ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಶಿಕ್ಷಕರ ‘ಗುರುಭವನ’ಕ್ಕೆ ಹೊಸರೂಪ

ಅನುದಾನ ಒದಗಿಸಿ ಕಾಮಗಾರಿ ಶೀಘ್ರ ಪೂರ್ಣಕ್ಕೆ ಶಾಸಕ ಶರಣು ಸಲಗರ ಭರವಸೆ
Last Updated 30 ಮೇ 2021, 3:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ಬಿಇಒ ಕಚೇರಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುರುಭವನಕ್ಕೆ ಹೊಸರೂಪ ನೀಡಲು ಸಿದ್ಧತೆ ನಡೆದಿದೆ.

ಹಳೆಯ ಕಟ್ಟಡ ಕೆಡವಿ ಹೊಸದನ್ನು ನಿರ್ಮಿಸುವುದಕ್ಕೆ ಅನುದಾನ ಒದಗಿಸಿ ಆದಷ್ಟು ಬೇಗನೆ ಕೆಲಸ ಪೂರ್ಣ ಗೊಳಿಸುವುದಕ್ಕೆ ಶಾಸಕ ಶರಣು ಸಲಗರ ಒಪ್ಪಿದ್ದರಿಂದ ಶಿಕ್ಷಕರ 35 ವರ್ಷಗಳ ಕನಸು ನನಸಾಗುವ ಹಂತದಲ್ಲಿದೆ. ಈ ಸ್ಥಳದಲ್ಲಿ ಕೆಳಗಡೆ ಅಂಗಡಿಗಳನ್ನು ಕಟ್ಟಿ ಮೊದಲ ಅಂತಸ್ತಿನಲ್ಲಿ ಚಿಕ್ಕದಾದ ಸಭಾಭವನ ನಿರ್ಮಿಸಿ ಶಿಕ್ಷಕರ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಲಾಗಿತ್ತು. ಅಲ್ಲದೆ ಇದರ ಪಕ್ಕದಲ್ಲಿ ಸಂಘದ ಕಚೇರಿಗಾಗಿ ಕೊಠಡಿಯೂ ನಿರ್ಮಾಣ ಮಾಡಲಾಗಿದೆ.

ಆದರೆ, ಇಲ್ಲಿ ಬರೀ 40-50 ಜನರು ಕುಳಿತುಕೊಳ್ಳುವುದಕ್ಕೆ ಮಾತ್ರ ಅವಕಾಶ ಇದ್ದುದರಿಂದ ಕೆಲ ವರ್ಷಗಳ ಬಳಿಕ ಇದರ ಹಿಂದುಗಡೆ ದೊಡ್ಡ ಸಭಾಂಗಣ ಕಟ್ಟುವುದಕ್ಕೆ ಆರಂಭಿಸಲಾಯಿತು. ಇದರ ಮೊದಲ ಅಂತಸ್ತಿನಲ್ಲಿ ಅತಿಥಿಗಳ ನಿವಾಸಕ್ಕೆ ಕೆಲ ಕೊಠಡಿಗಳನ್ನು ಕಟ್ಟಿ ಉಳಿದ ಜಾಗವನ್ನು ಖಾಲಿ ಬಿಟ್ಟು ಅಲ್ಲಿಯೂ ಜನರು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಇಷ್ಟೆಲ್ಲ ಆದರೂ, ಛಾವಣಿ ಹಾಕುವ ಕೆಲಸ ನಡೆಯಲಿಲ್ಲ. ಹಣದ ಕೊರತೆ ಆಗಿದ್ದರಿಂದ ನಂತರದಲ್ಲಿ ಕೆಲ ವರ್ಷಗಳವರೆಗೆ ಕಾಮಗಾರಿ ಕೈಗೊಳ್ಳಲಾಗಿಲ್ಲ. ತಾಲ್ಲೂಕಿನಲ್ಲಿ 2000ಕ್ಕಿಂತ ಹೆಚ್ಚಿನ ಶಿಕ್ಷಕರು ಇದ್ದು ಅವರಿಂದ ವಂತಿಗೆ ಸಂಗ್ರಹಿಸಿ ಕಟ್ಟಡ ಪೂರ್ಣಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದ್ದರೂ ಪ್ರಯೋಜನ ಆಗಲಿಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಆಯೋಜಿಸುವ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಬೇಡಿಕೆಗಳ ಪಟ್ಟಿಯಲ್ಲಿ ಈ ಕಟ್ಟಡಕ್ಕೆ ಅನುದಾನ ನೀಡಬೇಕು ಎಂಬ ವಿಷಯ ಇದ್ದೇ ಇರುತ್ತಿತ್ತು. ಜನಪ್ರತಿನಿಧಿಗಳು ಕೂಡ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿ ಕೈತೊಳೆದುಕೊಳ್ಳುತ್ತ ಬಂದಿದ್ದಾರೆ. ಹೀಗಾಗಿ ಕಟ್ಟಡ ಹಾಳಾಗುವ ಸ್ಥಿತಿಗೆ ತಲುಪಿದೆ.

ಆದ್ದರಿಂದ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಸಕ ಶರಣು ಸಲಗರ ಅವರನ್ನು ಭೇಟಿಯಾಗಿ ಅರ್ಧಕ್ಕೆ ನಿಂತಿರುವ ಕಟ್ಟಡದ ಕೆಲಸ ಪೂರ್ಣಗೊಳಿಸಿ ಇಲ್ಲವೇ ಹೊಸ ಕಟ್ಟಡ ನಿರ್ಮಿಸಿ ಎಂದು ಒತ್ತಾಯಿಸಿದ್ದಾರೆ. ಈ ಕಾರಣ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೊಸ ವಿನ್ಯಾಸದ ಸುಂದರ ಭವನ ನಿರ್ಮಿಸಿ ಕೊಡುವ ಆಶ್ವಾಸನೆ ನೀಡಿದ್ದಾರೆ.

‘ಬರೀ ಭರವಸೆ ಬೇಡ, ವರ್ಷದಲ್ಲಿ ಭವನ ನಿರ್ಮಿಸಿಕೊಡಿ. ಶಿಕ್ಷಕರ ಸಂಘದ ಚಟುವಟಿಕೆಗಳಿಗೆ ಕಚೇರಿ, ಸಭಾಂಗಣ ಹಾಗೂ ಶಿಕ್ಷಕರ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮ ನೆರವೇರಿಸುವಂತಾಗಲು ಭವ್ಯ ಕಲ್ಯಾಣ ಮಂಟಪ ಕಟ್ಟಿ ಕೊಡ ಬೇಕು ಎಂದು ಶಾಸಕರಿಗೆ ವಿನಂತಿಸಲಾ ಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥ ಪತಂಗೆ ಹೇಳಿದ್ದಾರೆ.

‘ಅಗತ್ಯ ಪ್ರಕ್ರಿಯೆ ಶೀಘ್ರ ಪೂರ್ಣ ಗೊಳಿಸಬೇಕು. ಸಂಘದವರೊಂದಿಗೆ ಚರ್ಚಿಸಿ ಕಟ್ಟಡದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಗುರುಭವನ ಸಮಿತಿ ಅಧ್ಯಕ್ಷರೂ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ ಅವರಿಗೆ ಶಾಸಕರು ಸಲಹೆ ನೀಡಿದ್ದಾರೆ’ ಎಂದು ಸಂಘದ ಪದಾಧಿಕಾರಿಗಳಾದ ರಮೇಶ ಉಮಾಪುರೆ, ಮಲ್ಲಿಕಾರ್ಜುನ ಮೇತ್ರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT