ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಹೆಚ್ಚಿದ ಬಿಸಿಲ ಝಳ; ಮುಂದಿನ ವಾರ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

Last Updated 30 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೀದರ್: ಹೋಳಿ ಹುಣ್ಣಿಮೆಯ ದಿನದಿಂದ ಝಳ ಹೆಚ್ಚಿಸುತ್ತಿರುವ ಸೂರ್ಯದೇವ ಎರಡು ವಾರಗಳಲ್ಲೇ ಬೆಂಕಿ ಉಗುಳಲು ಶುರು ಮಾಡಿದ್ದಾನೆ. ಸೂರ್ಯನ ಕಿರಣಗಳು ನೆಲದ ಮೇಲೆ ಬೀಳುತ್ತಲೇ ಬಿಸಿಲಿನ ಝಳ ಗರಿ ಬಿಚ್ಚಿಕೊಳ್ಳಲಾರಂಭಿಸಿದೆ.

ಬೆಳಿಗ್ಗೆ 10 ಗಂಟೆಯ ವೇಳೆಗೆ ನೆತ್ತಿ ಸುಡುವ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಜನ ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಹೆದರಿ ಮಾರುಕಟ್ಟೆಯಲ್ಲಿ ಹೆಚ್ಚು ಜನ ಕಾಣಿಸಿಕೊಳ್ಳುತ್ತಿಲ್ಲ. ಮಧ್ಯಾಹ್ನ ಮಾರುಕಟ್ಟೆ ಪ್ರದೇಶ ಜನರಿಲ್ಲದೇ ಭಣಗೂಡುತ್ತಿದೆ.

ಆಸ್ಪತ್ರೆ, ಸರ್ಕಾರಿ ಕಚೇರಿ ಹಾಗೂ ಇನ್ನಿತರ ಕೆಲಸಗಳಿಗೆ ನಗರಕ್ಕೆ ಬರುತ್ತಿರುವ ಜನ ಝಳ ತಡೆದು ಕೊಳ್ಳಲಾಗದೇ ಹೈರಾಣಾಗುತ್ತಿದ್ದಾರೆ. ಮಳೆಗಾಲದಲ್ಲಿ ಬಿಚ್ಚಿಕೊಳ್ಳುತ್ತಿದ್ದ ಕೊಡೆಗಳು ಇದೀಗ ಸುಡು ಬೇಸಿಗೆಯಲ್ಲೂ ಬಿಚ್ಚಿಕೊಳ್ಳುತ್ತಿವೆ. ಜನ ಛತ್ರಿ ಹಾಗೂ ತಲೆಯ ಮೇಲೆ ಟೊಪ್ಪಿಗೆ, ಕರವಸ್ತ್ರ ಇಲ್ಲದೇ ಮಧ್ಯಾಹ್ನ ಹೊರಗೆ ಬರುತ್ತಿಲ್ಲ.

ತೆಂಗಿನ ನೀರು, ತಂಪು ಪಾನೀಯ ಹಾಗೂ ಐಸ್‌ಕ್ರಿಮ್‌ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ನೀರಿನ ಬಾಟಲಿಗಳ ಮಾರಾಟವೂ ವೃದ್ಧಿಸಿದೆ. ಜನ ಬಾಯಾರಿಕೆ ತಣಿಸಿಕೊಳ್ಳಲು ಬಾಟಲಿಗಳನ್ನು ಖರೀದಿಸಿ ನೀರು ಕುಡಿಯುವ ದೃಶ್ಯ ಸಾಮಾನ್ಯವಾಗಿದೆ.

ಕೆಲವು ಕಡೆ ದಾನಿಗಳು ದೇವಸ್ಥಾನಗಳ ಮುಂಭಾಗದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿ ಇಟ್ಟಿದ್ದಾರೆ. ಜನ ಸವಟಿನ ಮೂಲಕ ನೀರು ಎತ್ತಿಕೊಂಡು ಗ್ಲಾಸಿನಲ್ಲಿ ಹಾಕಿಕೊಂಡು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನೀರಿಗಾಗಿ ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಬಿಡಾಡಿ ದನಗಳು ಬಾಯಾರಿಕೆಯಿಂದ ನೀರಿಗಾಗಿ ಅಲೆದಾಡುತ್ತಿವೆ. ಸಾರ್ವಜನಿಕ ನಲ್ಲಿಗಳ ಮುಂದೆ ಬಂದು ನಿಲ್ಲುತ್ತಿವೆ. ಜಾನುವಾರಗಳ ಸ್ಥಿತಿ ನೋಡಿ ಕೆಲವರು ಮನೆಯಂಗಳದಲ್ಲೇ ಚಿಕ್ಕದಾದ ನೀರಿನ ತೊಟ್ಟಿ ಇಟ್ಟು ಅವುಗಳ ನೀರಿನ ದಾಹ ತೀರಿಸುತ್ತಿದ್ದಾರೆ.

ಹೆಚ್ಚಲಿದೆ ಬಿಸಿಲು: ಒಂದು ವಾರದಿಂದ ಗರಿಷ್ಠ ಉಷ್ಣಾಂಶ 38ರಿಂದ 39 ಡಿಗ್ರಿ ಸೆಲ್ಸಿಯಸ್‌ ಇದೆ. ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಗರಿಷ್ಠ ಉಷ್ಣಾಂಶ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

ಕನಿಷ್ಠ ಉಷ್ಣಾಂಶವೂ 18ರಿಂದ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಮಧ್ಯಾಹ್ನ ಬಿಸಿ ಗಾಳಿ ಬೀಸುತ್ತಿದೆ. ರಾತ್ರಿಯಾದರೂ ವಾತಾವರಣ ತಂಪಾಗುತ್ತಿಲ್ಲ. ಕಾಂಕ್ರೀಟ್‌ ಕಟ್ಟಡಗಳು ಬಿಸಿ ಹಬೆ ಬಿಡುತ್ತಿವೆ. ಏರ್‌ಕೂಲರ್‌ ಹಾಗೂ ಫ್ಯಾನ್ ಇಲ್ಲದೆ ನಿದ್ರಿಸುವುದು ಕಷ್ಟವಾಗುತ್ತಿದೆ. ವಿದ್ಯುತ್‌ ಕೈಕೊಟ್ಟರೆ ದೇವರೇ ಕಾಪಾಡಬೇಕಾದ ಸ್ಥಿತಿ ಇದೆ.

‘ಬೀದರ್ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇದೆ. ಏಪ್ರಿಲ್‌ ಎರಡನೇ ವಾರದಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ. 42 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾದರೂ ಅಚ್ಚರಿ ಇಲ್ಲ’ ಎಂದು ಬೀದರ್‌ನ ಹಳ್ಳದಕೇರಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.

ಕೃಷಿ ಭೂಮಿಗೆ ಉತ್ತಮ: ಸುಡು ಬಿಸಿಲು ಕೃಷಿ ಭೂಮಿಗೆ ಉತ್ತಮ. ರೈತರು ಬೆಳಿಗ್ಗೆ ಅಥವಾ ಮುಸ್ಸಂಜೆಯಲ್ಲಿ ಉಳುಮೆ ಮಾಡುವುದು ಒಳ್ಳೆಯದು. ಇದರಿಂದ ನೆಲದೊಳಗಿನ ಕ್ರಿಮಿಕೀಟಗಳು ಸಾಯುತ್ತವೆ. ಮೊಟ್ಟೆ ಇಟ್ಟಿದ್ದರೂ ಒಡೆದು ಹೋಗುತ್ತವೆ.

ಹೊಲದಲ್ಲಿ ಬೆಳೆ ಇದ್ದರೆ ನೀರು ಹರಿಸಬೇಕು. ಅಕಾಲಿಕ ಮಳೆಯಿಂದಾಗಿ ತೇವಾಂಶ ಉಳಿಸಿಕೊಳ್ಳಲು ಭೂಮಿ ಸಿದ್ಧಪಡಿಸಿಕೊಳ್ಳಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT