ಭಾನುವಾರ, ಸೆಪ್ಟೆಂಬರ್ 27, 2020
27 °C
ವಿದೇಶಾಂಗ ಸಚಿವರ ಜತೆ ಸಂಸದರ ಮಾತುಕತೆ: ಭರವಸೆ

ಬೀದರ್: ಜಿಲ್ಲೆಯ 195 ಮಂದಿ ಶೀಘ್ರ ತಾಯ್ನಾಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ ಅವರು ಕುವೈತ್‍ನಲ್ಲಿ ಸಿಲುಕಿರುವ ಜಿಲ್ಲೆಯ 195 ಯುವಕರನ್ನು ಶೀಘ್ರ ತಾಯ್ನಾಡಿಗೆ ಕರೆ ತರುವ ಭರವಸೆ ನೀಡಿದ್ದಾರೆ’ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

‘ಉದ್ಯೋಗ ಅರಸಿ ಕುವೈತ್‍ಗೆ ಹೋಗಿ ಕೋವಿಡ್ 19 ಕಾರಣ ಅಲ್ಲಿಯೇ ಸಿಲುಕಿಕೊಂಡವರನ್ನು ಮರಳಿ ದೇಶಕ್ಕೆ ಕರೆ ತರಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ನಾಲ್ಕು–ಐದು ದಿನಗಳ ಹಿಂದೆ ವಿದೇಶಾಂಗ ಸಚಿವರನ್ನು ಸಂಪರ್ಕಿಸಿದ ಫಲವಾಗಿ ಕುವೈತ್‍ನಲ್ಲಿ ಇರುವ ಭಾರತದ ರಾಯಭಾರ ಕಚೇರಿಯು ಅಲ್ಲಿನ ಮೇಘಾ ಎಂಜಿನಿಯರಿಂಗ್ ಕಂಪನಿಗೆ ನೋಟಿಸ್ ಕೊಟ್ಟಿದೆ. ನೋಟಿಸ್ ಪಡೆದ ತಕ್ಷಣ ಕಂಪನಿಯವರು ಜಿಲ್ಲೆಯ ಯುವಕರನ್ನು ಭೇಟಿ ಮಾಡಿ ಎಲ್ಲರನ್ನೂ ಭಾರತಕ್ಕೆ ವಾಪಸ್ ಕಳುಹಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಊಟ ಹಾಗೂ ಇತರ ವ್ಯವಸ್ಥೆಗಳನ್ನೂ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗುರುವಾರ ಮತ್ತೆ ವಿದೇಶಾಂಗ ಸಚಿವರನ್ನು ಸಂಪರ್ಕಿಸಿದ್ದು, ಈಗಾಗಲೇ ರಾಯಭಾರ ಕಚೇರಿ ಮೂಲಕ ಮೇಘಾ ಎಂಜಿನಿಯರಿಂಗ್ ಕಂಪನಿಯನ್ನು ಸಂಪರ್ಕಿಸಲಾಗಿದೆ. ಕಂಪನಿಯು ಬೀದರ್ ಜಿಲ್ಲೆಯ ಯುವಕರನ್ನು ಮರಳಿ ಭಾರತಕ್ಕೆ ಕಳುಹಿಸಲು ಬಾಜಿರಾ ಏರ್‌ಲೈನ್ಸ್‌ ಟಿಕೆಟ್ ವ್ಯವಸ್ಥೆಯನ್ನೂ ಮಾಡಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಕೋವಿಡ್ 19 ಸೋಂಕಿನ ಪ್ರಯುಕ್ತ ಸದ್ಯ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಶುರುವಾಗಲಿದೆ. ವಿಮಾನಯಾನ ಆರಂಭವಾದ ಕೂಡಲೇ ಜಿಲ್ಲೆಯ ಯುವಕರನ್ನು ಕರೆ ತರಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕುವೈತ್‍ನಲ್ಲಿ ಇರುವ ಜಿಲ್ಲೆಯ ಯುವಕರನ್ನು ವಾಟ್ಸ್ಆ್ಯಪ್‌ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದಿದೆ. ಧೈರ್ಯದಿಂದ ಇರುವಂತೆ ತಿಳಿಸಿದ್ದೇನೆ. ಹೀಗಾಗಿ ಕುವೈತ್‍ನಲ್ಲಿ ಸಿಲುಕಿಕೊಂಡವರ ಪಾಲಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು