ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಹಾ ಸಮಿತಿ ಸಭೆಗೆ ಸದಸ್ಯರ ಬಹಿಷ್ಕಾರ

ಬಿಎಸ್‌ಎನ್‌ಎಲ್ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ
Last Updated 2 ಮಾರ್ಚ್ 2019, 13:56 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಶನಿವಾರ ಸಂಸದ ಭಗವಂತ ಖೂಬಾ ಗೈರು ಹಾಜರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷ ಕಳೆದರೂ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಸದಸ್ಯರಾದ ಸಂಗಮೇಶ ನಾಸಿಗಾರ ಹಾಗೂ ಸುಭಾಷ ಮಡಿವಾಳ ಸಭೆ ಬಹಿಷ್ಕರಿಸಿ ಹೊರ ನಡೆದರು.

ಸಭೆಯ ಆರಂಭದಲ್ಲಿ ಟಿಡಿಎಂ ಕಾಶೀನಾಥ ಕೊಂಡಾ ಅವರು ಸಲಹಾ ಸಮಿತಿಯ ಹಿಂದಿನ ನಡಾವಳಿಯನ್ನು ಓದಲು ಆರಂಭಿಸಿದರು. ಮಧ್ಯ ಪ್ರವೇಶಿಸಿದ ಸಂಗಮೇಶ ನಾಸಿಗಾರ ‘ನಾವು ಸಭೆಗೆ ನಿಮ್ಮ ಕತೆ ಕೇಳಲು ಬಂದಿಲ್ಲ. ಮೊಬೈಲ್ ಕರೆ ಕಡಿತ, ಲೈನ್‌ ಕ್ರಾಸ್‌ ತಡೆ ಹಾಗೂ ಗುಣಮಟ್ಟದ ಸೇವೆ ಕೊಡಲು ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಅನೇಕ ಮೊಬೈಲ್‌ ಟಾವರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯುತ್‌ ಕೈಕೊಟ್ಟಾಗ ಮೊಬೈಲ್‌ ಟವರ್‌ಗಳು ಸ್ಥಗಿತಗೊಳ್ಳುತ್ತಿವೆ. ಇಂಧನಕ್ಕೂ ಗತಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಗ್ರಾಹಕರ ಕುಂದು ಕೊರತೆಗಳ ಪ್ರಸ್ತಾಪ ಮಾಡಲಾಗಿತ್ತು. ಅಧಿಕಾರಿಗಳು ಈವರೆಗೆ ಒಂದು ಕೆಲಸವನ್ನೂ ಮಾಡಿಲ್ಲ. ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆಯೇ ಹೊರತು ನಿವಾರಣೆಯಾಗಿಲ್ಲ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರಕ್ಕೆ ಹೊಂದಿಕೊಂಡೇ ಇರುವ ನರಸಿಂಹ ಝರಣಾದಲ್ಲಿ ಮೊಬೈಲ್‌ ಟಾವರ್‌ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಐದು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಅಧಿಕಾರಿಗಳು ನೆಪ ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

‘ಬಿಎಸ್‌ಎನ್‌ಎಲ್‌ ಕಚೇರಿಗೆ ಅಧಿಕಾರಿಗಳೇ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಳ ಹಂತದ ಸಿಬ್ಬಂದಿ ಯಾರ ಮಾತನ್ನೂ ಆಲಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ’ ಎಂದು ನಾಸಿಗಾರ ದೂರಿದರು.

ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡದಿದ್ದಾಗ ಸಂಗಮೇಶ ನಾಸಿಗಾರ ಹಾಗೂ ಸುಭಾಷ ಮಡಿವಾಳ ಸಭೆಗೆ ಬಹಿಷ್ಕಾರ ಹಾಕಿ ಹೊರಗೆ ಹೋದರು. ಇನ್ನುಳಿದವರು ಹೆಚ್ಚು ಮಾತನಾಡಲು ಇಷ್ಟ ಪಡಲಿಲ್ಲ. ಹೀಗಾಗಿ ಕೆಲಹೊತ್ತಿನಲ್ಲೇ ಸಭೆ ಮುಕ್ತಾಯಗೊಂಡಿತು.

ಸದಸ್ಯರಾದ ಶ್ರೀಕಾಂತ ದಾನಿ, ಮಾಣಿಕರಾವ್ ಭಂಡಾರಿ, ಜೈಹಿಂದ ಶಿಂಧೆ ಹಾಗೂ ತಾತ್ಯಾರಾವ್ ಲಾಂಬೆ ಇದ್ದರು. ಜೆಟಿಒ ಕಾರ್ತಿಕ, ಬಾಬುರಾವ್‌ ರೆಡ್ಡಿ, ಜೈವರ್ಧನ್, ಶ್ರೀಕಾಂತ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT