ಮಂಗಳವಾರ, ಸೆಪ್ಟೆಂಬರ್ 21, 2021
21 °C
ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

ವಿಷಯ ತ್ಯಾಗ-ಪ್ರಸಾದಭೋಗ

ಅಮೃತವಾಣಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಾನವ ಮಹಾದೇವನ ಸ್ವರೂಪನಾಗಲು, ನರಹರನಾಗಲು, ಜೀವ ಶಿವನಾಗಲು ಮೊದಲು ವಿಷಯಗಳನ್ನು ತ್ಯಾಗ ಮಾಡಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಷಡ್ವಿಕಾರಗಳನ್ನು ತ್ಯಾಗ ಮಾಡಬೇಕು. ಪಂಚೇಂದ್ರೀಯಗಳಲ್ಲಿ ಇರುವ ದೌರ್ಬಲ್ಯಗಳನ್ನು ಹೊರಹಾಕಬೇಕು. ಎರಡು ವಸ್ತುಗಳು ಒಂದೇ ಕಾಲಕ್ಕೆ ಒಂದೇ ಸ್ಥಳದಲ್ಲಿ ಒಳ ಸೇರುವುದಿಲ್ಲ. ಕೊಡದಲ್ಲಿ ಗಾಳಿ ತುಂಬಿರುತ್ತದೆ. ಗಾಳಿ ಹೊರಹೋದಾಗಲೇ ನೀರು ಒಳಸೇರುತ್ತದೆ. ಇದೊಂದು ವೈಜ್ಞಾನಿಕ ಸತ್ಯ ಸಂಗತಿ. ಅದೇ ರೀತಿ ದೈವಿಪ್ರೇಮ ಒಳಗೆ ಪ್ರವೇಶ ಆಗಬೇಕಾದರೆ ಅಂತರಂಗದಲ್ಲಿದ್ದ ವಿಷಯವಾಸನೆ ಹೊರಹಾಕಬೇಕು. ಅದುವೇ ವಿಷಯತ್ಯಾಗ.

ವಿಷಯತ್ಯಾಗವಾದ ಬಳಿಕ ಪ್ರಸಾದಭೋಗ. ಪ್ರಸಾದಭೋಗವೆಂದರೆ, ಒಳ್ಳೆಯದನ್ನು ತುಂಬಿಕೊಳ್ಳುವುದು. ‘ವಚನದಲ್ಲಿ ನಿಮ್ಮ ನಾಮಾಮೃತ ತುಂಬಿ, ಕಿವಿಯಲ್ಲಿ ನಿಮ್ಮ ಕಿರುತಿ ತುಂಬಿ ಮನದಲ್ಲಿ ನಿಮ್ಮ ನೆನಹು ತುಂಬಿ’ ಇಂದ್ರೀಯಗಳೆಲ್ಲ ದೇವಪ್ರೇಮದಿಂದ ತುಂಬಿಕೊಂಡಾಗ ಲಿಂಗಯೋಗ ತಾನಾಗಿಯೇ ಆರಂಭವಾಗುತ್ತದೆ. ಲಿಂಗಯೋಗ ಸಾಧ್ಯವಾದ ಬಳಿಕ ನಮ್ಮ ಸ್ಥಿತಿ ಹೇಗಾಗುತ್ತದೆ ಎಂದು ಬಸವಣ್ಣನವರು ಸುಂದರವಾಗಿ ಹೀಗೆ ಹೇಳುತ್ತಾರೆ.

‘ಕಂಗಳು ತುಂಬಿದ ಬಳಿಕ ನೋಡಲಿಲ್ಲ. ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ. ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ. ಮನ ತುಂಬಿದ ಬಳಿಕ ನೆನೆಯಲಿಲ್ಲ’ ಹೀಗೆ ಸರ್ವಾಂಗದಲ್ಲಿ ದೈವೀಪ್ರೇಮವನ್ನು ತಾನೇ ತಾನಾಗಿ ವ್ಯಾಪಿಸಿ ಸಾಮರಸ್ಯ ಸುಖದಲ್ಲಿ ಮುಳುಗಿ ಬಿಡುತ್ತದೆ. ಅಂತರಂಗ ಬಹಿರಂಗದಲ್ಲಿ ದೈವಿ ಪ್ರೇಮ ತುಂಬಿರುತ್ತದೆ. ಇದುವೇ ಲಿಂಗಯೋಗ. ಹೀಗೆ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ವಿಷಯತ್ಯಾಗ-ಪ್ರಸಾದಭೋಗ-ಲಿಂಗಯೋಗ ಪಥದಲ್ಲಿ ಮುನ್ನಡೆಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು