ಸೋಮವಾರ, ಮೇ 23, 2022
30 °C
ಅನೇಕ ವರ್ಷಗಳಿಂದ ಆಗದ ರಸ್ತೆ ಸುಧಾರಣೆ; ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ

ಬಸವಕಲ್ಯಾಣ: ಅಟ್ಟೂರ್‌ ರಸ್ತೆಯಲ್ಲಿ ಜಲ್ಲಿಕಲ್ಲುಗಳ ಸಂಕಷ್ಟ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಅಟ್ಟೂರ (ಬಸವಕಲ್ಯಾಣ): ತಾಲ್ಲೂಕಿನ ಅಟ್ಟೂರ್‌ದಿಂದ ಸಲಗರ ಕ್ರಾಸ್ ವರೆಗಿನ ರಸ್ತೆ ಹದಗೆಟ್ಟಿದೆ. ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಇದು ತಾಲ್ಲೂಕಿನ ಕಟ್ಟಕಟೆಯ ಗ್ರಾಮವಾಗಿದ್ದು, ಇಲ್ಲಿಂದ 3 ಕಿ.ಮೀ ಸಾಗಿದರೆ ಕಲಬುರ್ಗಿ ಜಿಲ್ಲೆಯ ಗಡಿಯಿದೆ. ಈ ಕಡೆಯಿಂದ ಸಲಗರ, ಬೆಳಮಗಿ, ಆಳಂದಕ್ಕೆ ಹೋಗುವವರು ಆ ಕಡೆಯಿಂದ ಕೊಹಿನೂರ, ಹಾರಕೂಡ, ಬಸವಕಲ್ಯಾಣಕ್ಕೆ ಬರುವವರು ಅಟ್ಟೂರ್‌ ಮಾರ್ಗವಾಗಿಯೇ ಬರುತ್ತಾರೆ. ಆದರೆ, ಉತ್ತಮ ರಸ್ತೆ ಇಲ್ಲದ ಕಾರಣ ಪರದಾಡುವ ಪರಿಸ್ಥಿತಿಯಿದೆ.

ಗ್ರಾಮದಿಂದ ಸಲಗರ ಕ್ರಾಸ್ ವರೆಗಿನ ರಸ್ತೆಯಲ್ಲಿ ಅನೇಕ ಕಡೆ ತಗ್ಗುಗುಂಡಿಗಳು ಬಿದ್ದಿದ್ದು, ಜಲ್ಲಿಕಲ್ಲುಗಳು ಎದ್ದಿವೆ. ಹೀಗಾಗಿ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಅಷ್ಟೇ ಅಲ್ಲ, ಹೊಲಗಳಿಗೆ ಎತ್ತಿನಬಂಡಿ ಒಯ್ಯುವುದಕ್ಕೆ ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೂ ತೊಂದರೆ ಅನುಭವಿಸಬೇಕಾಗುತ್ತಿದೆ.

‘ದ್ವಿಚಕ್ರ ವಾಹನಗಳ ಟೈರ್‌ಗಳಿಗೆ ಹಾನಿ ಆಗುತ್ತಿದೆ. ಈ ಕಾರಣ ಕೊಹಿನೂರ ಕ್ರಾಸ್‌ದಿಂದ 7 ಕಿ.ಮೀ. ಕ್ರಮಿಸಿ ಸಲಗರ ಮೂಲಕ ಬೆಳಮಗಿಗೆ ಹೋಗಬೇಕಾಗುತ್ತಿದೆ. ಇದರಿಂದ ಹೆಚ್ಚಿನ ಹಣ ಹಾಗೂ ಸಮಯ ವ್ಯಯವಾಗುತ್ತಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಕೊಹಿನೂರ ಕ್ರಾಸ್‌ದಿಂದ ಗ್ರಾಮಕ್ಕೆ ಹೋಗುವ ರಸ್ತೆಯೂ ಅಲ್ಲಲ್ಲಿ ಹದಗೆಟ್ಟಿದೆ. ಅದನ್ನು ಹಾಗೂ ಇಲ್ಲಿಂದ ಮುಂದೆ ಸಲಗರ ಕ್ರಾಸ್‌ಗೆ ಹೋಗುವ ರಸ್ತೆಯ ಸುಧಾರಣಾ ಕಾರ್ಯ ಕೈಗೊಳ್ಳಬೇಕು ಎಂದು ಸಂಬಂಧಿತರಿಗೆ ಅನೇಕ ಸಲ ಕೇಳಿಕೊಂಡರೂ ಪ್ರಯೋಜನ ಆಗಿಲ್ಲ. 13 ವರ್ಷಗಳಿಂದ ಈ ರಸ್ತೆಯ ಡಾಂಬರೀಕರಣ ನಡೆದಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಿಂಬಾಳೆ ಹೇಳುತ್ತಾರೆ.

‘ಈ ರಸ್ತೆಯಲ್ಲಿನ ಹುಳಿಕೊಳ್ಳ ನಾಲಾದ ಸೇತುವೆಯ ಒಂದು ಭಾಗದ ಮಣ್ಣು ಕುಸಿದಿದ್ದರಿಂದಲೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕು’ ಎಂಬುದು ಗ್ರಾಮಸ್ಥರಾದ ಸಂಭಾಜಿ ಕಾರಬಾರಿ, ವೀರಣ್ಣ ಮಾಲಿಪಾಟೀಲ ಅವರ ಒತ್ತಾಯ.

‘ಸಂಬಂಧಿತರು ಈ ಕಡೆ ಶೀಘ್ರ ಲಕ್ಷ್ಯವಹಿಸಿ ಯಾವುದಾದರೂ ಯೋಜನೆಯಲ್ಲಿ ರಸ್ತೆ ಸುಧಾರಣಾ ಕಾರ್ಯ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ ಅಡೆಪ್ಪಗೋಳ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು