ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಕ್ರಮ

ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ
Last Updated 15 ಜುಲೈ 2019, 15:23 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಕಾಯ್ದೆಯನ್ನು ಪಾಲಿಸದ ಹಾಗೂ ಪರವಾನಗಿ ಇಲ್ಲದೆ ನಡೆಸುವ ಸ್ಕ್ಯಾನಿಂಗ್ ಕೇಂದ್ರಗಳನ್ನು ಮುಚ್ಚಲು ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಸವ ಪೂರ್ವದಲ್ಲಿ ಮಗುವಿನ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕುರಿತ ಮಾಹಿತಿಯ ಬ್ಯಾನರ್‌ಗಳನ್ನು ನರ್ಸಿಂಗ್ ಹೋಮ್, ಸ್ಕ್ಯಾನಿಂಗ್ ಕೇಂದ್ರ ಹಾಗೂ ಆಸ್ಪತ್ರೆಗಳು ಸೇರಿ 421 ಕಡೆಗಳಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ, ‘ಜಿಲ್ಲೆಯ ಕೆಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿದಾಗ ಭ್ರೂಣಲಿಂಗ ಪತ್ತೆ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸದೇ ಇರುವುದು ಕಂಡು ಬಂದಿದೆ. ಅಂತಹ ಕೇಂದ್ರಗಳಿಗೆ ಕಾಯ್ದೆಯ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವ ಅಗತ್ಯವಿದೆ. ಸಾರ್ವಜನಿಕರಲ್ಲಿಯೂ ಕಾಯ್ದೆಯ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.

‘ಹೆಣ್ಣು ಮಕ್ಕಳು ಇರುವ ಪೋಷಕರ ಮೇಲೆ ನಿಗಾ ವಹಿಸಲು ಇಲಾಖೆಯಿಂದ ಬಾಲಿಕಾ ಹೆಸರಿನ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಹೆಣ್ಣು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಪಾಲಕರಿಗೆ ಪ್ರೇರಣೆ ನೀಡಲಾಗುವುದು’ ಎಂದು ಹೇಳಿದರು.

ಸಹಯೋಗ ಸ್ವಯಂ ಸಂಸ್ಥೆಯ ಕವಿತಾ ಹುಷಾರೆ, ‘ಭ್ರೂಣಲಿಂಗ ಪತ್ತೆ ಮಾಡುವುದು ತಪ್ಪು ಎನ್ನುವ ಸಂದೇಶ ಎಲ್ಲರಿಗೂ ತಲುಪಬೇಕು. ಔರಾದ್ ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿರುವ ಕಾರಣ ಮರಾಠಿ ಮತ್ತು ಹಿಂದಿ ಭಾಷೆಯಲ್ಲೂ ಜಾಗೃತಿ ಬ್ಯಾನರ್‌ಗಳನ್ನು ಹಾಕಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಗೋಡೆ ಬರಹದ ಮೂಲಕ ಭ್ರೂಣಲಿಂಗ ಪತ್ತೆ ಕಾಯ್ದೆಯ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಸಭೆಯಲ್ಲಿ ಮಕ್ಕಳ ಮಾರಾಟದ ಬಗ್ಗೆಯೂ ಚರ್ಚೆ ನಡೆಯಿತು. ಮಕ್ಕಳ ಸಾಗಣೆ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಮಕ್ಕಳ ಮಾರಾಟ ಅಪರಾಧ ಎನ್ನುವ ಕುರಿತು ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಕೂಡ ಎಲ್ಲೆಡೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾನೂನು ಸಲಹೆಗಾರರಾದ ಶಕುಂತಲಾ ತಂಬಾಕೆ, ಸ್ತ್ರೀರೋಗ ತಜ್ಞೆ ಡಾ.ಉಮಾ ದೇಶಮುಖ, ಮಕ್ಕಳ ತಜ್ಞ ಡಾ.ಸಿ.ಆನಂದರಾವ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT