ಶನಿವಾರ, ಡಿಸೆಂಬರ್ 14, 2019
21 °C
ವರ್ಷದಲ್ಲಿ 33 ಸಾವಿರ ಮಹಿಳೆಯರ ಮೇಲೆ ಅತ್ಯಾಚಾರ

ಅಪರಾಧಿಗಳಿಗೆ ಆರು ತಿಂಗಳಲ್ಲಿ ಶಿಕ್ಷೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ದೇಶದಲ್ಲಿ ನಿತ್ಯ ಸರಾಸರಿ 92 ಹಾಗೂ ವರ್ಷದಲ್ಲಿ 33 ಸಾವಿರ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹಲವು ಕಾರಣಗಳಿಂದಾಗಿ ಕೇವಲ ಶೇಕಡ 25 ರಷ್ಟು ಅಪರಾಧಿಗಳಿಗೆ ಮಾತ್ರ ಶಿಕ್ಷೆ ಆಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರಿಯೆ ಆರು ತಿಂಗಳಲ್ಲೇ ಪೂರ್ಣಗೊಂಡು ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಅಂದಾಗ ಮಾತ್ರ ಅತ್ಯಾಚಾರದಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಹೇಳಿದರು.

‘ಹೈದರಾಬಾದ್‌ನಲ್ಲಿ ಪಶು ವೈದ್ಯೆ ಹಾಗೂ ಚಿಂಚೋಳಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಅಮಾನವೀಯ. ಇವು ಇಡೀ ಮನುಕುಲ ನಾಚಿಕೆ ಪಡುವಂತಹ ಘಟನೆಗಳಾಗಿವೆ’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ದೇಶದಲ್ಲಿ ಕಠಿಣ ಕಾನೂನುಗಳಿದ್ದರೂ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ. ನ್ಯಾಯಾಲಯ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಅಪರಾಧಿಗಳಿಗೆ ಭಯವೇ ಇಲ್ಲವಾಗಿದೆ. ಆರು ತಿಂಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ ಕಾನೂನು ಭಯ ಇರಲಿದೆ. ಈ ದಿಸೆಯಲ್ಲಿ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಾತಿಯ ಮೇಲೆ ಹಗಲು ದರೋಡೆ: ‘ಪರಿಶಿಷ್ಟ ಜಾತಿಯ ಮೇಲೆ ಹಗಲು ದರೋಡೆ ನಡೆದಿದೆ. ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸರಿಯಾಗಿ ಪಂಚನಾಮೆ ನಡೆಸದೇ ಅನೇಕ ಜಾತಿಗಳಿಗೆ ಜಾತಿ ಪ್ರಮಾಣಪತ್ರ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಅಸ್ಪೃಶ್ಯರಲ್ಲದವರೂ ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಕ್ಕೆ ಬರುವ ರಾಜಕಾರಣಿಗಳು ರಾಜಕೀಯ ಕಾರಣಗಳಿಗಾಗಿ ಆದೇಶ ಮಾಡುತ್ತಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಿದ್ದ ಹಣವನ್ನು ಮೆಟ್ರೊ ರೈಲಿಗೆ ಬಳಸಲಾಗಿದೆ. ಅಧಿಕಾರಿಗಳು ಎಸ್‌ಇಪಿಟಿ ಅನುದಾನವನ್ನೂ ಬಳಸುತ್ತಿಲ್ಲ. ಪರಿಶಿಷ್ಟ ಸಮುದಾಯವನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಕನಿಷ್ಠ ಜಾತಿಯ ವ್ಯಕ್ತಿಗಳು ಶ್ರೀಮಂತರಾದರೂ ಸಮಾಜದಲ್ಲಿ ಅವರಿಗೆ ಗೌರವ ದೊರೆಯುವುದಿಲ್ಲ. ಕೇಂದ್ರ ಸರ್ಕಾರ ಕನಿಷ್ಠ ಜಾತಿಯಲ್ಲಿನ ಶ್ರೀಮಂತರಿಗೆ ಮೀಸಲಾತಿ ಸಿಗದಂತೆ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಹೇಳಿದರು.

‘ಬಿಜೆಪಿ, ಪರಿಶಿಷ್ಟರ ವಿಚಾರದಲ್ಲಿ ಮಾತನಾಡುತ್ತಿರುವುದೇ ಬೇರೆ, ಮಾಡುತ್ತಿರುವುದೇ ಬೇರೆ’ ಎಂದು ತಿಳಿಸಿದರು.

ಕೆಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ರಾಜಕುಮಾರ ಮೂಲಭಾರತಿ, ಮಹೇಶ ಕಾಳೆ, ಮಹೇಶ ಗೋರನಾಳಕರ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು