ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಅವಕಾಶ ಹಲವು

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಪ್ರವೇಶ
Last Updated 25 ಮೇ 2022, 14:33 IST
ಅಕ್ಷರ ಗಾತ್ರ

ಬೀದರ್: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಭವಿಷ್ಯ ರೂಪಿಸಿಕೊಳ್ಳಲು ಹಲವು ಕೋರ್ಸ್‌ಗಳು ಜಿಲ್ಲೆಯಲ್ಲೇ ಲಭ್ಯ ಇವೆ. ಸರ್ಕಾರಿ ಕಾಲೇಜುಗಳಲ್ಲೇ ಸಕಲ ಸೌಲಭ್ಯವಿರುವುದರಿಂದ ವಿದ್ಯಾರ್ಥಿಗಳು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಯಾವ ಕೋರ್ಸ್‌ಗೆ ಪ್ರವೇಶ ಪಡೆಯಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಆಯ್ಕೆ ಮಾಡಬಹುದಾದ ಕೆಲವು ಕೋರ್ಸ್‌ಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

ಆಡಳಿತ ಸೇವೆ ಸೇರುವ ಗುರಿ ಇಟ್ಟುಕೊಂಡವರು ಪದವಿ ಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು. ಇದರ ಜತೆಗೆ ತಾಂತ್ರಿಕ ಡಿಪ್ಲೊಮಾ, ಕೃಷಿ, ತೋಟಗಾರಿಕೆ ಡಿಪ್ಲೊಮಾ, ಸರ್ಟಿಫಿಕೇಟ್‌ ಹಾಗೂ ಐಟಿಐಗೆ ಪ್ರವೇಶ ಪಡೆಯಬಹುದಾಗಿದೆ.

ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಸೂಕ್ತವೆನಿಸಿದ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದವರು ಎರಡು ವರ್ಷದ ಕೋರ್ಸ್‌ ಮುಗಿಸಿದ ನಂತರ ವೈದ್ಯಕೀಯ, ಎಂಜಿನಿಯರಿಂಗ್, ಪದವಿಗೆ ಅರ್ಹರಾಗುತ್ತಾರೆ.

ಅರ್ಥಶಾಸ್ತ್ರ ಹಾಗೂ ಲೆಕ್ಕಪತ್ರ ವಿಷಯದಲ್ಲಿ ಆಸಕ್ತಿ ಇರುವವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡುತ್ತದೆ. ಕಲಾ ವಿಭಾಗಕ್ಕೆ ಪ್ರವೇಶ ಪಡೆದವರು ಮುಂದೆ ಪತ್ರಿಕೋದ್ಯಮ, ಡಿಸೈನಿಂಗ್, ಸೋಷಿಯಲ್ ವರ್ಕ್ ಮಾಡಬಹುದು. ನಂತರ ಬಿಇಡಿ ಕೋರ್ಸ್‌ ಮಾಡಿ ಪ್ರೌಢ ಶಾಲೆ ಶಿಕ್ಷಕ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಬಹುದು.


ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಲೇಜುಗಳಿವೆ:

ಬೀದರ್‌ ನಗರದ ಚಿತಾಖಾನಾ ರಟಕಲ್‌ಪುರ, ಸಿದ್ಧಿತಾಲೀಂ, ಮನ್ನಳ್ಳಿ, ಕಮಠಾಣ, ಮಂದಕನಳ್ಳಿ, ಹುಮನಾಬಾದ್, ಹಳ್ಳಿಖೇಡ(ಬಿ), ತಾಳಮಡಗಿ, ಚಿಟಗುಪ್ಪ, ನಿರ್ಣಾ, ಬೇಮಳಖೇಡ, ಭಾಲ್ಕಿ, ಹಲಬರ್ಗಾ, ಮೆಹಕರ್, ಹಾಲಹಳ್ಳಿ(ಕೆ), ಬಸವಕಲ್ಯಾಣ, ಮುಡಬಿ, ಮಂಠಾಳ ಔರಾದ್‌ನಲ್ಲಿ ಸರ್ಕಾರಿ ಪಿಯು ಕಾಲೇಜುಗಳು ಇವೆ.

ಎಲ್ಲ ತಾಲ್ಲೂಕು ಕೇಂದ್ರ, ಗ್ರಾಮಾಂತರ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 24 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಇವೆ. ಕಾಲೇಜಿನಲ್ಲಿ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದೆ.

ಬೀದರ್‌ ನಗರದ ಓಲ್ಡ್‌ಸಿಟಿಯಲ್ಲಿ ಎರಡು ಹಾಗೂ ಮನ್ನಳ್ಳಿಯಲ್ಲಿ ಒಂದು ಸರ್ಕಾರಿ ಕಾಲೇಜು ಇದೆ. ಓಲ್ಡ್‌ಸಿಟಿಯಲ್ಲಿ ಬಾಲಕಿಯರ ಕಾಲೇಜು ಇದ್ದು, ಅತಿ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶ ಪಡೆಯಲು ಜೂನ್‌ 15 ಕೊನೆಯ ದಿನವಾಗಿದೆ.


ವಿದ್ಯಾರ್ಥಿನಿಯರಿಗೆ ವಿಶೇಷ ವಿನಾಯಿತಿ:

ಸರ್ಕಾರಿ ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಬಾಲಕರಿಗೆ ₹ 1,636, ಒಬಿಸಿ ವಿದ್ಯಾರ್ಥಿಗೆ ₹ 966, ವಿಜ್ಞಾನ ವಿಭಾಗದಲ್ಲಿ ಸಾಮಾನ್ಯ ವಿದ್ಯಾರ್ಥಿಗೆ ₹ 2,122, ಹಿಂದುಳಿದ ವರ್ಗಗಳ ವಿದ್ಯಾರ್ಥಿಗೆ ₹ 1,116, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗೆ ₹ 325 ಶುಲ್ಕ ಹಾಗೂ ಬಾಲಕಿಯರಿಗೆ ಕೇವಲ ₹ 275 ಶುಲ್ಕ ಇದೆ ಎಂದು ಓಲ್ಡ್‌ಸಿಟಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಲದ್ದೆ ತಿಳಿಸುತ್ತಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಪಾಲಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಸೇರಿಸುವ ಬದಲು ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದು ಒಳ್ಳೆಯದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಜನೇಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT