ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವೇ ಭಾರತದ ಪವಿತ್ರ ಗ್ರಂಥ: ಡಿ.ಎಲ್‌.ನಾಗೇಶ ಅಭಿಮತ

ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ಅಭಿಮತ
Last Updated 26 ನವೆಂಬರ್ 2020, 14:53 IST
ಅಕ್ಷರ ಗಾತ್ರ

ಬೀದರ್‌: ‘ಸಂವಿಧಾನವೇ ಭಾರತದ ಪವಿತ್ರ ಗ್ರಂಥವಾಗಿದೆ. ಇದು ಎಲ್ಲ ಧರ್ಮ ಗ್ರಂಥಗಳಿಗಿಂತಲೂ ಶ್ರೇಷ್ಠವಾಗಿದೆ. ಸಾರ್ವಭೌಮ, ಸಮಾನತೆ ಹಾಗೂ ವೈವಿಧ್ಯತೆಯಲ್ಲಿ ಏಕತೆಗೆ ಮಹತ್ವ ಕೊಡುವ ಸಂವಿಧಾನಕ್ಕೆ ಪ್ರತಿಯೊಬ್ಬರು ಧರ್ಮ ಗ್ರಂಥಗಳಿಗಿಂತಲೂ ಹೆಚ್ಚಿನ ಗೌರವ ಕೊಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ಹೇಳಿದರು.

ಇಲ್ಲಿಯ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಿಶ್ವದ ಎಲ್ಲ ದೇಶಗಳ ಸಂವಿಧಾನ ಗಳನ್ನು ಆಳವಾಗಿ ಅಧ್ಯಯನ ಮಾಡಿ ಅತ್ಯುತ್ತಮವಾದ ಅಂಶಗಳನ್ನು ಪಡೆದು ಸಂವಿಧಾನ ರಚಿಸಿದ್ದಾರೆ. 1949ರ ನವೆಂಬರ್‌ 26ರಂದು ಸಂವಿಧಾನವನ್ನು ಸ್ಥೀಕರಿಸಲಾಗಿದೆ. 1950ರ ಜನವರಿ 26ರಂದು ಜಾರಿಗೆ ಬಂದಿದೆ’ ಎಂದರು.

‘ದೇಶದಲ್ಲಿ ಹಲವು ಧರ್ಮ, ಭಾಷೆ ಗಳಿದ್ದರೂ ಸಂವಿಧಾನವು ಎಲ್ಲವನ್ನೂ ಒಗ್ಗೂಡಿಸಿದೆ. ಪ್ರತಿಯೊಂದು ಸಮುದಾಯಕ್ಕೆ ಸ್ವಾತಂತ್ರ್ಯ, ಸಮಾನತೆ ಯನ್ನು ಒದಗಿಸಿದೆ. ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ನಮ್ಮ ಸಂವಿಧಾನ ಪವಿತ್ರವಾಗಿದೆ’ ಎಂದು ಬಣ್ಣಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಭಿನ್ನತೆ, ಅಸಮಾನತೆ, ಲಿಂಗ ತಾರತಮ್ಯ ಇತ್ತು. ಸಂವಿಧಾನದ ರಚನೆಯ ನಂತರ ಧರ್ಮ, ಜಾತಿ, ಲಿಂಗ ತಾರತಮ್ಯ ಕೊನೆಗೊಂಡಿದೆ. ಇದೇ ಕಾರಣಕ್ಕಾಗಿ ಹಳ್ಳಿಯಿಂದ ಬಂದ ನನ್ನಂಥವರು ಐಪಿಎಸ್‌ ಅಧಿಕಾರಿಯಾಗಲು ಹಾಗೂ ವೇದಿಕೆಯ ಮೇಲೆ ನಿಂತು ಮಾತ ನಾಡಲು ಸಾಧ್ಯವಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ರಾಧಾ ಎಚ್‌.ಆರ್‌. ಮಾತನಾಡಿ, ‘ಭಾರತದ ಸಂವಿಧಾನ 70 ಹರೆಯದಲ್ಲಿ ಇದೆ. ಕಾಯ್ದೆ ಕಾನೂನುಗಳ ಪುಸ್ತಕವಾಗಿರದೆ, ದೇಶದ ಜನತೆಯ ಜೀವನ ಶೈಲಿಯಾಗಿದೆ’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ ಮಾತನಾಡಿ, ‘ವಿಶ್ವದ ಅತ್ಯುತ್ತಮ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸೋಣ’ ಎಂದರು.

ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಝರೀನಾ, ಹಿರಿಯ ಸಿವಿಲ್‌ ನ್ಯಾಯಾಧೀಶ ಗೌಡ ಆರ್.ಪಿ., ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಯಮನಪ್ಪ ಕೆ., ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಅರ್ಪಣಾ, 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ವಿನಾಯಕ ವಣಖಂಡೆ, 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಈಶ್ವರ ಮುಸ್ಮಲ್ಮಾರಿ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ್‌ ವಾಗರಾಜ್ ಇದ್ದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ವಿ.ಎಂ. ಕಾರ್ಯದರ್ಶಿ ಧನರಾಜ್‌ ಬಿರಾದಾರ ಸ್ವಾಗತಿಸಿದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ ಟಿ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT