ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳುವ ವರ್ಗದಿಂದ ಸಂವಿಧಾನಕ್ಕೆ ಗಂಡಾಂತರ: ಅರವಿಂದ ಅರಳಿ ಅಭಿಮತ

ಸಂವಿಧಾನ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅರವಿಂದ ಅರಳಿ ಅಭಿಮತ
Last Updated 27 ನವೆಂಬರ್ 2020, 16:02 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಎಲ್ಲ ಜನ ಸಮುದಾಯದವರಿಗೆ ಕಾನೂನು ಬದ್ಧವಾಗಿ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟಿರುವ ಸಂವಿಧಾನಕ್ಕೆ ಇಂದು ಆಳುವ ವರ್ಗದಿಂದಲೇ ಗಂಡಾಂತರ ಕಾದಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.

ನಗರದ ಡಾ.ಅಂಬೇಡ್ಕರ್ ವೃತ್ತ ಸಮೀಪ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಬರೆದ ಸಂವಿಧಾನಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದರು.

ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸಿದ್ಧಾರ್ಥ ಕಾಂಚೆ ಪ್ರಧಾನ ಭಾಷಣ ಮಾಡಿ, ‘ಕೆಲ ದಲಿತರು ಚುನಾವಣೆ ಬಂದಾಗ ಮದ್ಯದ ಆಸೆಗೆ ಬಿದ್ದು ಮೌಲ್ಯಯುತ ಮತ ಮಾರಿಕೊಂಡು ಅವಿವೇಕಿಗಳನ್ನು ಅನುಸರಿಸುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಕೀಲ ಡಾ.ಗೌತಮ ಬನ್ಸೂಡೆ ಮಾತನಾಡಿ, ‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲ ವರ್ಗದವರಿಗೂ
ಅನುಕೂಲವಾಗುವಂಥ ಸಂವಿಧಾನ ರಚಿಸಿದ್ದಾರೆ. ಆದರೆ, ಇಂದು ಸಂವಿಧಾನವನ್ನು ಬದಲಾಯಿಸುವ ಹುನ್ನಾರ ಆರಂಭವಾಗಿದೆ’ ಎಂದರು.

ಮನೋಹರೆ ಅಮರಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರರಾವ್ ದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸೂರ್ಯ ಹುಣಸೆ ಮಾತನಾಡಿದರು.

ಭಂತೆ ಧಮ್ಮಾನಂದ ಥೆರೊ ಸಾನ್ನಿಧ್ಯ ವಹಿಸಿದ್ದರು. ದಲಿತ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ದೇವೇಂದ್ರ ಸೋನಿ, ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ರಕ್ಷಣಾ ವೇದಿಕೆಯ ಜಿಲ್ಲಾ ಹಾಗೂ ತಾಲ್ಲೂಕು ಘಕಟಕದ ಪದಾಧಿಕಾರಿಗಳು ಇದ್ದರು.

ಮನೋಹರೆ ಹಾಗೂ ತಂಡದವರು ಭೀಮಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾದಾಸ ಗಾಯಕವಾಡ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT