ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ಪಠ್ಯ ಪುಸ್ತಕ ಹಿಂಪಡೆಯದಿದ್ದರೆ ಹೋರಾಟ: ಎಚ್ಚರಿಕೆ

ಪರಿಷ್ಕೃತ ಸಮಾಜ ವಿಜ್ಞಾನ ಪಾಠದಲ್ಲಿ ಬಸವೇಶ್ವರರಿಗೆ ಅಪಚಾರ
Last Updated 2 ಜೂನ್ 2022, 10:50 IST
ಅಕ್ಷರ ಗಾತ್ರ

ಬೀದರ್: ಜಗಜ್ಯೋತಿ ಬಸವೇಶ್ವರರ ಇತಿಹಾಸ ತಿರುಚಿರುವ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಕೂಡಲೇ ಹಿಂಪಡೆಯದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಲಿಂಗಾಯತ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಎಚ್ಚರಿಸಿದ್ದಾರೆ.

ಪರಿಷ್ಕೃತ ಪಠ್ಯದಲ್ಲಿನ ಬಸವೇಶ್ವರ ಚರಿತ್ರೆ ಕುರಿತ ಪಾಠವು ತಪ್ಪು ಮಾಹಿತಿಗಳಿಂದ ಕೂಡಿದೆ. ಕಳೆದ ವರ್ಷ ಇದ್ದ ಪಾಠದಲ್ಲಿನ ಅನೇಕ ಮಹತ್ವದ ಅಂಶಗಳನ್ನು ತೆಗೆದು, ಸುಳ್ಳು ಸಂಗತಿಗಳನ್ನು ಸೇರಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಪಾಠದಲ್ಲಿ ಬಸವೇಶ್ವರರು ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದಿದ್ದರು. ವೀರಶೈವ ಮತ ಅಭಿವೃದ್ಧಿಪಡಿಸಿದ್ದರು ಎನ್ನುವ ಸತ್ಯಕ್ಕೆ ದೂರವಾದ ವಿಷಯಗಳನ್ನು ಸೇರಿಸಲಾಗಿದೆ ಎಂದು ಆಪಾದಿಸಿದ್ದಾರೆ.

ಬಸವೇಶ್ವರರು ಇಷ್ಟಲಿಂಗದ ಜನಕರು. ಅವರು ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆ ಪಡೆದಿರಲಿಲ್ಲ. ಜಾತಿ, ವರ್ಗ, ವರ್ಣ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿದ್ದ ಅವರು ಹೊಸ ಲಿಂಗಾಯತ ಧರ್ಮವನ್ನೇ ಸ್ಥಾಪಿಸಿದ್ದರು. ಹೀಗಾಗಿ ಅವರು ವೀರಶೈವ ಮತ ಅಭಿವೃದ್ಧಿಪಡಿಸಿದರು ಎನ್ನುವುದು ಮಿಥ್ಯ ಸಂಗತಿ ಎಂದು ಹೇಳಿದ್ದಾರೆ.

ಲೇಖಕರು ಉದ್ದೇಶಪೂರ್ವಕವಾಗಿಯೇ ಬಸವೇಶ್ವರರ ಇತಿಹಾಸ ತಿರುಚಿ ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಾರೆ. ಸರ್ಕಾರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ತಕ್ಷಣ ವಾಪಸ್ ಪಡೆಯಬೇಕು. ಇತಿಹಾಸ ತಿರುಚಿದ ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಲೋಪ, ದೋಷಗಳನ್ನು ಸರಿಪಡಿಸಿ, ಬಸವೇಶ್ವರರ ವಾಸ್ತವ ಇತಿಹಾಸದ ಪಾಠ ಅಳವಡಿಸಿ, ಪಠ್ಯ ಪುಸ್ತಕದ ಮರು ಮುದ್ರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT