ಬೀದರ್‌: ಶಂಕಿತ ಎಚ್‌1ಎನ್‌1, ಮೃತರ ಸಂಖ್ಯೆ 3ಕ್ಕೆ

7
ಬ್ರಿಮ್ಸ್‌ನಲ್ಲಿ ಎ ಚ್‌1ಎನ್‌1 ಸೋಂಕಿತರಿಗೆ ಪ್ರತ್ಯೇಕ ವಾರ್ಡ್‌ ಪ್ರಾರಂಭ

ಬೀದರ್‌: ಶಂಕಿತ ಎಚ್‌1ಎನ್‌1, ಮೃತರ ಸಂಖ್ಯೆ 3ಕ್ಕೆ

Published:
Updated:
Deccan Herald

ಬೀದರ್‌: ಭಾಲ್ಕಿ ತಾಲ್ಲೂಕಿನ ಹಲಸಿತೂಗಾಂವ ಹಾಗೂ ಪಾಂಡ್ರಿ ಗ್ರಾಮದಲ್ಲಿ ತಲಾ ಒಬ್ಬರಂತೆ ಇಬ್ಬರು ಶಂಕಿತ ಎಚ್‌1ಎನ್‌1 ಸೋಂಕಿನಿಂದ ಮೃತಪಟ್ಟ ಎಂಟು ದಿನಗಳ ನಂತರ ಕಮಲನಗರ ತಾಲ್ಲೂಕಿನ ಹೊರಂಡಿ ಗ್ರಾಮದಲ್ಲಿ ಕೃಷಿ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ.

ಹದಿನೈದು ದಿನಗಳಿಂದ ಜ್ವರ, ಕೆಮ್ಮು ಹಾಗೂ ಶೀತದಿಂದ ಬಳಲುತ್ತಿದ್ದ ಗ್ರಾಮದ ವಿಜಯಕುಮಾರ ರಾಮಚಂದ್ರ ಶಿಂಧೆ(32) ಸೋಮವಾರ ಲಾತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜ್ವರ ಕಾಣಿಸಿಕೊಂಡರೂ ವಿಜಯಕುಮಾರ ವಿಶ್ರಾಂತಿ ಪಡೆಯದೆ ಎರಡು ದಿನ ಹೊಲದಲ್ಲಿ ಕೆಲಸ ಮಾಡಿದ್ದರು. ತೀವ್ರ ಜ್ವರದಿಂದ ಬಳಲಿದಾಗ ಮಹಾರಾಷ್ಟ್ರದ ಉದಗಿರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಅಲ್ಲಿ ಗುಣವಾಗದ ಕಾರಣ ಲಾತೂರ್‌ಗೆ ತೆರಳಿದ್ದರು.

‘ವಿಜಯಕುಮಾರ ಕಮಲನಗರ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿಲ್ಲ. ಲಾತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಕಾರಣ ಎಚ್‌1ಎನ್‌1ನಿಂದ ಮೃತಪಟ್ಟಿರುವುದು ದೃಢಪಟ್ಟಿಲ್ಲ. ರೋಗಿ ಹಾಗೂ ಸಂಬಂಧಿಗಳ ಗಂಟಲು ಸ್ರಾವದ ಮಾದರಿಯನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಾಜಿ(ಎನ್ಐವಿ) ಅಥವಾ ಮಣಿಪಾಲಗೆ ಕಳಿಸಿ ವರದಿ ಪಡೆಯಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.

‘ಖಾಸಗಿ ರೋಗ ಪತ್ತೆ ಕೇಂದ್ರದಲ್ಲಿ ನಡೆಸಲಾದ ವರದಿಗೆ ಮಾನ್ಯತೆ ಇಲ್ಲ. ಎನ್ಐವಿ ವರದಿಯ ನಂತರ ನಿಖರವಾಗಿ ಹೇಳಲು ಸಾಧ್ಯ. ಜಿಲ್ಲೆಯಲ್ಲಿ ಸೆಪ್ಟೆಂಬರ್‌ 22ರಿಂದ ಈವರೆಗೆ 12 ಜನರಲ್ಲಿ ಶಂಕಿತ ಎಚ್‌1ಎನ್‌1 ಸೋಂಕು ಕಾಣಿಸಿಕೊಂಡಿದೆ. ಒಬ್ಬ ರೋಗಿಯಲ್ಲಿ ಮಾತ್ರ ಎಚ್‌1ಎನ್‌1 ಸೋಂಕು ಪತ್ತೆಯಾಗಿದೆ. ಇಬ್ಬರ ವರದಿಗಳು ಬರಬೇಕಿದೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಸೋಂಕಿತ ರೋಗಿಗಳು ಗುಣಮುಖರಾಗಿದ್ದಾರೆ’ ಎಂದು ಹೇಳಿದ್ದಾರೆ.

‘ಎಚ್‌1ಎನ್‌1 ಸೋಂಕು ಕಾಣಿಸಿಕೊಂಡ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ವಿಜಯಪುರದಲ್ಲಿ ಹಾಗೂ ನೌಬಾದ್‌ನ ಶಿಕ್ಷಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ’ ಎಂದು ತಿಳಿಸಿದ್ದಾರೆ.

‘ಭಾಲ್ಕಿ ತಾಲ್ಲೂಕಿನ ಹಲಸಿತೂಗಾಂವ ಹಾಗೂ ಪಾಂಡ್ರಿಯಲ್ಲಿ ಶಂಕಿತ ಎಚ್‌1ಎನ್‌1 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರ ವೈದ್ಯಕೀಯ ಪರೀಕ್ಷೆ ನಡೆಸಿ ಎಲ್ಲರಿಗೂ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಹೇಳಿದ್ದಾರೆ.

ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಬೀದರ್‌ ನಗರದ ಬ್ರಿಮ್ಸ್‌ನ ಕೊಠಡಿ ಸಂಖ್ಯೆ 8 ರಲ್ಲಿ 5 ಹಾಸಿಗೆಗಳ ವಾರ್ಡ್‌ ಗೊತ್ತುಪಡಿಸಿ ಚಿಕಿತ್ಸೆಗೆ ಅಗತ್ಯವಿರುವ ಮಾತ್ರೆ, ಔಷಧ ಹಾಗೂ ಇನ್ನಿತರ ವೈದ್ಯಕೀಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !