ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಪರೀಕ್ಷೆ ಬರೆದ 26,161 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ 237 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
Last Updated 22 ಜುಲೈ 2021, 13:42 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಗುರುವಾರ 26,161 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆ ಪರೀಕ್ಷೆ ಬರೆದರು. 237 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು.

ಮುಂಚಿತವಾಗಿಯೇ ಸಕಲ ಸಿದ್ಧತೆ ಮಾಡಿಕೊಂಡಿದ್ದರಿಂದ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಎಲ್ಲ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿಕೊಂಡೇ ಪರೀಕ್ಷೆ ಬರೆಯಲು ಬಂದಿದ್ದರು. ಆದರೂ ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೈಹಿಕ ಉಷ್ಣಾಂಶ ಪರೀಕ್ಷಿಸಿ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಯಿತು.

ಮೊದಲ ಪರೀಕ್ಷೆ ದಿನ ಬೀದರ್‌ನಲ್ಲಿ ಜ್ವರ ಕಾಣಿಸಿಕೊಂಡ ಒಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಎರಡನೇ ಪರೀಕ್ಷೆಯ ದಿನ ಅಂತಹ ಸಂದರ್ಭ ಬಂದೊದಗಲಿಲ್ಲ. 266 ವಲಸೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದರು.

ಬೀದರ್‌ ಜಿಲ್ಲೆಯಲ್ಲಿ 23,750 ರೆಗ್ಯುಲರ್, 1,311 ಖಾಸಗಿ ಹಾಗೂ 1,100 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 146 ರೆಗ್ಯುಲರ್, 41 ಖಾಸಗಿ ಹಾಗೂ 50 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 237 ವಿದ್ಯಾರ್ಥಿಗಳು ಗೈರಾದರು ಎಂದು ಡಿಡಿಪಿಐ ಗಂಗಣ್ಣ ಸ್ವಾಮಿ ತಿಳಿಸಿದರು.


ಕೋವಿಡ್‌ ಕಾರಣ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡುಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿತು. ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗಿತ್ತು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಎಲ್ಲರೂ ಮಾಸ್ಕ್‌ ಧರಿಸಿದ್ದರಿಂದ ಪರೀಕ್ಷೆಯನ್ನು ನಿರ್ಭಯವಾಗಿ ಬರೆದಿದ್ದೇನೆ ಎಂದು ಖಟಕಚಿಂಚೋಳಿಯ ವಿದ್ಯಾರ್ಥಿ ಅರವಿಂದ್ ಬಸವರಾಜ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ ಕಾರಣ ನಮ್ಮಲ್ಲಿನ ಆತ್ಮವಿಶ್ವಾಸ ‌ಹೆಚ್ಚಾಗಿದೆ. ಕೋವಿಡ್ ಭಯದ ಕಾರಣ ಎರಡೇ‌ ದಿನದಲ್ಲಿ ಪರೀಕ್ಷೆ ಪೂರ್ಣಗೊಳಿಸಿದರೂ ನಾವೂ ಪರೀಕ್ಷೆ ಬರೆದೆವಲ್ಲ ಎಂಬ ತೃಪ್ತಿ ಉಂಟಾಗಿದೆ. ಒಂದು ಕೊಠಡಿಯಲ್ಲಿ ಬರೀ 12 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡಿ ಅಂತರ ಕಾಪಾಡಿಕೊಳ್ಳಲಾಯಿತು. ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಆಗಿದ್ದರಿಂದ ಏನಾಗುತ್ತದೋ ಎಂಬ ಆತಂಕ ಇತ್ತಾದರೂ ಕೇಂದ್ರಕ್ಕೆ ಹೋದಾಗ ಅಂಥ ಕಠಿಣ ಎನಿಸಲಿಲ್ಲ ಎಂದು ಬಸವಕಲ್ಯಾಣದ ಶಾಂತಿನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿ ಅರ್ಜಿತ್ ಅವರು ಅನುಭವ ಹಂಚಿಕೊಂಡರು,

ಭಾಷಾ ಪರೀಕ್ಷೆ ಇದ್ದ ಕಾರಣ ಭಯ ಇರಲಿಲ್ಲ. ಶಿಕ್ಷಣ ಇಲಾಖೆ ಕೋವಿಡ್‌ ನಿಯಮಾವಳಿ ಪಾಲನೆ ಮಾಡಿ ಪರೀಕ್ಷೆ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿತ್ತು. ಹೀಗಾಗಿ ಯಾವುದೇ ತೊಂದರೆ ಆಗಲಿಲ್ಲ ಎಂದು ಹುಮನಾಬಾದ್‌ ತಾಲ್ಲೂಕಿನ ತಾಳಂಪಳ್ಳಿಯ ಮಾತೋಶ್ರೀ ಕಸ್ತೂರಬಾಯಿ ಶಾಲೆಯ ವಿದ್ಯಾರ್ಥಿನಿ ಸಂಜನಾ ಮಲ್ಲಪ್ಪ ತಿಳಿಸಿದರು.

ಮೊದಲಿನ ಪರೀಕ್ಷಾ ಪದ್ದತಿಗಿಂತ ಈ ಬಾರಿ ಬರೆದ ಪರೀಕ್ಷಾ ಪದ್ಧತಿ ಭಿನ್ನವಾಗಿತ್ತು. ಪರೀಕ್ಷೆ ಕಷ್ಟ ಎನಿಸಲಿಲ್ಲ. ಸುಲಭ ಪ್ರಶ್ನೆಗಳೇ ಇದ್ದವು. ಉತ್ತಮ ಅಂಕಗಳು ಬರುವ ನಿರೀಕ್ಷೆ ಇದೆ ಎಂದು ಬೀದರ್‌ನ ಅರುಣೋದಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಪರಮೇಶ್ವರ ಕರಂಜೆ ಹೇಳಿದರು.

ಸರ್ಕಾರ ಪರೀಕ್ಷೆ ನಡೆಸದಿದ್ದರೆ ಹೇಗೆ ಎನ್ನುವ ಆತಂಕ ಇತ್ತು. ಆದರೆ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಂಡು ಅಚ್ಚುಕಟ್ಟಾದ ವ್ಯವಸ್ಥೆಯನ್ನೂ ಮಾಡಿದರು. ಹೀಗಾಗಿ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ವಿದ್ಯಾರ್ಥಿ ಪಾಲಕ ರವೀಂದ್ರ ಕರಂಜೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಕೋವಿಡ್ ಸೋಂಕಿನ ಭೀತಿ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಔರಾದ್‌ನ ಆದರ್ಶ ವಿದ್ಯಾಲಯದ ಶಿಕ್ಷಕ ಮಹಾದೇವ ಚಿಟಗಿರೆ ಹೇಳಿದರು.

ವಿಶೇಷವಾಗಿ ಎಲ್ಲ ಆರು ವಿಷಯಗಳು ಎರಡು ಪ್ರಶ್ನೆ ಪತ್ರಿಕೆಯಲ್ಲಿ ಸಿದ್ಧಪಡಿಸಿದ್ದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆತಿದ್ದು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿದೆ ಎಂದರು.

ಪರೀಕ್ಷೆ ಬರೆಯದೇ ಹಿಂದಿನ ತರಗತಿ ಸಾಧನೆ ಮೇಲೆ ಫಲಿತಾಂಶ ಪಡೆಯುವುದಕ್ಕಿಂತ ಈ ರೀತಿ ಪರೀಕ್ಷೆ ಬರೆದು ಫಲಿತಾಂಶ ಪಡೆದರೆ ವಿದ್ಯಾರ್ಥಿಗಳ ಮನೋಬಲ ಹೆಚ್ಚಲಿದೆ. ಪರೀಕ್ಷೆ ನಡೆಸಿದ್ದು ಪಾಲಕರಲ್ಲೂ ಖುಷಿ ತಂದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT