ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ರಸಿಕರ ಮೈಮರೆಸುವ ರಮೇಶ ಕೊಳಾರ

ಗಾಯನಕ್ಕೂ, ಸಂಗೀತಕ್ಕೂ ಸೈ
Last Updated 5 ಜನವರಿ 2019, 20:00 IST
ಅಕ್ಷರ ಗಾತ್ರ

ಬೀದರ್: ಕಲಾ ರಸಿಕರ ಮೈಮರೆಸುವ ಅಪರೂಪದ ಗಾಯಕ. ಗಾಯನ ಇರಲಿ, ಸಂಗೀತ ಪರಿಕರಗಳನ್ನು ನುಡಿಸುವುದೇ ಇರಲಿ ಶ್ರೋತೃಗಳ ನರನಾಡಿಗಳು ರೋಮಾಂಚನಗೊಳ್ಳುವಂತೆ ಮಾಡುವ ಸಂಗೀತ ಮಾಂತ್ರಿಕ. ಅನೇಕ ಸಂಗೀತ ದಿಗ್ಗಜರಿಂದ ಬೆನ್ನು ತಟ್ಟಿಸಿಕೊಂಡ ಅಪ್ಪಟ ಗ್ರಾಮೀಣ ಕಲಾವಿದ. ಬೀದರ್‌ ತಾಲ್ಲೂಕಿನ ಕೊಳಾರ(ಬಿ) ಗ್ರಾಮದ ರಮೇಶ ಕೊಳಾರ ಅವರ ಪ್ರತಿಭೆಯ ಬಗ್ಗೆ ಹೇಳಲು ಹೊರಟರೆ ಶಬ್ದಗಳೇ ಸಾಲವು.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯಲ್ಲಿ ಅಜ್ಜ ರಾಮಣ್ಣ ಬೇಂದ್ರೆ ಶಹನಾಯ್‌, ಕ್ಲಾರಿನಿಯೊಟ್, ಹಾರ್ಮೋನಿಯಂ ಹಾಗೂ ತಬಲಾ ವಾದನದಲ್ಲಿ ಸಿದ್ಧ ಹಸ್ತರಾಗಿದ್ದರು. ಇದೇ ರಮೇಶ ಅವರಿಗೆ ಸಂಗೀತದತ್ತ ಹೊರಳಲು ಪ್ರೇರಣೆಯಾಯಿತು. ಅವರಿಗೆ ತಾತನೇ ಸಂಗೀತದ ಮೊದಲ ಗುರು.

ತಂದೆ ಪುತ್ರಪ್ಪ ಕೊಳಾರದಲ್ಲಿ ಬಡಿಗತನದ ಕೆಲಸ ಮಾಡುತ್ತಿದ್ದರು. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ನಂತರ ಪ್ರೌಢ ಶಾಲೆಗೆ ಬೀದರ್‌ಗೆ ಬರಬೇಕಾಯಿತು. ಬೀದರ್‌ನಲ್ಲಿ ಪಂಡಿತ ಸುನೀಲಕುಮಾರ ವೈದ್ಯ, ಈಶ್ವರ ಪಾಂಚಾಳ ಹಾಗೂ ವೈಕುಂಠ ದತ್ತ ಮಹಾರಾಜ್‌ ಬಳಿ ಸಂಗೀತ ಕಲಿತರು. ನಂತರ ಹೈದರಾಬಾದ್‌ನ ಉಸ್ತಾದ್‌ ನಜಮೋದ್ದಿನ್‌ ಜಾವೇದ್‌ ಖಾದ್ರಿ ಅವರಲ್ಲಿ ಸಂಗೀತದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದರು. ತದನಂತರ ಕೊಲ್ಕತ್ತಾಗೆ ತೆರಳಿ ಅಂತರರಾಷ್ಟ್ರೀಯ ಕಲಾವಿದ ಉಸ್ತಾದ್‌ ರಾಸೀದ್‌ ಖಾನ್‌ ಬಳಿ ಸಂಗೀತ ಅಭ್ಯಾಸ ಮಾಡಿ ಸಂಗೀತದಲ್ಲಿ ‘ಬಿ+’ ಗ್ರೇಡ್‌ ಪಡೆದರು.

ಕೊಲ್ಕತ್ತಾದ ರಾಮಪುರ ಸಾಸ್ವಾನ್‌ ಘರಣಾ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿರುವ ಇವರು ಹಾರ್ಮೋನಿಯಂ, ಸ್ವರಮಂಡಲ ಹಾಗೂ ತಬಲಾ ವಾದನ ಮಾಡುತ್ತಾರೆ. ಶಾಸ್ತ್ರೀಯ ಗಾಯನ, ಗಜಲ್‌, ಸುಗಮ ಸಂಗೀತ ಹಾಗೂ ಭಕ್ತಿಗೀತೆ ಗಾಯನದ ಮೂಲಕ ಜಿಲ್ಲೆಯ ಜನರ ಮನೆ ಮಾತಾಗಿದ್ದಾರೆ. ಬೀದರ್ ತಾಲ್ಲೂಕಿನ ತಾಜಲಾಪುರ ಹಾಗೂ ಹುಮನಾಬಾದ್‌ನ ಮಾಣಿಕನಗರದಲ್ಲಿ ಸಂಗೀತ ದರ್ಬಾರ್ ನಡೆಸಿದ್ದಾರೆ. ಇವರ ಮಾಂತ್ರಿಕ ರಾಗದೆಳೆಗೆ ತಲೆದೂಗಿಸಿ ಆಯೋಜಕರು ತಂಜಾವೂರ, ಹೈದರಾಬಾದ್, ಮುಂಬೈ, ಲಾತೂರ್‌, ಬೆಂಗಳೂರು, ಗದಗ, ಕಲಬುರ್ಗಿಯಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಇವರು ಸಂಗೀತ ಕ್ಷೇತ್ರದಲ್ಲಿ 30 ವರ್ಷ ಗಳಿಂದ ತೊಡಗಿಸಿಕೊಂಡಿದ್ದಾರೆ.

‘ಆಡಿಯೊ ಪ್ಲೇ ಮಾಡಿ ಹಾಡುವ ವಿಧಾನದಿಂದ ಸಂಗೀತಕ್ಕೆ ಕುತ್ತು ಬಂದಿದೆ. ಸಂಗೀತ ಪರಿಕರಗಳನ್ನು ನುಡಿಸುವವರು ಮೂಲೆಗುಂಪಾಗಿದ್ದಾರೆ. ಪ್ರತಿಯೊಂದು ವಾದ್ಯಕ್ಕೂ ಅದರದ್ದೇ ಆದ ಸ್ವರ ಇದೆ. ಆಡಿಯೊ ಪ್ಲೇಗಳಲ್ಲಿ ಅದನ್ನು ಗುರುತಿಸಲಾಗದು. ಕಲಾವಿದರನ್ನು ಉಳಿಸುವ ಮೂಲಕ ಸಂಗೀತ ಉಳಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ರಮೇಶ ಕೊಳಾರ.

‘ಪರಂಪರೆ ನಗರದಲ್ಲಿ ಶಾಸ್ತ್ರೀಯ ಸಂಗೀತ ನೆಲೆಗೊಳ್ಳುವಂತೆ ಮಾಡುವುದು, ಭಾರತೀಯ ವಾದ್ಯಪರಿಕರಗಳ ಮಹತ್ವ ಕುರಿತು ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಹಾಗೂ ಸಂಗೀತ ವಿದ್ಯಾರ್ಥಿಗಳನ್ನು ಸೃಷ್ಟಿಸುವುದು ನನ್ನ ಗುರಿಯಾಗಿದೆ’ ಎಂದು ಹೇಳುತ್ತಾರೆ.

ಹೊರ ರಾಜ್ಯದವರೇ ಗುರುತಿಸಿದರು..
ಬೀದರ್‌:
ಸಂಗೀತ ಕಲಾವಿದ ರಮೇಶ ಕೊಳಾರ ಅವರಿಗೆ ಹೊರ ರಾಜ್ಯಗಳಲ್ಲೇ ಹೆಚ್ಚಿನ ಅವಕಾಶಗಳು ದೊರೆತಿವೆ. ಪ್ರಶಸ್ತಿಗಳೂ ಬಂದಿವೆ.

1995ರಲ್ಲಿ ಕರ್ನಾಟಕ ರಾಜ್ಯ ಯುವ ಉತ್ಸವ, 1996ರಲ್ಲಿ ಕೊಲ್ಕತ್ತಾದಲ್ಲಿ ರಾಷ್ಟ್ರೀಯ ಯುವ ಉತ್ಸವ, 2006ರಲ್ಲಿ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 2007ರಲ್ಲಿ ಬಸವಕಲ್ಯಾಣದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ, 2008ರಲ್ಲಿ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಉತ್ಸವ, 2014ರಲ್ಲಿ ದೂರದರ್ಶನ ಹಾಗೂ 2017ರಲ್ಲಿ ಬೀದರ್‌ನಲ್ಲಿ ನಡೆದ ರಾಜ್ಯ ಮಟ್ಟದ ಜನಪರ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಸಂಗೀತ ಶಿಕ್ಷಣ
ಬೀದರ್‌:
2009ರಲ್ಲಿ ನಗರದಲ್ಲಿ ಪ್ರಗತಿ ಸಂಗೀತ ವಿದ್ಯಾಲಯ ಆರಂಭಿಸಿ 82 ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ನಗರದಲ್ಲಿ ಸಂಗೀತ ವಿದ್ಯಾಲಯ ತೆರೆದರೂ ಈಗಲೂ ಕೊಳಾರ ಗ್ರಾಮದಲ್ಲೇ ವಾಸವಾಗಿದ್ದಾರೆ. ಸಂಗೀತ ಆಸಕ್ತರು ತಮ್ಮ ಮಕ್ಕಳನ್ನು ಇವರ ಬಳಿಯೇ ಸಂಗೀತ ಅಧ್ಯಯನಕ್ಕೆ ಕಳಿಸಿಕೊಡುತ್ತಿದ್ದಾರೆ.

ರಮೇಶ ಕೊಳಾರ ಅವರ ಮೊಬೈಲ್: 83101 81721 ಅಥವಾ 98800 85953 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT