ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ ತಾಪಮಾನ, ತತ್ತರಿಸಿದ ಜನ

Last Updated 31 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೀದರ್: ಚುನಾವಣೆ ಕಾವಿನ ಸಂದರ್ಭದಲ್ಲೇ ಸೂರ್ಯದೇವ ನಿಧಾನವಾಗಿ ಬೆಂಕಿಯನ್ನು ಉಗುಳಲು ಶುರು ಮಾಡಿದ್ದಾನೆ. ಬೆಳಗಾಗುತ್ತಲೇ ಪ್ರಖರವಾದ ಬಿಸಿಲು ಬೀಳುತ್ತಿದ್ದು, ಜನ ಮನೆಯಿಂದ ಹೊರಗೆ ಕಾಲಿಡದಂತಹ ವಾತಾವರಣ ಸೃಷ್ಟಿಯಾಗುತ್ತಿದೆ.

ಸುಡು ಬಿಸಿಲು ಹಾಗೂ ಹೆಚ್ಚಿದ ಧಗೆಯಿಂದ ಕಚೇರಿಯಲ್ಲಿ ಕೆಲಸ ಮಾಡುವವರಿಗೂ ಹಿಂಸೆ ಆಗುತ್ತಿರುವ ಕಾರಣ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ವೇಳೆಯನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಸಿಬ್ಬಂದಿ ಮಾತ್ರ ಅನಿವಾರ್ಯ ಕಾರಣಗಳಿಂದ ಎರಡು ಹಂತಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಾಂಕ್ರೀಟ್‌ ಕಟ್ಟಡಗಳು ಮಧ್ಯಾಹ್ನದ ವೇಳೆಗೆ ಕಾದ ಕಾವಲಿಯಂತಾಗುತ್ತಿವೆ. ಮನೆಯಿಂದ ಕಚೇರಿಗೆ ಹೋಗುವಾಗ ಬೆಂಕಿಯಲ್ಲಿ ಹಾಯ್ದು ಹೋದಂತೆ ಭಾಸವಾಗುತ್ತಿದೆ. ಬೆಂಕಿಯಂತಹ ಬಿಸಿಲು ಜನಮಾನಸಕ್ಕೆ ಬೇಸರ ತಂದಿದೆ.

ಬಿಸಿಲಿನಿಂದಾಗಿ ಗಾಳಿಯೂ ಬಿಸಿಯಾಗಿದೆ. ಶಾಲಾ ಕಾಲೇಜು ಹಾಗೂ ಕಚೇರಿಗಳಿಗೆ ಹೋಗುವ ಮಹಿಳೆಯರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಲೆಯ ಮೇಲೆ ತೊಯ್ದ ಬಟ್ಟೆ ಹಾಗೂ ಟೊಪ್ಪಿಗೆಯನ್ನು ಹಾಕಿಕೊಳ್ಳುತ್ತಿದ್ದಾರೆ. ಸಾಲದಕ್ಕೆ ಮಹಿಳೆಯರು ತಣ್ಣಿರಲ್ಲಿ ಕೊಡೆಯನ್ನು ಅದ್ದಿ, ಅದರ ನೆರಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದಾರೆ.

ದ್ವಿಚಕ್ರ ವಾಹನ ರಸ್ತೆ ಬದಿಗೆ ಇಟ್ಟು ಅಂಗಡಿಗಳಿಗೆ ಹೋಗಿ ಬರುವಷ್ಟರಲ್ಲಿ ವಿಪರೀತ ಬಿಸಿಯಾಗುತ್ತಿದೆ. ಅದರ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಕ್ಷಣ ಟ್ರಾಫಿಕ್‌ನಲ್ಲಿ ನಿಂತರೂ ಬಿಸಿಲ ಝಳಕ್ಕೆ ಅಪಾರ ಬೆವರು ಸುರಿಯುತ್ತಿದೆ.

‘ಮನೆ ಹಾಗೂ ಕಚೇರಿಗಳಲ್ಲಿ ಫ್ಯಾನ್‌ ಹಾಗೂ ಕೂಲರ್‌ಗಳು ದಿನದ 24 ಗಂಟೆಯೂ ತಿರುಗುತ್ತಲೇ ಇವೆ. ಐದು ನಿಮಿಷ ವಿದ್ಯುತ್‌ ಕೈಕೊಟ್ಟರೂ ಮೈಯಲ್ಲಾ ತೊಯ್ದು ತೊಪ್ಪೆಯಾಗುತ್ತಿದೆ’ ಎನ್ನುತ್ತಾರೆ ಝೆರಾಕ್ಸ್‌ ಅಂಗಡಿ ಮಾಲೀಕ ಶಿವಪುತ್ರ ಪಟಪಳ್ಳಿ.

ಬೆಂಗಳೂರು, ಮೈಸೂರು, ಮುಂಬೈ ಕರ್ನಾಟಕ ಪ್ರದೇಶದಿಂದ ವರ್ಗವಾಗಿ ಜಿಲ್ಲೆಗೆ ಬಂದ ಸರ್ಕಾರಿ ಕಚೇರಿ ಸಿಬ್ಬಂದಿ ಬಹಳಷ್ಟು ಗೋಳಾಡುತ್ತಿದ್ದಾರೆ. ರಜೆ ಹಾಕಿಕೊಂಡು ಊರಿಗೆ ಹೋಗಬೇಕೆಂದರೆ ಕೆಲವರಿಗೆ ಚುನಾವಣೆ ತೊಡಕಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪರೀಕ್ಷೆಗಳು ಮುಗಿದಿದ್ದು, ಪಾಲಕರು ತಮ್ಮ ಮಕ್ಕಳೊಂದಿಗೆ ಪ್ರವಾಸ ನೆಪದಲ್ಲಿ ದೂರದ ಜಿಲ್ಲೆಗಳಲ್ಲಿರುವ ಸಂಬಂಧಿಗಳ ಮನೆಗಳಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

‘ಮೂರು ದಿನಗಳಿಂದ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇದೆ. ಬಿಸಿಲಿನ ತಾಪ ಸೋಮವಾರದಿಂದ ಮತ್ತೆ ಹೆಚ್ಚಾಗಲಿದೆ’ ಎಂದು ಹವಾಮಾನ ತಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT