡಿತಕ್ಕೆ ಒಳಗಾಗಬೇಕಿದೆ ಎಂಬುದು ಜನರ ಸಾಮಾನ್ಯ ಅಭಿಪ್ರಾಯವಾಗಿದೆ.
ತಾಲ್ಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಕಳೆದ 5 ತಿಂಗಳಲ್ಲಿ ಒಟ್ಟು 103 ಜನರಿಗೆ ನಾಯಿಗಳು ಕಚ್ಚಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚು ಮದ್ದು ಉಚಿತ ಲಭ್ಯ. ಮಕ್ಕಳು ವೃದ್ಧರು ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. -ಡಾ.ಶಶಿಕಾಂತ್ ಕನ್ನಾಡೆ ಆಡಳಿತ ವೈದ್ಯಾಧಿಕಾರಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಬೇಕು. ಬೆಳಿಗ್ಗೆ ಬೈಕ್‌ನಲ್ಲಿ ತೆರಳುವಾಗ ಕೆಲವು ನಾಯಿಗಳು ಕಚ್ಚಲು ಬರುತ್ತವೆ
-ರಾಜಕುಮಾರ ನಿಡೋದೆ ಹುಲಸೂರ
Quote - ಅನಾರೋಗ್ಯದಿಂದ ಬಳಲುತ್ತಿರುವ ಬೀದಿ ನಾಯಿಗಳಿಗೆ ಪಶು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಆಗಸ್ಟ್ 15 ರಿಂದ ಬೀದಿ ನಾಯಿಗಳಿಗೆ ಉಚಿತ ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
-ಡಾ. ಆರ್. ಡಿ.ಪಾಟೀಲ ಮುಖ್ಯ ಪಶು ವೈದ್ಯಾಧಿಕಾರಿ ಹುಲಸೂರ ತಾಲ್ಲೂಕು
'ಜಾನುವಾರುಗಳಿಗೆ ನೀಡುವ ಚುಚ್ಚುಮದ್ದು ಲಭ್ಯ'
2024-25 ನೇ ಸಾಲಿನಲ್ಲಿ ಬೀದಿ ನಾಯಿ ಸೇರಿದಂತೆ ಜಾನುವಾರುಗಳಿಗೆ ನೀಡಲು ಅಂದಾಜು 9 ಸಾವಿರ ನಷ್ಟು ಡೋಸ್ ರೇಬಿಸ್ ನಿರೋಧಕ ಚುಚ್ಚುಮದ್ದುಗಳು ಸರಬರಾಜು ಆಗುತ್ತಿದೆ. ಸಂಬಂಧಪಟ್ಟ ಆಯಾ ತಾಲೂಕುಗಳಲ್ಲಿ ಈಗಾಗಲೇ ಚುಚ್ಚುಮದ್ದು ವ್ಯವಸ್ಥೆ ಕಲ್ಪಿಸಲಾಗಿದ್ದು ಅವುಗಳನ್ನು ಅಗತ್ಯಕ್ಕನುಸಾರವಾಗಿ ನೀಡಲಾಗುವುದು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ 5 ವರ್ಷಗಳವರೆಗೆ ನಡೆದರೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸಾಧ್ಯ. ಈ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅಂಗೀಕಾರ ಪಡೆದಿರುವ ಶಸ್ತ್ರಚಿಕಿತ್ಸಕರು ಇರಬೇಕು. ಅವರ ಲಭ್ಯತೆ ಕಡಿಮೆ ಇರುವುದರಿಂದ ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಯಿಗಳನ್ನು ಎಲ್ಲಿಂದ ಹಿಡಿದು ಕೊಂಡೊಯ್ಯುತ್ತಾರೊ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅದೇ ಜಾಗದಲ್ಲಿ ಬಿಟ್ಟುಬರಬೇಕೆಂಬ ನಿಯಮವಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ನರಸಪ್ಪಾ ಅವರು 'ಪ್ರಜಾವಾಣಿಗೆ ' ತಿಳಿಸಿದರು. ನಾಯಿ ಕಡಿತಕ್ಕೆ ಉಪಾಯ ! ನಾಯಿ ಕಚ್ಚಿದ ತಕ್ಷಣ ಕಚ್ಚಿದ ಭಾಗವನ್ನು 10 ನಿಮಿಷ ಸ್ವಚ್ಛವಾದ ನೀರಿನಿಂದ ತೊಳೆದು ನಂತರ ಬಿಳಿ ಬಟ್ಟೆಯಿಂದ ಜಾಗವನ್ನು ಕಟ್ಟಿ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು. ನಾಯಿ ಕಚ್ಚಿ ರಕ್ತಸ್ರಾವ ಆದಂತಹ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆ ಮತ್ತು ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಹಳ್ಳಿಗಾಡಿನ ಜನರು ಇದರ ಬಗ್ಗೆ ನಾಯಿ ಕಚ್ಚಿದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು ವಿಳಂಬ ಮಾಡಿದಲ್ಲಿ ಜೀವಕ್ಕೆ ಅಪಾಯವಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಆರ್.ಡಿ.ಪಾಟಿಲ ಹೇಳುತ್ತಾರೆ. ನಾಯಿ ಮೇಲೆ ಯಾಕಿಷ್ಟು ಪ್ರೀತಿ? ಒಂದೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾದರೆ ಮತ್ತೊಂದು ಕಡೆ ಮನೆಗಳಲ್ಲಿ ಸಾಕು ನಾಯಿ ಪ್ರಮಾಣ ಏರಿಕೆ ಕಂಡಿದೆ.'ಇತ್ತೀಚೆಗಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಒಂಟತನ ಕಡಿಮೆ ಯಾಗುತ್ತಿರುವ ಸಾಮಾಜಿಕ ಸಂಬಂಧ. ನೋವು ಅನುಭವಿಸುವ ಶಕ್ತಿ ಕಡಿಮೆಯಾಗಿ ಜನರು ಪ್ರಾಣಿಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ನಾಯಿ ಸಾಕುವುದು ಜಾಸ್ತಿಯಾಗಿದೆ' ಎನ್ನುತ್ತಾರೆ ಮಕ್ಕಳ ತಜ್ಞ ಡಾ.ಮಲ್ಲಿಕಾರ್ಜುನ ಹುಮನಾಬಾದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.