ಶನಿವಾರ, ಸೆಪ್ಟೆಂಬರ್ 25, 2021
26 °C
ಜಿಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆ: ಡಿಡಿಪಿಐ ಹೇಳಿಕೆ

ಬೀದರ್‌| ಶಾಲೆಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ: ಡಿಡಿಪಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವ ಪಠ್ಯಪುಸ್ತಕಗಳನ್ನು ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಕಾಲಕ್ಕೆ ಸರಬರಾಜು ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಜಿ. ಗಂಗಣ್ಣ ಸ್ವಾಮಿ ಹೇಳಿದರು.

ನಗರದ ಮೈಲೂರು ರಸ್ತೆಯಲ್ಲಿ ಇರುವ ಶಿವ ಛತ್ರಪತಿ ಸ್ಮಾರಕ ಸಮಿತಿ ಸಂಚಾಲಿತ ಜಿಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ 9ನೇ ಹಾಗೂ 10ನೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುಠ್ಯಪುಸ್ತಕ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭೌತಿಕ ತರಗತಿಗಳು ಪ್ರಾರಂಭವಾಗಲಿರುವ ಕಾರಣ 6,7 ಹಾಗೂ 8ನೇ ತರಗತಿ ಪಠ್ಯಪುಸ್ತಕಗಳನ್ನೂ ಸೋಮವಾರದ ಒಳಗೆ ಆಯಾ ಶಾಲೆಗಳಿಗೆ ತಲುಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಠ್ಯಪುಸ್ತಕಗಳ ಯಾವುದೇ ಕೊರತೆ ಇಲ್ಲ. ಹೀಗಾಗಿ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಅವರ ಪಾಲಕರಲ್ಲೂ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರತಿ ವರ್ಷವೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ಪಠ್ಯಪುಸ್ತಕಗಳನ್ನು ತರಬೇಕಾಗುತ್ತಿತ್ತು. ಡಿಡಿಪಿಐ ಅವರು ಈ ಬಾರಿ ಆಯಾ ಶಾಲೆಗಳಿಗೆ ನೇರವಾಗಿ ಪಠ್ಯಪುಸ್ತಕ ತಲುಪಿಸಲು ಕ್ರಮ ಕೈಗೊಂಡಿದ್ದರಿಂದ ಬಹಳ ಅನುಕೂಲವಾಗಿದೆ ಎಂದು ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ನುಡಿದರು.

ಕೋವಿಡ್ ನಡುವೆಯೂ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಉತ್ತಮವಾಗಿದೆ. ಸರಿಯಾದ ಸಮಯಕ್ಕೆ ಪಠ್ಯಪುಸ್ತಕ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ನೆರವಾಗಲಿದೆ ಎಂದು ಹೇಳಿದರು.

9ನೇ ತರಗತಿಯ 45 ಹಾಗೂ 10ನೇ ತರಗತಿಯ 41 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತವಾಗಿ ವಿತರಿಸಲಾಯಿತು.

ಮೈಲೂರು ಸಿಆರ್‍ಪಿ ವಿಜಯಕುಮಾರ ಗೌರೆ, ಶಿಕ್ಷಕರಾದ ಮಲ್ಲಿಕಾರ್ಜುನ ಬೆಂಬಳಗೆ, ವಾಸುದೇವ ರಾಠೋಡ್, ಅನಿಲಕುಮಾರ ಟೆಕೋಳೆ, ರಾಜಕುಮಾರ ಗಾದಗೆ, ಆನಂದ ಜಾಧವ್, ಮೋಹನ್ ಜೋಶಿ, ನಾಗರತ್ನ ಜಮಾದಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು