ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಆಯುಷ್ ವೈದ್ಯರ ಮುಷ್ಕರ

ಸಾಮೂಹಿಕ ಸೇವೆ ಸ್ಥಗಿತ: ವೇತನ ಹೆಚ್ಚಳಕ್ಕೆ ಆಗ್ರಹ
Last Updated 23 ಮೇ 2020, 14:28 IST
ಅಕ್ಷರ ಗಾತ್ರ

ಬೀದರ್: ವೇತನ ಹೆಚ್ಚಿಸಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಎನ್.ಆರ್.ಎಚ್.ಎಂ., ಎನ್.ಎಚ್.ಎಂ., ಆರ್.ಬಿ.ಎಸ್.ಕೆ. ಹಾಗೂ ಅಗೆನೆಸ್ಟ್ ಪೋಸ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಯುಷ್ ವೈದ್ಯರು ಶನಿವಾರದಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ಶುರು ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸಾಮೂಹಿಕವಾಗಿ ಕೆಲಸ ಸ್ಥಗಿತಗೊಳಿಸಿದ ವೈದ್ಯರು ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸರ್ಕಾರ 300 ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಎಂಬಿಬಿಎಸ್ ವೈದ್ಯರು ಇಲ್ಲದ ಕಡೆಗಳಲ್ಲಿ ಆರೋಗ್ಯ ಕೇಂದ್ರಗಳನ್ನು ನಡೆಸುತ್ತಿದೆ.ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 650 ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ 1,000 ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 16 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಮಾಸಿಕ ₹ 20,300, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯ ವೈದ್ಯರಿಗೆ ₹ 31,440 ಹಾಗೂ ಎಂಬಿಬಿಎಸ್ ವೈದ್ಯರು ಇಲ್ಲದ ಕಡೆ ಕೆಲಸ ನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ ₹ 26,000 ವೇತನ ಮಾತ್ರ ಕೊಡಲಾಗುತ್ತಿದೆ ಎಂದು ಹೇಳಿದರು.

16 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಮಾತ್ರ ಕೇವಲ ಶೇ 5 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಆರೋಗ್ಯ ಉಪ ಕೇಂದ್ರಗಳಲ್ಲಿ ಮಿಡಲ್ ಲೇವರ್ ಹೆಲ್ತ್ ಪ್ರೋವೈಡರ್ ಆಗಿರುವ ಬಿ.ಎಸ್ಸಿ ನರ್ಸಿಂಗ್ ಪದವೀಧರರಿಗೆ ₹ 32,000 ವೇತನ ಕೊಡಲಾಗುತ್ತಿದೆ. ಆದರೆ, ಆಯುಷ್ ವೈದ್ಯರಿಗೆ ಕೇವಲ ₹ 20,000 ವೇತನ ನೀಡಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕನಿಷ್ಠ ವೇತನ ಕಾಯ್ದೆ ಅಡಿ ಆಯುಷ್ ವೈದ್ಯರಿಗೆ ₹ 40,000 ವೇತನ ಹಾಗೂ ಭತ್ಯೆ ನೀಡಬೇಕು ಎಂದು ರಾಜ್ಯ ಸರ್ಕಾರ ತಾನೇ ಹೊರಡಿಸಿದ ಆದೇಶ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.

ಕಾಯಂ ಆಯುಷ್ ವೈದ್ಯರ ಮೂಲ ವೇತನಕ್ಕೆ ಅನುಗುಣವಾಗಿ ಯಾವುದೇ ಭತ್ಯೆಗಳಿಲ್ಲದೆ ಮಾಸಿಕ ₹56,000 ವೇತನ ಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT