ಶುಕ್ರವಾರ, ಮೇ 20, 2022
20 °C
ಪ್ರವಚನ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

ಬೀದರ್: ಯುವಶಕ್ತಿಯಿಂದ ಸದೃಢ ದೇಶ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಬೌದ್ಧಿಕ ಏಳಿಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಮೂಲವಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ನೀಟ್‌, ಐಐಟಿಯಲ್ಲಿ ಅತ್ಯದ್ಭುತ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ. ನಮ್ಮ ರಾಷ್ಟ್ರವೂ ಈಗ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಗೊಂಡಿದೆ. ಭಾರತೀಯರು ಆರ್ಥಿಕ, ಬೌದ್ಧಿಕ, ಕ್ರಿಯಾತ್ಮಕ ಚಟುವಟಿಕಗಳಲ್ಲಿ ತುಂಬಾ ಪ್ರಗತಿ ಹೊಂದಿದ್ದೇವೆ ಎಂದು ಹೇಳಿದರು.

ಜನರು ಸರ್ಕಾರದಿಂದ ಪಡೆದುಕೊಳ್ಳುವ ಚಾಳಿಯನ್ನು ಬಿಟ್ಟು, ಇತರರಿಗೆ ಕೊಡುವ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶದ ಪರಂಪರೆ ಬದುಕಿ, ಬದುಕಲು ಬಿಡಿ, ಇತರರಿಗಾಗಿ ಜೀವಿಸಿ ಎನ್ನುವುದಾಗಿದೆ. ಇದರಂತೆಯೇ ನಮ್ಮ ದೇಶ ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೊರೊನಾ ಚುಚ್ಚುಮದ್ದನ್ನು ಪೂರೈಸಲು ಸಿದ್ಧವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಯುವಕರು ಓದು ಮುಗಿದ ನಂತರ ಸರ್ಕಾರಿ ನೌಕರಿಗಾಗಿ ಕೈ ಚಾಚದೆ ಸ್ಟಾರ್ಟ್‌ಪ್‌ ಆರಂಭಿಸಿ ದೇಶದ ಅಭ್ಯುದಯಕ್ಕೆ, ಸಮಾಜದ ಒಳಿಗೆ ಶ್ರಮಿಸಬೇಕು. ನಾವು, ನೀವು ಗಟ್ಟಿಯಾದರೆ ನಮ್ಮ ರಾಷ್ಟ್ರದ ಬಲ ಇನ್ನೂ ಹೆಚ್ಚಾಗುತ್ತದೆ ಎಂದರು.

ಆಲಮಟ್ಟಿಯ ರುದ್ರಮಣಿ ಶರಣರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಹೆಮ್ಮೆಯ ಬಾಳನ್ನು ರೂಪಿಸಿಕೊಳ್ಳಲು ಇರುವೆಯಂತೆ ಸದಾ ಚಟುವಟಿಕೆಯಲ್ಲಿ ತಲ್ಲೀನರಾಗಬೇಕು ಎಂದು ಎಂದರು.

ಸುತ್ತೂರು ಮಠದ ಉತ್ತರಾಧಿಕಾರಿ ಜಯರಾಜೇಂದ್ರ ಸ್ವಾಮೀಜಿ ಮಾತನಾಡಿ, ಕಳೆದು ಹೋದ ಸಮಯ ಮರಳಿ ಬರುವುದಿಲ್ಲ. ಹಾಗಾಗಿ, ಭಗವಂತ ಕರುಣಿಸಿದ ಅಮೂಲ್ಯ ಸಮಯವನ್ನು ಸತ್ಕಾರ್ಯಗಳಿಗಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಇದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.