ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಪ್ರತೀಕ: ಸೂಲಿಬೆಲೆ

ಕಲ್ಯಾಣ ಕರ್ನಾಟಕದ ‘ಕನ್ನಡ ತೇರು’ ಅಭಿಯಾನ ಸಮಾರೋಪ
Last Updated 16 ಆಗಸ್ಟ್ 2022, 15:27 IST
ಅಕ್ಷರ ಗಾತ್ರ

ಬೀದರ್‌: ‘ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯಗೊಂಡು ೭೫ ವರ್ಷ ಪೂರೈಸಿದ ಸಂದರ್ಭದಲ್ಲಿ ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಯಾಗಿದೆ. ರಾಷ್ಟ್ರಧ್ವಜ ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿದೆ’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಯುವ ಬ್ರಿಗೇಡ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ಸ್ವರಾಜ್ಯಕ್ಕೆ ಮುಕ್ಕಾಲು ನೂರು’ ಕಾರ್ಯಕ್ರಮದ ಅಂಗವಾಗಿ ‘ಕನ್ನಡ ತೇರು’ ಅಭಿಯಾನದ ಕಲ್ಯಾಣ ಕರ್ನಾಟಕ ಭಾಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಿರಂಗಾ ಧ್ವಜವು ಕೇವಲ ಬಟ್ಟೆಯಲ್ಲ, ಅದು ಶೌರ್ಯ, ಸಾಹಸ, ಶಾಂತಿ ಮತ್ತು ಸಮೃದ್ಧಿಯ ದ್ಯೋತಕ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವೀರ ಸಾವರ್ಕರ್, ಸುಭಾಷ್ ಚಂದ್ರಬೋಸ್ ಮುಂತಾದವರ ರಕ್ತತರ್ಪಣದ ಧ್ವಜವೂ ವಾಗಿದೆ’ ಎಂದರು.

‘ತ್ರಿವರ್ಣ ಧ್ವಜವನ್ನು ಭಾರತ ಅಷ್ಟೇ ಅಲ್ಲ, ವಿಶ್ವದ ಬುರ್ಜ ಖಲೀಫಾ, ಆಸ್ಟ್ರೇಲಿಯಾ, ಅಮೆರಿಕದಲ್ಲೂ ವಿಜೃಂಭಣೆಯಿಂದ ಹಾರಿಸಲಾಗಿದೆ. ಭಾರತ-ಪಾಕಿಸ್ತಾನದ ಮೊದಲ ಯುದ್ಧದಲ್ಲಿ, ‘ಯುದ್ಧ ನಿಲ್ಲಿಸದಿದ್ದರೆ ಗೋಧಿ ಸರಬರಾಜು ಮಾಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದ ಅಮೆರಿಕಕ್ಕೆ ‘ನಿಮ್ಮ ಗೋಧಿಯೇ ಬೇಕಾಗಿಲ್ಲ’ವೆಂದು ಮಾಜಿ ಪ್ರಧಾನಿ ಶಾಸ್ತ್ರಿ ಧೈರ್ಯದಿಂದ ಹೇಳಿದ್ದರು’ ಎಂದರು.

‘ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ದಿಸೆಯಲ್ಲಿ ಈ ಕನ್ನಡದ ತೇರು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜೆ.ಕೆ.ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರು ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇಂದು ಸಮಗ್ರ ವಿಕಾಸದತ್ತ ಹೆಜ್ಜೆ ಹಾಕುತ್ತಿದೆ. ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ವಿಶ್ವವೇ ಭಾರತದತ್ತ ನೋಡುತ್ತಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಇದ್ದರು.

ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಯುವ ಬ್ರಿಗೇಡ್‌ನ ರಾಜ್ಯ ಸಂಚಾಲಕ ವರ್ಧಮಾನ ತ್ಯಾಗಿ ಪ್ರಾಸ್ತಾವಿಕ ಮಾತನಾಡಿದರು, ಕ.ಸಾ.ಪ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ನಿರೂಪಿಸಿದರು. ವೀರೇಶ ಸ್ವಾಮಿ ವಂದಿಸಿದರು. ಭಾನುಪ್ರಿಯಾ ಅರಳಿ ತಂಡದವರು ನಾಡಗೀತೆ ಹಾಡಿದರು.

ಕನ್ನಡ ತೇರಿನ ಮೆರವಣಿಗೆ

ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ‘ಸ್ವರಾಜ್ಯಕ್ಕೆ ಮುಕ್ಕಾಲು ನೂರು’ ಸಂದೇಶ ಹೊತ್ತು ಬಂದ ಕನ್ನಡದ ತೇರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಚಾಲನೆ ನೀಡಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನ್ಯಾಸದ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರು ಅಧ್ಯಕ್ಷತೆ ವಹಿಸಿದ್ದರು. ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ, ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ನಿತೀನ್ ಕರ್ಪೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಕಾಶೀನಾಥ ನೌಬಾದೆ, ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರು, ತರುಣ ಎಸ್. ನಾಗಮಾರಪಳ್ಳಿ, ಸಹಜಾನಂದ ಕಂದಗೂಳೆ, ಗುರುನಾಥ ರಾಜಗಿರಾ, ವಕೀಲ್ ಎಂ.ಪಟೇಲ್ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿಗಳನ್ನಾಡಿದರು. ಎಂ.ಎಸ್.ಮನೋಹರ ಸ್ವಾಗತಿಸಿದರು. ಪರಮೇಶ್ವರ ಬಿರಾದಾರ ನಿರೂಪಿಸಿದರು. ಸಂತೋಷ ಮಂಗಳೂರೆ ವಂದಿಸಿದರು.

ಯುವ ಬ್ರಿಗೇಡ್ ಹಾಗೂ ಕಸಾಪ ಯುವ ಘಟಕದ ಕಾರ್ಯದರ್ಶಿ ವೀರೇಶ್ ಸ್ವಾಮಿ ನೇತೃತ್ವದ ಮೆರವಣಿಗೆಯಲ್ಲಿ ಜೀಜಾಮಾತಾ ಕನ್ಯಾ ಪ್ರೌಢ ಶಾಲೆ, ಅರುಣೋದಯ ಪ್ರೌಢ ಶಾಲೆ, ಸಮತಾ ಪ್ರೌಢ ಶಾಲೆ, ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢ ಶಾಲೆ, ವಿದ್ಯಾಶ್ರೀ ಪ್ರೌಢ ಶಾಲೆ, ಸಾಯಿ ಸ್ಫೂರ್ತಿ ಶಾಲೆ, ರವೀಂದ್ರ ಪ್ರೌಢ ಶಾಲೆ, ಸಿದ್ಧಾರೂಢ ಪಬ್ಲಿಕ್ ಶಾಲೆ, ಶರಣಬಸವೇಶ್ವರ ಪ್ರೌಢ ಶಾಲೆ, ಕರ್ನಾಟಕ ಪದವಿ ಪೂರ್ವ ಕಾಲೇಜು, ದತ್ತಗಿರಿ ಮಹಾರಾಜ ಪ್ರೌಢ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಒಂದು ಕಿ.ಮಿ.ಉದ್ದದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT