ಪಕ್ಷ ಬಲವರ್ಧನೆಗೆ ಬೂತ್ ಮಟ್ಟದ ಸಮಿತಿ

7
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯೀದ್‌ ಅಹ್ಮದ್‌ ಹೇಳಿಕೆ

ಪಕ್ಷ ಬಲವರ್ಧನೆಗೆ ಬೂತ್ ಮಟ್ಟದ ಸಮಿತಿ

Published:
Updated:
Prajavani

ಬೀದರ್‌: ‘ಕಾಂಗ್ರೆಸ್‌ ಅಲ್ಪಸಂಖ್ಯಾತರ ಜಿಲ್ಲಾ ಘಟಕಗಳ ಬಲವರ್ಧನೆಗಾಗಿ ಬೂತ್‌ ಮಟ್ಟದ ಸಮಿತಿಗಳನ್ನು ಪುನರ್‌
ಸಂಘಟಿಸಲಾಗುತ್ತಿದೆ. ಸಮಿತಿ ಇಲ್ಲದ ಜಿಲ್ಲೆಗಳಲ್ಲಿ ಹೊಸ ಸಮಿತಿಗಳನ್ನು ರಚಿಸಲಾಗುತ್ತಿದೆ’ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯೀದ್‌ ಅಹ್ಮದ್‌ ತಿಳಿಸಿದರು.

‘ಮೊದಲ ಬಾರಿಗೆ ಬೆಂಗಳೂರಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಸದಸ್ಯರ ಸಮಾವೇಶ ನಡೆಸಲಾಗಿದೆ. ಬೀದರ್‌ನಿಂದ ಆರಂಭಿಸಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕಾರ್ಯ ನಡೆದಿದೆ’ ಎಂದು ತಿಳಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಒಬ್ಬರು ಕ್ರಿಶ್ಚಿಯನ್‌ ಹಾಗೂ ಮೂವರು ಮುಸ್ಲಿಂ ಅಭ್ಯರ್ಥಿಗಳು ಸೇರಿ ಒಟ್ಟು ನಾಲ್ಕು ಟಿಕೆಟ್‌ಗಳನ್ನು ಅಲ್ಪಸಂಖ್ಯಾತರಿಗೆ ನೀಡಬೇಕು. ಮಂಗಳೂರು, ಬೀದರ್, ಬೆಂಗಳೂರು ಸೆಂಟ್ರಲ್ ಹಾಗೂ ಹುಬ್ಬಳ್ಳಿ–ಧಾರವಾಡ ಕ್ಷೇತ್ರದ ಟಿಕೆಟ್‌ ಕೊಡುವುದು ಒಳ್ಳೆಯದು. ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

‘ಕಾಂಗ್ರೆಸ್–ಜೆಡಿಎಸ್‌ ಮಧ್ಯೆ ಸ್ಥಾನ ಹೊಂದಾಣಿಕೆಯಾಗಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರು ದೆಹಲಿಯಲ್ಲಿ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್‌ ನಿಯಮಾವಳಿ ಪ್ರಕಾರ ಪಕ್ಷದ ಕಾರ್ಯಕರ್ತರ, ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಟಿಕೆಟ್‌ ಆಕಾಂಕ್ಷಿಗಳ ಸಂದರ್ಶನದ ನಂತರ ಟಿಕೆಟ್‌ ದೊರೆಯಲಿದೆ’ ಎಂದು ತಿಳಿಸಿದರು.

‘ಬೆಂಗಳೂರಲ್ಲಿ ಇದೇ 18 ರಂದು ಖಾದರಿ ಮಸೀದಿಯಲ್ಲಿ ಸಿ.ಕೆ.ಜಾಫರ್‌ ಷರೀಫ್‌ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ಮುಖಂಡರೊಂದಿಗೆ ರಾಜಕೀಯ ಅಂಶಗಳು ಕುರಿತು ಸಮಾಲೋಚನೆ ಸಹ ನಡೆಯಲಿದೆ’ ಎಂದು ಹೇಳಿದರು.

ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿ ಅಲ್ಪಸಂಖ್ಯಾತರ ಘಟಕದ ವೀಕ್ಷಕ ಡಾ. ಜಾಫರ್ ಖಾನ್ ಮಾತನಾಡಿ, ‘ಫೆಬ್ರುವರಿ 10 ರಂದು ಬೆಂಗಳೂರಲ್ಲಿ ಅಲ್ಪಸಂಖ್ಯಾತರ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ’ ಎಂದು ತಿಳಿಸಿದರು.

‘ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಮಾಡಿಕೊಂಡ ನಂತರ ಚುನಾವಣೆಯ ಸಂದರ್ಭದಲ್ಲಿ ಮತಗಳು ವಿಭಜನೆಯಾಗಬಾರದು. ಎದುರಾಳಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ. ಈ ದಿಸೆಯಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷೆ ಸಲ್ಮಾತಾಜ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಜರ್‌ ರೆಹಾನ್, ಇರ್ಷಾದ್ ಪೈಲ್ವಾನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !