ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ ಹೊನ್ನಾಳಿ ಸೇತುವೆ, ಜಮಗಿಯಲ್ಲಿ ಉರುಳಿದ ಮರ

ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ
Last Updated 22 ಜುಲೈ 2021, 10:20 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ವಿವಿಧೆಡೆ ಗುರುವಾರವೂ ಜಿಟಿ ಜಿಟಿ ಮಳೆ ಮುಂದುವರಿದಿದೆ. ಕೆಲ ಕಡೆ ಬೆಳಗಿನ ಜಾವ ಧಾರಾಕಾರ ಮಳೆಯಾಗಿದೆ. ಮಣ್ಣಿನ ಮನೆಗಳು ತೊಯ್ದು ತೊಪ್ಪೆಯಾಗಿರುವ ಕಾರಣ ಹಳ್ಳಿಯ ಆತಂಕದಲ್ಲಿ ಇದ್ದಾರೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆಳೆಗಳು ನೀರಿನಲ್ಲಿ ನಿಂತಿದ್ದು, ಹಳದಿ ಬಣ್ಣಕ್ಕೆ ತಿರುಗುತ್ತಿವೆ.

ಭಾಲ್ಕಿ ತಾಲ್ಲೂಕಿನ ಹೊನ್ನಾಳಿ ಸಮೀಪದ ಹಳ್ಳದ ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ವಾಹನ ಹಾಗೂ ಜನಸಂಚಾರಕ್ಕೆ ಅಡ್ಡಿಯಾಗಿದೆ. ಸೇತುವೆ ಸಮೀಪ ವಾಹನಗಳು ಸಾಲುಗಟ್ಟಿ ನಿಂತಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಸೇತುವೆ ಮೇಲೆ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಟಿ ಜಿಟಿ ಮಳೆಗೆ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಹೋಬಳಿಯ ಬಹುತೇಕ ಕೃಷಿ ಭೂಮಿ ಜಲಾವೃತವಾಗಿದೆ. ಸೋಯಾ, ತೊಗರಿ ಹಾಗೂ ಹೆಸರು ಬೆಳೆಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿವೆ. ತೆಲಂಗಾಣ ಸಂರ್ಪಕಿಸುವ ಔರಾದ್–ಜಮಗಿ ರಸ್ತೆ ಮೇಲೆ ದೊಡ್ಡದಾದ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಕಟ್ಟಿ ತೂಗಾಂವ ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ರಸ್ತೆ ಮಣ್ಣು ಕೊಂಚಿಕೊಂಡು ಹೋಗಿದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಪ್ರತಾಪುರ ರಸ್ತೆ ಸಂಪೂರ್ಣ ಹಾಳಾಗಿದೆ.

ಕಾರಂಜಾ ಜಲಾಶಯ ಶೇಕಡ 84ರಷ್ಟು ಭರ್ತಿಯಾಗಿದೆ. ತೆಲಂಗಾಣದ ಜಹೀರಾಬಾದ್‌ ತಾಲ್ಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ 903 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಮಳೆ ಅಬ್ಬರಿಸಿದರೆ ಒಂದೇ ದಿನದಲ್ಲಿ ಕಾರಂಜಾ ಜಲಾಶಯ ಪೂರ್ತಿ ತುಂಬುವ ಸಾಧ್ಯತೆ ಇದೆ. ಹೀಗಾಗಿ ಕಾರಂಜಾ ಕಾಲುವೆ ದಂಡೆ ಹಾಗೂ ಮಾಂಜ್ರಾ ನದಿ ದಡದ ಹಳ್ಳಿಗಳ ಜನರು ಬಟ್ಟೆ ತೊಳೆಯಲು ಕಾಲುವೆಗಳಲ್ಲಿ ಇಳಿಯದಂತೆ ಹಾಗೂ ದನಕರಗಳನ್ನು ತೊಳೆಯದಂತೆ ಕಾರಂಜಾ ಯೋಜನೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮುಲ್ಲಾಮಾರಿ ಮೇಲ್ದಂಡೆ ಜಲಾಶಯ ಪೂರ್ಣ ಭರ್ತಿಯಾಗಿದೆ. ಜಲಾಶಯಕ್ಕೆ 930 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಹರಿಯ ಬಿಡಲಾಗುತ್ತಿದೆ. ಚುಳಕಿನಾಲಾ ಜಲಾಶಯ ಶೇಕಡ 89ರಷ್ಟು ತುಂಬಿದೆ. ಬೀದರ್, ಚಿಟಗುಪ್ಪ, ಹುಮನಾಬಾದ್‌, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ.


ನಗರದಲ್ಲಿ ಜನಜೀವನ ಅಸ್ತವ್ಯಸ್ತ


ಬೀದರ್‌: ನಗರದಲ್ಲಿ ಜಿಟಿ ಜಿಟಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಖಾಲಿ ನಿವೇಶನಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದೆ. ಮಳೆ ಅಬ್ಬರಕ್ಕೆ ರಸ್ತೆಗಳು ಹಾಳಾಗಿವೆ.
ನಗರದ ಮೈಲೂರ್, ಹಕ್‌ ಕಾಲೊನಿ ಹಾಗೂ ಹನುಮಾನ ನಗರದಲ್ಲಿ ನೀರು ನಿಂತುಕೊಂಡಿದೆ. ರಸ್ತೆಗಳಲ್ಲಿ ತಗ್ಗುಗುಂಡಿಗಳು ನಿರ್ಮಾಣವಾಗಿವೆ. ಹಾರೂರಗೇರಿ ಕಮಾನ್‌ ಸಮೀಪ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.


ನೆಲಕ್ಕುರುಳಿದ ವಿದ್ಯುತ್‌ ಕಂಬಗಳು

ಔರಾದ್: ತಾಲ್ಲೂಕಿನಲ್ಲಿ ‌ಮಳೆ ಆರ್ಭಟ ಮುಂದುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನದಿ, ಹಳ್ಳ, ಬಾವಿಗಳು ತುಂಬಿ ಹೊಲಗಳಿಗೆ ನೀರು ನುಗ್ಗಿದೆ.
ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದೆ. ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ನಾಗೂರ, ಮಸ್ಕಲ್ ಸೇರಿದಂತೆ ಹಲವು ಗ್ರಾಮಗಳ ಹೊಲಗಳಲ್ಲಿ ನೀರು ನುಗ್ಗಿದೆ. ನೀರಿನ ರಭಸಕ್ಕೆ ಬೆಳೆ ಕೊಚ್ಚಿ ಹೋಗಿದೆ‌‌. ಬೆಳಕುಣಿ ಬಳಿ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಸಂಚಾರ ಸ್ಥಗಿತಗೊಂಡಿದೆ. ತಗ್ಗು ‌ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT