ಶುಕ್ರವಾರ, ಡಿಸೆಂಬರ್ 4, 2020
22 °C
ಕೌಠಾ ಬಸವಯೋಗ ಆಶ್ರಮದ ಬೆಲ್ದಾಳ ಸಿದ್ದರಾಮ ಶರಣರ ನುಡಿ

ಬಸವ ತತ್ವ ಯಾವುದೇ ಒಂದು ಸಮುದಾಯದ ಸೊತ್ತಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಬಸವ ತತ್ವ ಯಾವುದೇ ಒಂದು ಜಾತಿ, ಮತ, ಪಂಥ ಅಥವಾ ಒಂದು ಸಮುದಾಯದ ಸೊತ್ತಲ್ಲ. ಅದು ಎಲ್ಲ ಸಮುದಾಯಗಳನ್ನೊಳಗೊಂಡ ಜನಪರವಾದ ಚಿಂತನಶೀಲ ತತ್ವ’ ಎಂದು ಕೌಠಾ ಬಸವಯೋಗ ಆಶ್ರಮದ ಬೆಲ್ದಾಳ ಸಿದ್ದರಾಮ ಶರಣರು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ 28ನೆಯ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೋಷಿತ ಸಮುದಾಯದಲ್ಲಿ ಜನಿಸಿ ಬಾಲ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ ಅಸ್ಪೃಶ್ಯತೆ ಅವಮಾನಗಳನ್ನು ನಾನೂ ಅನುಭವಿಸುವಂತಾಯಿತು. ನಾನು ಓದಿದ್ದು, ಕೇವಲ ಮೂರನೆಯ ತರಗತಿವರೆಗೆ ಮಾತ್ರ. ಆದರೆ ಛಲದಿಂದ ಅಧ್ಯಾತ್ಮದ ಅಧ್ಯಯನ ಮಾಡಿದೆ. ಅದಕ್ಕೆ ನಮ್ಮ ತಾಯಿ ತಂದೆಯವರು ಭಕ್ತಿ ಮಾರ್ಗದಲ್ಲಿರುವುದೆ ಬಹುದೊಡ್ಡ ಪ್ರಭಾವ ಬೀರಿದರೆ, ಮೌಢ್ಯತೆಗಳಿಂದ ಹೊರಬರಲು ವಚನ ಸಾಹಿತ್ಯ ನನಗೆ ಪ್ರೇರಣೆಯಾಯಿತು’ ಎಂದರು.

‘ವಿಠ್ಠಲ ಎನ್ನುವ ಹೆಸರಿನ ನಾನು ಔರಾದನಲ್ಲಿ ನಡೆದ ಸಿದ್ಧರಾಮೇಶ್ವರವರ ಜಯಂತಿಯಂದು ಮಾಡಿದ ಭಾಷಣ ಕೇಳಿದ ಡಾ.ಚನ್ನಬಸವ ಪಟ್ಟದ್ದೇವರು ವೇದಿಕೆ ಮೇಲೆ ಎದೆಗವಚಿಕೊಂಡು ಸಿದ್ಧರಾಮನೆಂದು ನಾಮಕರಣ ಮಾಡಿ ಶರಣತ್ವದ ದೀಕ್ಷೆ ನೀಡಿದರು. ಹೀಗಾಗಿ ಶರಣ ಸಾಹಿತ್ಯ, ತತ್ವ ನಾಡಿನಾದ್ಯಂತ ನಾನು ಪ್ರಸಾರ ಮಾಡಲು ಸಾಧ್ಯವಾಗಿದ್ದು, ಶರಣ ಸಾಹಿತ್ಯ ಕುರಿತು ಸುಮಾರು 15ಕ್ಕೂ ಹೆಚ್ಚು ಮೌಲೀಕ ಕೃತಿಗಳನ್ನು ನೀಡಿದ ಸಂತೃಪ್ತಿ ನನಗಿದೆ’ ಎಂದು ತಿಳಿಸಿದರು.

ಕಾಶೀನಾಥ ಚಲುವಾ ಅವರು ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ಬುದ್ದ ನನ್ನ ತಲೆ, ಹೃದಯ ಬಸವಣ್ಣ, ದೇಹವೇ ಅಂಬೇಡ್ಕರ್ ಹಾಗಾಗಿ ಈ ಮೂವರು ಬೇರೆಬೇರೆಯಲ್ಲ. ಈ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಯಾರಿಗೂ ಉಳಿಗಾಲವಿಲ್ಲ. ಎಲ್ಲರೂ ಮನುವಾದಿಗಳ ಕೈಗೊಂಬೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಎಲ್ಲ ಸಮುದಾಯವರು ಒಂದಾಗಿ ಸಮಭಾವದಿಂದ ಕೂಡಬೇಕು ಎಂಬುದು ತಮ್ಮ ಬದುಕಿನ ಕೊನೆಯ ಆಶೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಮ್ಮ ಮಾತು ಮತ್ತು ಕೃತಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಸರಳ ಸಾತ್ವಿಕ ವ್ಯಕ್ತಿ ಎಂದರೆ ಸಿದ್ದರಾಮ ಶರಣರು’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ‘ಧರ್ಮಬೋಧಕರು ದಾರಿ ತಪ್ಪಿ ನಡೆಯದಂತೆ ಎಚ್ಚರ ವಹಿಸಿದರೆ ಮಾತ್ರ ಅನುಯಾಯಿಗಳು ಸರಿದಾರಿಯಲ್ಲಿರುತ್ತಾರೆ’ ಎಂದರು.

‘ಕೋಮುವಾದ, ಜಾತಿ ಜಗಳ, ತಪ್ಪಿಸಲು ಎಲ್ಲ ಧಾರ್ಮಿಕ ಮುಖಂಡರು ಒಂದಾಗಿ ಧರ್ಮಸಮನ್ವಯತೆ ಸಾಧಿಸುವ ಮೂಲಕ ಜಾಗತಿಕ ಶಾಂತಿ, ಸೌಹಾರ್ದತೆ ನೆಲೆಗೊಳಿಸುವುದು ಇಂದಿನ ಅಗತ್ಯವಾಗಿದೆ. ಇದೇ ನಿಜವಾದ ಧರ್ಮ ಬೋಧನೆ’ ಎಂದು ಅಭಿಪ್ರಾಯಪಟ್ಟರು.

ಶಿವಶಂಕರ ಟೋಕರೆ, ವಿದ್ಯಾವತಿ ಬಲ್ಲೂರ, ರಘುನಾಥ, ಜಗನ್ನಾಥ ಕಮಲಾಪುರೆ, ವೀರಶೆಟ್ಟಿ ಚನಶೆಟ್ಟಿ, ಶಿವಕುಮಾರ ಬೆಲ್ದಾಳ, ಸಿದ್ಧಾರೂಢ ಭಾಲ್ಕೆ ಇದ್ದರು. ರೆವಣಪ್ಪ ಮೂಲಗೆ ಸ್ವಾಗತಿಸಿದರೆ, ವಿದ್ಯಾವತಿ ಹಿರೇಮಠ ನಿರೂಪಿಸಿದರು. ಬಸವರಾಜ ಬಲ್ಲೂರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು