ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ ಹೋರಾಟ ಧರ್ಮ ಒಡೆದಿಲ್ಲ’

ರಾಷ್ಟ್ರೀಯ ಬಸವ ದಳ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿಕೆ
Last Updated 7 ಸೆಪ್ಟೆಂಬರ್ 2021, 16:34 IST
ಅಕ್ಷರ ಗಾತ್ರ

ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟವು ಯಾರನ್ನೂ ಪ್ರತ್ಯೇಕಿಸಿಲ್ಲ, ಧರ್ಮವನ್ನೂ ಒಡೆದಿಲ್ಲ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಧರ್ಮಕ್ಕೆ ಕೂಗು ಎಬ್ಬಿಸಿದವರ ಕಡೆಯವರು ಚುನಾವಣೆಯಲ್ಲಿ ಸೋತು ಸುಣ್ಣವಾದರು. ಅದರಿಂದಾಗಿಯೇ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತು ಎನ್ನುವ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಲಿಂಗಾಯತವು 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಧರ್ಮವಾಗಿದೆ. ವೀರಶೈವವು ಅದರ 101 ಉಪ ಪಂಗಡಗಳಲ್ಲಿ ಒಂದಾಗಿದೆ. ಹೀಗಾಗಿ ಲಿಂಗಾಯತದಿಂದ ವೀರಶೈವವನ್ನು ಪ್ರತ್ಯೇಕಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳುವ ವೀರಶೈವರೂ ಲಿಂಗಾಯತರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಲಿಂಗಾಯತ ಹೋರಾಟ ಧರ್ಮ ಒಡೆಯಿತು ಎನ್ನುವ ಆರೋಪದಲ್ಲಿ ಎಳ್ಳಷ್ಟೂ ಸತ್ಯಾಂಶ ಇಲ್ಲ. ಹೋರಾಟ ಚದುರಿ ಹೋಗಿದ್ದ ಧರ್ಮದಲ್ಲಿನ ಉಪ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಮಾಡಿದೆಯೇ ಹೊರತು ಒಡಕು ಉಂಟು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಸ್ವತಂತ್ರ ಧರ್ಮ ಹೋರಾಟದ ಮನವಿಗೆ ಸ್ಪಂದಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ರಚಿಸಿದ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಸಮಿತಿಯು ಪ್ರತ್ಯೇಕ ಧರ್ಮಕ್ಕೆ ಲಿಂಗಾಯತವೇ ಸೂಕ್ತವಾಗಿದೆ ಎಂದು ವರದಿ ಸಲ್ಲಿಸಿತು. ಅದರ ಆಧಾರದಲ್ಲಿಯೇ ಆಗಿನ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಿತು ಎಂದು ಹೇಳಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದಕ್ಕೆ ಇತಿಹಾಸ, ದಾಖಲೆ, ಪರಂಪರೆಯ ಆಧಾರಗಳು ಇವೆ. ಲಿಂಗಾಯತರ ಅಸ್ಮಿತೆಗಾಗಿ ನಡೆಸುತ್ತಿರುವ ಹೋರಾಟ ಯಾರ ವಿರುದ್ಧವೂ ಅಲ್ಲ. ಇದು, ಪಕ್ಷಾತೀತ ಹಾಗೂ ರಾಜಕೀಯೇತರವಾಗಿದೆ. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು, ಚುನಾವಣೆ ಫಲಿತಾಂಶದೊಂದಿಗೆ ಥಳಕು ಹಾಕುವುದು ಸಲ್ಲದು ಎಂದು ತಿಳಿಸಿದ್ದಾರೆ.

ಜಾಮದಾರ್ ಸವಕಳಿ ನಾಣ್ಯ ಎಂಬ ಹೇಳಿಕೆ ಹಾಸ್ಯಾಸ್ಪದ. ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವ ಜಯಂತಿ ದಿನ ಎತ್ತಿನ ಪೂಜೆ ಮಾಡಿದವರು ಯಾವ ನಾಣ್ಯ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT