ಬುಧವಾರ, ಸೆಪ್ಟೆಂಬರ್ 22, 2021
21 °C
ರೇಣುಕಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಮ್ಮದ್‌ ನಿಜಾಮುದ್ದಿನ್‌ ಹೇಳಿಕೆ

ಬೀದರ್‌: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬಿತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದು ರೇಣುಕಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಮ್ಮದ್‌ ನಿಜಾಮುದ್ದಿನ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಚಿದ್ರಿ ರಸ್ತೆಯಲ್ಲಿರುವ ಅಶ್ವಿನಿ ಫಂಕ್ಷನ್‌ ಹಾಲ್‌ನಲ್ಲಿ ಭಾನುವಾರ ನಡೆದ ಬೀದರ್‌ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮೌಲ್ಯಗಳ ಬಗೆಗೆ ಸರಿಯಾದ ತಿಳಿವಳಿಕೆ ನೀಡಬೇಕು’ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಿವಕುಮಾರ ಉಪ್ಪೆ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ, ಬೀದರ್ ತಾಲ್ಲೂಕು ಬಿಸಿಯೂಟ ಅಧಿಕಾರಿ ಗೀತಾ ಜಿ.
ಕ್ಷೇತ್ರ ಸಮನ್ವಯ ಅಧಿಕಾರಿ ವಿಜಯಕುಮಾರ ಬೆಮಳಗಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ವೆಂಕಟರಾವ್‌ ಡೊಂಬಾಳೆ ಇದ್ದರು.

‘ಸದೃಢ ರಾಷ್ಟ್ರ ನಿರ್ಮಾಣ: ಶಿಕ್ಷಕನ ಗುರಿ’
ಚಿಟಗುಪ್ಪ
: ‘ಶಿಕ್ಷಣ ಕ್ಷೇತ್ರಕ್ಕೆ ತತ್ವಜ್ಞಾನದ ಸುಜ್ಞಾನ ನೀಡಿದ ರಾಧಾಕೃಷ್ಣನ್‌ ಅವರು ಎಂದೆಂದಿಗೂ ಅವಿಸ್ಮರಣಿಯ’ ಎಂದು ಹಿರಿಯ ಶಿಕ್ಷಕ ವೈಜಿನಾಥ ನಾಸಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಿರ್ಣಾ ವಾಡಿ ಗ್ರಾಮದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಧಾಕೃಷ್ಣನ್‌ ಅವರ ಪ್ರೇರಣೆ ಶಿಕ್ಷಣ ಕ್ಷೇತ್ರಕ್ಕೆ ಸದಾ ಹಸಿರಾಗಿದೆ. ಭವ್ಯ ಸಧೃಡ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮುಖ್ಯ. ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪಿಸುವ ಕಾರ್ಯ ಶಿಕ್ಷಕರಿಂದ ನಡೆಯುತ್ತದೆ’ ಎಂದು ಅವರು ಹೇಳಿದರು.

ಮುತ್ತಂಗಿ: ತಾಲ್ಲೂಕಿನ ಮುತ್ತಂಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯಗುರು ಸಂಗಪ್ಪ, ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಮಂಗಲಗಿ: ತಾಲ್ಲೂಕಿನ ಮಂಗಲಗಿ ಗ್ರಾಮದ ನಂದಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಗುರು ಸುವರ್ಣಾ ಚೀನಕೇರಾ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಾಳಮಡಗಿ: ಗ್ರಾಮದ ಚಂದ್ರಶೇಖರ್‌ ಆಜಾದ್‌ ಯುವಜನ ಹಾಗೂ ಸಾಂಸ್ಕೃತಿಕ ಸಂಘದಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಅಂಬಾದಾಸ್‌ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉತ್ತಮ ವಗ್ಗೆನೊರ್‌, ಸುಧೀರ್‌, ಬಗ್ಗೇಶ್‌, ತುಕಾರಾಮ್‌, ಆಕಾಶ್‌ ಇತರರು ಪಾಲ್ಗೊಂಡಿದ್ದರು.

‘ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ’
ಭಾಲ್ಕಿ:
‘ಜ್ಞಾನ ಮನುಷ್ಯರನ್ನು ಮಹಾದೇವನನ್ನಾಗಿಸುತ್ತದೆ. ಹಾಗಾಗಿ, ಶಿಕ್ಷಕರು ಪುಸ್ತಕ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಹೇಳಿದರು.

ಪಟ್ಟಣದ ಪುರಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಾಚರಣೆಯಲ್ಲಿ ಅವರು ಮಾತನಾಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಂಸ್ಕೃತ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಹಾಗಾಗಿಯೇ ಅವರು ಶಿಕ್ಷಕರಾಗಿದ್ದುಕೊಂಡು ರಾಷ್ಟ್ರಾಧ್ಯಕ್ಷರಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಮಾತನಾಡಿ,‘ಪುರಸಭೆ ವತಿಯಿಂದ ಶಿಕ್ಷಣ ಇಲಾಖೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಮುಕ್ತ ಮನಸ್ಸಿನಿಂದ ಒದಗಿಸಿ ಕೊಡಲಾಗುವುದು’ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಪ್ಪ ಪಾಟೀಲ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಾಜಿ ಕಾಂಬಳೆ, ಕಾರ್ಯದರ್ಶಿ ದತ್ತು ಕಾಟಕರ್‌, ಅಶೋಕ ಕುಂಬಾರ, ಬಸವರಾಜ ದಾನಾ, ಇಸಿಒ ಜಯರಾಮ ಬಿರಾದಾರ, ಸಹದೇವ ಜಿ., ರಾಜಕುಮಾರ ಜೋಳದಾಪಕೆ, ಪ್ರಕಾಶ ರಾಠೋಡ, ಬಬನ ಬಿರಾದಾರ, ಭಗವಾನ ವಲಂಡೆ, ಗದಗೆಪ್ಪಾ ಪಾಟೀಲ, ವಸಂತ ಹುಣಸನಾಳೆ, ರತ್ನದೀಪ ಹುಲಸೂರೆ, ಬಸವರಾಜ ತೇಗಂಪೂರೆ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಕುಶನೂರೆ, ಐಜಿಕ ಬಂಗಾರೆ, ಹಣಮಂತ ಕಾರಾಮುಂಗೆ, ಸೋಮನಾಥ ಹೊಸಾಳೆ, ಘಾಳೆಪ್ಪಾ ನಾಗೂರೆ, ಜಯರಾಜ ದಾಬಶೆಟ್ಟಿ, ಗಿಪ್ಸನ್ ಕೋಟೆ, ಬಸವರಾಜ ಬಡದಾಳೆ, ಸಂತೊಷ ವಾಡೆ, ಶಕುಂತಲಾ ಸಾಲಮನಿ ಹಾಗೂ ಮಾಯಾದೇವಿ ಗೋಖಲೆ ಇದ್ದರು.

ಗಿಪ್ಸನ್ ಕೋಟೆ ಸಂಗಡಿಗರು ನಾಡಗೀತೆ, ವಚನ ಗಾಯನ, ರೈತ ಗೀತೆ, ರಾಷ್ಟ್ರ ಗೀತೆ ಹಾಡಿದರು. ಎಚ್‌.ಎಂ.ಹರನಾಳ ಸ್ವಾಗತಿಸಿದರು. ರಾಜಕುಮಾರ ಸಾಲಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ವಂದಿಸಿದರು.

‘ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು’
ಹುಮನಾಬಾದ್:
ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಮುಖ್ಯ ಶಿಕ್ಷಕ ಕುಪೇಂದ್ರ ಶಾಸ್ತ್ರಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.

ನಂತರ ಮಾತನಾಡಿ, ‘ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ’ ಎಂದು ಅವರು ಹೇಳಿದರು.

‘ಭವಿಷ್ಯ ನಿರ್ಮಾಣದ ರೂವಾರಿ’
ಔರಾದ್:
‘ಶಿಕ್ಷಕ ವ್ಯಕ್ತಿ ಅಲ್ಲ. ಅದ್ಭುತ ಶಕ್ತಿ. ಭವಿಷ್ಯ ನಿರ್ಮಾಣದ ರೂವಾರಿಗಳು’ ಎಂದು ಸಂಪನ್ಮೂಲ ಶಿಕ್ಷಕ ಶಾಮಸುಂದರ ಖಾನಾಪುರಕರ್ ಹೇಳಿದರು.

ತಾಲ್ಲೂಕು ಆಡಳಿತ ಭಾನುವಾರ ಇಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶಿಕ್ಷಣ ಅಂದರೆ ಕೇವಲ ಜ್ಞಾನ ಪಡೆಯುವುದು, ನೌಕರಿ ಹಿಡಿಯುವುದು ಅಲ್ಲ. ಅದು ವ್ಯಕ್ತಿತ್ವ ನಿರ್ಮಾಣ ಕಾರ್ಯವೂ ಹೌದು. ಇಂಥ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಬಹುದೊಡ್ಡ ಹೊಣೆಗಾರಿಕೆ ಇದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಮಾತನಾಡಿ,‘ಶಿಕ್ಷಕರ ಹುದ್ದೆ ಅತ್ಯಂತ ಪವಿತ್ರವಾದದ್ದು, ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸುದೈವ’ ಎಂದರು.

ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಘಾಟೆ ‘ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಶಿಕ್ಷಕ ಸಮುದಾಯಕ್ಕೆ ವಿಶೇಷ ಗೌರವವಿದೆ. ಶಿಕ್ಷಕರ ಸಮಸ್ಯೆ ಪರಿಹರಿಸಲು ನೌಕರ ಸಂಘ ಹೆಚ್ಚಿನ ಕಾಳಜಿ ವಹಿಸುತ್ತಿದೆ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ್, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಮುಖ್ಯಾಧಿಕಾರಿ ರವಿ, ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸುನೀಲ ಕಸ್ತೂರೆ, ಸೂರ್ಯಕಾಂತ ಸಿಂಗೆ, ಪಂಢರಿ ಆಡೆ, ಗಜಾನನ ಮಳ್ಳಾ ಮತ್ತಿತರರು ಇದ್ದರು. ಶಾಲಿವಾನ ಉದಗಿರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

‘ಶೀಘ್ರ ಗುರುಭವನ ನಿರ್ಮಾಣ’
ಬಸವಕಲ್ಯಾಣ:
‘ನಗರದ ಗುರುಭವನದ ಕಾಮಗಾರಿಗಾಗಿ ₹2 ಕೋಟಿ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಯವರಿಗೆ ವಿನಂತಿಸಿ ಶೀಘ್ರದಲ್ಲಿ ಕೆಲಸ ಆರಂಭಿಸುತ್ತೇನೆ’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ.

ನಗರದ ಸಾಹಿಲ್ ಸಭಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನೇತೃತ್ವ ವಹಿಸಿದ್ದ ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ,‘ಶಿಕ್ಷಕ ವೃತ್ತಿ ಪವಿತ್ರವಾದದ್ದು’ ಎಂದು ಅವರು ಹೇಳಿದರು.

ಉಪ ವಿಭಾಗಾಧಿಕಾರಿ ಸಾವಿತ್ರಿ ಬಿರಾದಾರ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥ ಪತಂಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ ಹಾಗೂ ಮಹೇಶ ಮುಳೆ ಮಾತನಾಡಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂತೋಷ ಬಿರಾದಾರ, ಮಮತಾ ಜಡಗೆ, ಸಂತೋಷ ಸಾಗರ, ಮಲ್ಲಪ್ಪ ಕೋಟೆ, ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ನೆಲ್ಲಗಿ, ವಿಶ್ವನಾಥ ಮುಕ್ತಾ, ಕುಪ್ಪಣ್ಣ ಯಾಚೆ, ಭಾನುದಾಸ ಪಾಟೀಲ, ಕಲ್ಪನಾ ಶೀಲವಂತ, ಬಸವರಾಜ ಮಠಪತಿ, ಶಿವಾಜಿರಾವ್ ಪಾಟೀಲ ಮೊದಲಾದವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ನಾಹೀದಾ ಸುಲ್ತಾನಾ, ಹುಲಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಂಜಯಕುಮಾರ ಕಾಂಗೆ, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಅಂಬಾದಾಸ ಜಮಾದಾರ ಪಾಲ್ಗೊಂಡಿದ್ದರು.

ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕರಿಗೆ ಮನವಿಪತ್ರ ಸಲ್ಲಿಸಲಾಯಿತು. ಡಾ.ಮಾರುತಿ ಪೂಜಾರಿ, ನೀಲಯ್ಯ ಹಿರೇಮಠ, ರಾಮಚಂದ್ರ ಕಲ್ಲಹಿಪ್ಪರ್ಗಾ ಸಂಗೀತ ಪ್ರಸ್ತುತಪಡಿಸಿದರು.

ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.