ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲೆಗೆ ಜೀವ ತುಂಬುವ ಮಾಂತ್ರಿಕ ಹಣಮಂತ

Last Updated 23 ಜುಲೈ 2022, 19:30 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಗುನ್ನಳ್ಳಿಯ ಹಣಮಂತ ಶಿವಶರಣಪ್ಪ ಮಲ್ಕಾಪೂರೆ ಅಪ್ಪಟ ಗ್ರಾಮೀಣ ಪ್ರತಿಭೆ. ಇಟ್ಟುಕೊಂಡ ಗುರಿ ಸಾಧಿಸಿ ತೋರಿಸುವ ಛಲಬಿಡದ ಕಲಾವಿದ. ಒಮ್ಮೆ ಕೈಯಲ್ಲಿ ಕುಂಚವನ್ನು ಹಿಡಿದು ಕುಳಿತರೆ ಸಾಕು ಕಲೆಯಲ್ಲಿ ಜೀವ ತುಂಬುವ ವರೆಗೂ ಮೇಲೇಳುವುದಿಲ್ಲ.

ಚಿತ್ರಕಲೆಯ ಬಗೆಗಿನ ಅಪಾರ ಆಸಕ್ತಿ, ಆಳವಾದ ಅಧ್ಯಯನ ಹಾಗೂ ಪರಿಶ್ರಮ ಹರೆಯದಲ್ಲೇ ಕಲಾ ಪ್ರೌಢಿಮೆಯನ್ನು ಬೆಳೆಸಿದೆ. ನಿರಾಭರಣ ಸುಂದರಿಯರೇ ಇರಲಿ, ಕ್ರೂರ ಮೃಗಗಳೇ ಇರಲಿ ಇವರ ಕಲೆಯ ಬಲೆಗೆ ಬಿದ್ದರೆ ಸಾಕು ಸೌಂದರ್ಯದ ಜತೆಗೆ ಗಾಂಭೀರ್ಯವೂ ಇಮ್ಮಡಿಗೊಳ್ಳುತ್ತದೆ. ಇದೇ ಹಣಮಂತ ಅವರ ಕಲಾ ವೈಶಿಷ್ಟ್ಯ.

ಕಾಡಿನಲ್ಲಿ ಗಂಭೀರತೆಯಿಂದ ಕುಳಿತು ಬೇಟೆಗೆ ಗುರಿ ಇಟ್ಟಿರುವ ಹುಲಿಯ ಚಿತ್ರ ಜೀವಂತಿಕೆಯ ನಿದರ್ಶನವಾಗಿದೆ. ದೇಹದ ಮೇಲಿನ ಕಪ್ಪುಪಟ್ಟಿ, ಶಬ್ದ ಆಲಿಕೆಯ ತೀಕ್ಷ್ಣತೆ ಬಿಂಬಿಸುವ ಕಿವಿಗಳು, ಬೇಟೆಗೆ ನೆಟ್ಟಿರುವ ಗುರಿಯನ್ನು ಕಣ್ಣಿನಲ್ಲಿ ಕಾಣಬಹುದು. ವನ್ಯಜೀವಿಗಳಲ್ಲೇ ಅದ್ಭುತವಾದ ಚಿತ್ರವನ್ನು ತಮ್ಮ ಕಲಾಕುಂಚದಲ್ಲಿ ಸೆರೆ ಹಿಡಿದಿದ್ದಾರೆ.

ಜಲಪಾತದ ಅಂಚಿನಲ್ಲಿರುವ ಮರದ ಮೇಲೆ ಕುಳಿತ ನವಿಲುಗಳ ಅಂದವನ್ನು ಕಾಗದದಲ್ಲಿ ಇಳಿಸಿದ್ದಾರೆ. ಯುವತಿಯೊಬ್ಬಳು ಮಿರಗುವ ಬಟ್ಟೆಯ ರವಿಕೆ ತೊಟ್ಟು ನವಿಲುಗರಿಗಳ ಚಿತ್ರವಿರುವ ಶ್ವೇತ ವರ್ಣದ ಸೀರೆ ತೊಟ್ಟು, ಕಿವಿಗೆ ಝಮಕಾ ಹಾಗೂ ಕೊರಳಲ್ಲಿ ಹಾರ ಧರಿಸಿ ಸೌಂದರ್ಯ ಪ್ರದರ್ಶನ ನೀಡಿದ ದೃಶ್ಯವನ್ನು ಅರ್ಥಪೂರ್ಣವಾಗಿ ಬಿಡಿಸಿದ್ದಾರೆ.

ಬೇಟೆಗೆ ಬಂದಿದ್ದ ದುಷ್ಯಂತ ರಾಜನು ಶಾಕುಂತಲೇ ಸೌಂದರ್ಯಕ್ಕೆ ಮಾರುಹೋಗಿ ಬಿಲ್ಲು ಬತ್ತಳಿಕೆಯನ್ನು ಬದಿಗೆಸೆದು ತಾನ್ನೊಬ್ಬ ರಾಜನೆಂಬುದು ಮರೆತು ಪ್ರೇಮ ಸಲ್ಲಾಪದಲ್ಲಿ ಮುಳುಗಿ ಹೋಗಿದ್ದಾನೆ. ಶಾಕುಂತಲೆಯನ್ನು ತನ್ನ ತೊಡೆಯ ಮೇಲೆ ವಾಲಿಸಿಕೊಂಡು ತಲ್ಲೀನನಾಗಿರುವ ಚಿತ್ರ ಕಾಮದೇವನಿಗೆ ಕಿಚ್ಚು ಹಚ್ಚುವಂತಿದೆ.

ನಿಸರ್ಗ, ವನ್ಯಜೀವಿಗಳು, ಪೌರಾಣಿಕ ಕಥೆಯ ಮೇಲೆ ಬೆಳಕು ಚೆಲ್ಲುವ ದೃಶ್ಯಗಳು, ಸೌಂದರ್ಯವತಿಯರು ಹಾಗೂ ಕೌಟುಂಬಿಕ ಸಂಬಂಧಗಳನ್ನು ಬಿಂಬಿಸುವ ದೃಶ್ಯಗಳನ್ನು ಇವರ ಚಿತ್ರಕಲೆಗಳಲ್ಲಿ ಕಾಣಬಹುದಾಗಿದೆ. ಹಾಗಂತ ಅವರು ಸಾಂಪ್ರದಾಯಿಕ ಕಲೆಗೆ ಮಾತ್ರ ಅಂಟಿಕೊಂಡಿಲ್ಲ. ಪರಿಸರ ಸಂರಕ್ಷಣೆ, ಕೈಗಾರೀಕರಣದಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳು, ಅಂತರ್ಜಾಲ ಸೌಲಭ್ಯ ದೊರಕಿದ ನಂತರ ಅಂಗೈಯಲ್ಲಿ ಬಂದು ಕುಳಿತ ಜ್ಞಾನ ಭಂಡಾರದಂತಹ ಚಿತ್ರಗಳನ್ನೂ ಬಿಡಿಸಿ ಹೊಸ ಸಂದೇಶ ನೀಡಲು ಯತ್ನಿಸಿದ್ದಾರೆ.

‘ಆಧುನಿಕ ತಂತ್ರಜ್ಞಾನದ ಪರಿಣಾಮ ಇಂದು ಕಲಾವಿದರಲ್ಲಿ ಪೈಪೋಟಿ ಹೆಚ್ಚಾಗಿದೆ. ಉಳಿದ ಕಲಾವಿದರಂತೆ ಚಿತ್ರಗಳನ್ನು ಬಿಡಿಸತೊಡಗಿದರೆ ನಾನು ವಿಭಿನ್ನ ಕಲಾವಿದನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದು. ಹೀಗಾಗಿ ಎಲ್ಲ ಬಗೆಯ ಚಿತ್ರಗಳನ್ನು ತೆಗೆಯಲು ಪ್ರಯತ್ನ ನಡೆಸಿದ್ದೇನೆ. ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಲ್ಲಿ ಉತ್ತಮ ಕಲಾಕೃತಿಗಳ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದೇನೆ’ ಎನ್ನುತ್ತಾರೆ ಕಲಾವಿದ ಹಣಮಂತ ಶಿವಶರಣಪ್ಪ.

ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಮಾಸ್ಟರ್‌ ಆಫ್‌ ವಿಜುವಲ್‌ ಆರ್ಟ್ಸ್ ಪದವಿ ಪಡೆದಿರುವ ಹಣಮಂತ ಅವರು ಬೀದರ್‌, ಕಲಬುರಗಿ, ಬೆಂಗಳೂರಿನಲ್ಲಿ ನಡೆದ ಚಿತ್ರಕಲಾ ಜಾತ್ರೆ, ಚಿತ್ರಕಲಾ ಸಂತೆ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ 48ನೇ ವಾರ್ಷಿಕೋತ್ಸವ ಚಿತ್ರಕಲಾ ಪ್ರದರ್ಶನ, ಹಂಪಿ ಉತ್ಸವ, ಬೆಳಗಾವಿಯಲ್ಲಿ ನಡೆದ ಕುಲಕರ್ಣಿ ಚಿತ್ರಕಲಾ ಪ್ರದರ್ಶನದಲ್ಲಿ ಕಲೆಗಳನ್ನು ಪ್ರದರ್ಶಿಸಿದ್ದಾರೆ.

ಕಲಾರತ್ನಂ ಫೌಂಡೇಷನ್ ಆಫ್ ಆರ್ಟ್ ಸೊಸೈಟಿ, ರಾಷ್ಟ್ರ ಮಟ್ಟದ ಆನ್ ಲೈನ್ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಂಘ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಆನ್‌ಲೈನ್ ಚಿತ್ರಕಲಾ ಪ್ರದರ್ಶನ, ದೃಶ್ಯ ಬೆಳಕು ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ, ಬೀದರ್ ಆರ್ಟ್ ಆಂಡ್ ಕಲ್ಚರ್ ಡೆವೆಲಪ್‌ಮೆಂಟ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸಿದ್ದಾರೆ.

ಕೆಲಸಂಘ ಸಂಸ್ಥೆಗಳು ಇವರಿಗೆ ಪ್ರಶಂಸಾಪತ್ರ, ಬಹುಮಾನ ನೀಡಿ ಪ್ರೋತ್ಸಾಹಿಸಿವೆ. ಕೆಲ ಸಂಸ್ಥೆಗಳು ಹಣಮಂತ ಅವರಿಗೆ ಸನ್ಮಾನಿಸಿ ಕಲಾ ಸೇವೆಗೆ ಬೆನ್ನು ತಟ್ಟಿವೆ. (ಹಣಮಂತ ಅವರ ಮೊಬೈಲ್‌ ಸಂಖ್ಯೆ (8152050950)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT