ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ಹುದ್ದೆಗೆ 11 ಅಭ್ಯರ್ಥಿಗಳ ಆಯ್ಕೆ

ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್ ಎಕ್ಸ್‌ಲೆನ್ಸ್‌ನಲ್ಲಿ ಸನ್ಮಾನ
Last Updated 26 ಡಿಸೆಂಬರ್ 2019, 16:26 IST
ಅಕ್ಷರ ಗಾತ್ರ

ಬೀದರ್: ‘ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್ ಎಕ್ಸ್‌ಲೆನ್ಸ್‌ ಕೇಂದ್ರದಲ್ಲಿ ತರಬೇತಿ ಪಡೆದ 11 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ಶಾಲೆ ಪದವೀಧರ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ’ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ತಿಳಿಸಿದರು.

ಇಲ್ಲಿಯ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಗುರುವಾರ ಶಿಕ್ಷಕರಾಗಿ ಆಯ್ಕೆಯಾದ ಸಾಧಕರಿಗೆ ಸನ್ಮಾನ ಹಾಗೂ ಟಿಇಟಿ ಕುರಿತ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಟಿಇಟಿ ಪಾಸಾಗಿರುವ ಒಟ್ಟು 27 ಅಭ್ಯರ್ಥಿಗಳು ಅಕಾಡೆಮಿಯಲ್ಲಿ ಎರಡು ತಿಂಗಳ ತರಬೇತಿ ಪಡೆದಿದ್ದರು. ಈ ಪೈಕಿ ಸಿಇಟಿಯಲ್ಲಿ 11 ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕದ ಭಾಗ್ಯ ಒಲಿದು ಬಂದಿದೆ. ಕಳೆದ ಸಲ ಟಿಇಟಿ ಪರೀಕ್ಷೆಯಲ್ಲೂ ಅಕಾಡೆಮಿಗೆ ಶೇ 46ರಷ್ಟು ಫಲಿತಾಂಶ ಬಂದಿತ್ತು’ ಎಂದು ಹೇಳಿದರು.

‘ಶಿಕ್ಷಕರಾಗಿ ಆಯ್ಕೆಯಾದ 11 ಅಭ್ಯರ್ಥಿಗಳಲ್ಲಿ ಸಮಾಜ ವಿಜ್ಞಾನದಲ್ಲಿ ರೇಖಾ ರಘುನಾಥ ಹಾಗೂ ಇಂಗ್ಲಿಷ್‌ನಲ್ಲಿ ಪೂಜಾ ಸ್ವಾಮಿ ಅವರು ಹೆಚ್ಚಿನ ಅಂಕ ಗಳಿಸಿ ಬೀದರ್ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಮಾಜ ವಿಜ್ಞಾನದಲ್ಲಿ ಎಸ್. ಲಕ್ಷ್ಮಿ, ಸುನಿತಾ, ಲಕ್ಷ್ಮೀಬಾಯಿ, ಸುರೇಖಾ, ಮೌಲಾನಬೀ, ಶಿವಕುಮಾರ ಹಾಗೂ ಇಂಗ್ಲಿಷ್‌ನಲ್ಲಿ ಎ. ಅಂಕಿತಾ, ವಿ. ಪೂಜಾ, ಸುವರ್ಣಾ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯ ಪ್ರತಿಭೆಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ವ ರೀತಿಯಿಂದ ಸಜ್ಜುಗೊಳಿಸಿ ಶೈಕ್ಷಣಿಕ ಸಾಧನೆ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಪ್ರಯತ್ನಿಸುತ್ತಿದೆ. ಮೊದಲ ಬ್ಯಾಚ್ ಟಿಇಟಿ ಹಾಗೂ ಶಿಕ್ಷಕರ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿರುವುದು ಖುಷಿ ತಂದಿದೆ’ ಎಂದರು.

‘ಜಿಲ್ಲೆಯ ಪ್ರತಿಭೆಗಳಿಗೆ ಕಾಡುತ್ತಿರುವ ಸೂಕ್ತ ತರಬೇತಿ, ಮಾರ್ಗದರ್ಶನದ ಕೊರತೆ ನೀಗಿಸುವ ಕೆಲಸ ವಿವೇಕಾನಂದ ಅಕಾಡೆಮಿ ಮಾಡುತ್ತಿದೆ. ವಿವಿಧ ವಿಷಯಗಳ 12ಕ್ಕೂ ಹೆಚ್ಚು ಪರಿಣತ ಬೋಧಕರು ಇಲ್ಲಿ ತರಬೇತಿ ಕೊಡುತ್ತಿದ್ದಾರೆ. ಟಿಇಟಿ, ಸಿಇಟಿಯಲ್ಲಿ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದೆ. ಜನವರಿ ಮೊದಲ ವಾರಿದಂದ ಮತ್ತೆ ಶಿಕ್ಷಕರ ನೇಮಕಾತಿ ಟಿಇಟಿ ತರಬೇತಿ ಆರಂಭವಾಗಲಿದೆ ಎಂದು ಹೇಳಿದರು.

ಸಿಇಟಿ ಪಾಸಾದ ರೇಖಾ, ಪೂಜಾ, ಲಕ್ಷ್ಮಿ ಮಾತನಾಡಿ, ಇಲ್ಲಿ ಸಿಕ್ಕ ಉತ್ತಮ ಪಾಠ, ಪ್ರೇರಣೆ ನೌಕರಿ ಕೊಟ್ಟು ಕನಸು ನನಸಾಗಿಸಿದೆ. ಗುರಿ ಹೇಗೆ ತಲುಪಬೇಕೆಂಬ ಶಿಕ್ಷಣ ಇಲ್ಲಿ ಸಿಕ್ಕಿದೆ. ಪಠ್ಯದ ಜತೆಗೆ ಉತ್ತಮ ಸಂಸ್ಕಾರ, ಮೌಲ್ಯ, ಅಧ್ಯಾತ್ಮ ಶಕ್ತಿಯ ಪಾಠವನ್ನೂ ಕಲಿತಿದ್ದೇವೆ’ ಎಂದು ಹೇಳಿದರು.

ಹಣಮಂತರಾವ್‌ ಪಾಟೀಲ, ಸಂಜೀವಕುಮಾರ ಮಾನೂರೆ, ಸೋಮಶೇಖರ, ಬೀರಗೊಂಡ, ಸಂದೀಪ, ವಿವೇಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT