ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಮಂಡಳಿಗೆ ಕೊಡುವ ಅನುದಾನ ಅಕಾಡೆಮಿಗಳಿಗೇಕಿಲ್ಲ: ‘ಮುಖ್ಯಮಂತ್ರಿ’ ಚಂದ್ರು

Last Updated 28 ಜುಲೈ 2022, 16:21 IST
ಅಕ್ಷರ ಗಾತ್ರ

ಬೀದರ್: ‘ಜಾತಿ ಮಂಡಳಿಗಳಿಗೆ ನೂರು ಕೋಟಿ ರೂಪಾಯಿ ಅನುದಾನ ಕೊಡಲು ಸಾಧ್ಯವಿರುವಾಗ ಸಾಂಸ್ಕೃತಿಕ ಲೋಕಕ್ಕೆ ₹ 10 ಕೋಟಿ ಕೊಡಲು ಏಕೆ ಸಾಧ್ಯವಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಅನುದಾನ ಕೊಡುವ ಸರ್ಕಾರ ಕಲೆ, ಸಂಸ್ಕೃತಿ ಹಾಗೂ ಕಲಾವಿದರಿಗೆ ನೆರವು ಕೊಡಲು ಮೀನಮೀಷ ಮಾಡುವುದು ಸರಿಯಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷಾಚರಣೆ ಹಾಗೂ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಮತ್ತು ಜನಪರ ಉತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು.

‘ರಾಜ್ಯದ ಎರಡೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಹಳ ಕಡಿಮೆ ಅನುದಾನ ಕೊಡಲಾಗುತ್ತಿದೆ. ಮರಾಠ ಮಂಡಳಿಗೆ ₹ 100 ಕೋಟಿ ಕೊಡಲು ಸಾಧ್ಯವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ₹ 10 ಕೋಟಿ, ಕನ್ನಡ ಅಭಿವೃದ್ಧಿ, ಅಕಾಡೆಮಿಗಳಿಗೆ ಕಾರ್ಯಕ್ರಮ ಮಾಡುವಷ್ಟೂ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಕೆಲ ಅಕಾಡೆಮಿಗಳಿಗೆ ವೇತನ ಕೊಡುವಷ್ಟೂ ಅನುದಾನ ಕೊಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತ ವ್ಯಕ್ತಿ. ಆದರೆ, ಅವರಿಗೆ ಸ್ವಂತ ಬುದ್ದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರ ಹೇಳಿದ ಮೇಲೆಯೇ ಕೆಲಸ ಮಾಡಬೇಕಾಗಿದೆ. ಮೋದಿಯ ಮೊದಲ ಅಕ್ಷರ ‘ಮೋ’ ಹಾಗೂ ಸಂಘ ಪರಿವಾದ ‘ಸ’ ಸೇರಿ ಇಲ್ಲಿ ಮೋಸ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ’ ಎಂದು ಮೊನಚಾದ ಮಾತುಗಳಿಂದ ತಿವಿದರು.

‘ಮಾಸಾಶನ ಜಾಸ್ತಿ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ಅಡಿಗೆ ಅನಿಲ, ಅಕ್ಕಿ ಬೆಲೆ, ವಿದ್ಯುತ್‌ ಬಿಲ್‌ ಹೆಚ್ಚಳ ಮಾಡುತ್ತಿದ್ದಾರೆ. ಆರ್ಥ ವ್ಯವಸ್ಥೆ ಸುಧಾರಿಸಲು ತೆರಿಗೆಯನ್ನೂ ವಿಧಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರ ಬದುಕು ಕಷ್ಟವಾಗಿದೆ. ಸರ್ಕಾರಗಳು ಜನ ಸಾಮಾನ್ಯರು ಬದುಕುವ ರೀತಿಯಲ್ಲಿ ಕೆಲಸ ಮಾಡಬೇಕಿದೆ’ ಎಂದರು.

‘ಇಂದು ರಾಜಕಾರಣದಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಸುಳ್ಳು, ಕೊಲೆ, ಲೂಟಿ, ಮೋಸ ರಾಜಕಾರಣದಲ್ಲಿ ಬಂದು ಕುಳಿತಿದೆ. ಮಹಾಪುರುಷರನ್ನು ಅವಮಾನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಲಾವಿದರ ಒಕ್ಕೂಟಕ್ಕೆ ಒಂದು ನಿವೇಶನವೂ ಬೇಕು. ಚುನಾಯಿತ ಪ್ರತಿನಿಧಿಗಳ ನೆರವಿನಿಂದ ಪಡೆಯಲು ಪ್ರಯತ್ನಿಸಬೇಕು. ವಿಧಾನ ಪರಿಷತ್ತಿನ ಸದಸ್ಯರು ಸಚಿವರಿಂದ ಅನುದಾನ ಪಡೆದು ನಗರದಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು’ ಎಂದು ಹೇಳಿದರು.

‘ನಾನು ಜನರ ‘ಮುಖ್ಯಮಂತ್ರಿ’ ನನ್ನ ಹೆಸರಿನ ಮುಂದಿನ ‘ಮುಖ್ಯಮಂತ್ರಿ’ ಶಾಶ್ವತವಾಗಿ ಇದೆ. ಅವಿಶ್ವಾಸ ತಂದು ನನ್ನನ್ನು ‘ಮುಖ್ಯಮಂತ್ರಿ’ ಪದವಿಯಿಂದ ಇಳಿಸಲು ಸಾಧ್ಯವಿಲ್ಲ. ನಾನು ಯೋಗ್ಯತೆಯಿಂದ ವಿವಿಧ ಹುದ್ದೆಗಳಿಗೆ ಏರಿದ್ದೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಕಲಾವಿದರಿಗೆ ಲಂಗು ಲಗಾಮು ಇಲ್ಲ. ಎಲ್ಲಿ ಬೇಕಾದರೂ ಬದುಕಬಹುದು. ಕಲಾವಿದರಲ್ಲಿ ಸತ್ಯದ ಸಹನೆ ಇದೆ. ರಾಜಕೀಯದಂತೆ ಸುಳ್ಳಿನ ಕಂತೆ ಇಲ್ಲ. ವಿಜಯಕುಮಾರ ಸೋನಾರೆ ಅವರು ಛಲದಿಂದ ಒಕ್ಕೂಟ ರಚಿಸಿದ್ದಾರೆ’ ಎಂದು ಹೇಳಿದರು.‌

‘ರಂಗಭೂಮಿಯಲ್ಲಿ ಆರ್ಥಿಕ ಅನುಕೂಲತೆ ಇಲ್ಲದಿದ್ದರೂ ವಿಶಾಲತೆ ಇದೆ. ಕಲ್ಮಶ ರಹಿತವಾದ ಪ್ರೀತಿ ರಂಗ ಭೂಮಿಯಲ್ಲಿ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ದೇಶ ಅಭಿವೃದ್ಧಿ ಕಾಣಬಹುದು. ಹೃದಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಇರುವ ದೇಶದಲ್ಲಿ ಸಿರಿವಂತಿಕೆ ಇದೆ’ ಎಂದು ತಿಳಿಸಿದರು.

ಒಕ್ಕೂಟದ ಗೌರವಾಧ್ಯಕ್ಷರೂ ಆದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಒಕ್ಕೂಟದ ಗೌರವ ಸಲಹೆಗಾರ ಶ್ರೀನಿವಾಸ ಕಪ್ಪಣ್ಣ, ಶಾಸಕರಾದ ಬಂಡೆಪ್ಪ ಕಾಶೆಂಪುರ, ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಉಪಾಧ್ಯಕ್ಷ ಪ್ರಕಾಶ ಅಂಗಡಿ, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಲಕ್ಷ್ಮಣ ಪೀರಗಾರ, ಪ್ರಕಾಶ ನಂದಿ, ಭೀಮರಾಯ ಭಜಂತ್ರಿ, ವಿಶಾಲ ಸಿಂಧೆ, ರಮೇಶ ಹೊಸಮನಿ, ಸಂಜೀವಕುಮಾರ ಜೀರ್ಗೆ, ಗಂಗಣ್ಣ ಬಿ. ಇದ್ದರು. ಡಿಂಗ್ರಿ ನರೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT