ಬೀದರ್: ವಿಘ್ನೇಶ್ವರ ತನ್ನ ಭಕ್ತರ ಮನೆ ಸೇರುವ ಮೊದಲೇ ತರಕಾರಿ ಬೆಲೆ ನಿಯಂತ್ರಿಸಿದ್ದಾನೆ. ಸೊಪ್ಪು ಗಣಪತಿಗೆ ಅತ್ಯಂತ ಪ್ರಿಯವಾದ ಖಾದ್ಯ. ಒಂದೂವರೆ ವರ್ಷದಲ್ಲಿ ಕೋವಿಡ್‌ನಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳದಿರಲಿ ಎಂದು ಏಕದಂತ ಭಾವಿಸಿದಂತೆ ಮಾರುಕಟ್ಟೆಯಲ್ಲಿ ಸೊಪ್ಪಿನ ಬೆಲೆ ಕುಸಿದಿದೆ.
ಹಬ್ಬಕ್ಕೆ ಹಸಿ ಮೆಣಸಿನಕಾಯಿ ಖಾಟು ಕಡಿಮೆಯಾಗಿದೆ. ಬೆಳ್ಳುಳ್ಳಿ ಹಾಗೂ ಕೊತಂಬರಿ ಅಡುಗೆ ಸ್ವಾದ ಹೆಚ್ಚಿಸಿದೆ. ತರಕಾರಿ ರಾಜ ಬದನೆಕಾಯಿ ಹಾಗೂ ಹಬ್ಬಕ್ಕೆ ಮತ್ತಷ್ಟು ಕೆಂಪಗಾಗಿರುವ ಗಜ್ಜರಿ ಬೆಲೆ ನಿಯಂತ್ರಿಸಿಕೊಂಡು ಮೋದಕ ಪ್ರಿಯನಿಗೆ ನೆರವಾಗಿವೆ.
ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ ಬೆಲೆ ₹ 3 ಸಾವಿರ, ಬೀನ್ಸ್ ₹ 2 ಸಾವಿರ, ಮೆಂತೆ ಸೊಪ್ಪು, ಪಾಲಕ್ ₹ 1,500, ಮೆಣಸಿನಕಾಯಿ, ಬೀಟ್‌ರೂಟ್, ಕೊತಂಬರಿ ₹ 1 ಸಾವಿರ, ಎಲೆಕೋಸು ₹ 2 ಸಾವಿರ, ಬದನೆಕಾಯಿ, ಗಜ್ಜರಿ ಬೆಲೆ ₹ 500 ಕಡಿಮೆಯಾಗಿದೆ.
ಹಿರೇಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಈರುಳ್ಳಿ, ಟೊಮೆಟೊ, ಹೂಕೋಸು, ಕರಿಬೇವು ಬೆಲೆ ಸ್ಥಿರವಾಗಿದೆ.
ತರಕಾರಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ, ತೊಂಡೆಕಾಯಿ, ಸಬ್ಬಸಗಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಳವಾಗಿದೆ.
‘ಈ ಬಾರಿ ತರಕಾರಿ ಬೆಲೆಯಲ್ಲಿ ಹೆಚ್ಚಳವೇನೂ ಆಗಿಲ್ಲ. ಕೋವಿಡ್ ಕಾರಣ ಹಬ್ಬ ಸಂಭ್ರಮದಿಂದ ಮಾಡಲು ಸಾಧ್ಯವಾಗದಿರಬಹುದು. ಆದರೆ, ನೆಮ್ಮದಿಯಿಂದ ಗಣೇಶನ ಪೂಜೆ ಮಾಡಲು ಸಾಧ್ಯವಾಗಿದೆ’ ಎಂದು ಗೃಹಿಣಿ ಲಕ್ಷ್ಮಿ ಹೇಳಿದರು.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಆಲೂಗಡ್ಡೆ, ಬೀನ್ಸ್, ಚವಳೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಬೀಟ್‌ರೂಟ್, ಬೆಳಗಾವಿಯಿಂದ ಗಜ್ಜರಿ, ಹಸಿ ಮೆಣಸಿನಕಾಯಿ, ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಬದನೆಕಾಯಿ, ಹೂಕೋಸು, ಸಬ್ಬಸಗಿ, ಮೆಂತೆಸೊಪ್ಪು, ಪಾಲಕ್, ಕೋತಂಬರಿ ಹಾಗೂ ಕರಿಬೇವು ನಗರದ ಮಾರುಕಟ್ಟೆಗೆ ಆವಕವಾಗಿದೆ.
‘ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೆಲ ಕಡೆ ತರಕಾರಿ ನೀರು ಪಾಲಾಗಿದೆ. ರೈತರು ಕೈಗೆ ಬಂದಷ್ಟು ಹಣ ಬರಲಿ ಎಂದು ತರಕಾರಿ ತಂದು ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಈ ವಾರ ತರಕಾರಿ ಬೆಲೆ ಸ್ವಲ್ಪ ಕಡಿಮೆಯಾಗಿದೆ’ ಎಂದು ಸಗಟು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.
......................................................................
ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 35-40, 30-40
ಮೆಣಸಿನಕಾಯಿ 40-50, 35-40
ಆಲೂಗಡ್ಡೆ 35-40, 40-45
ಎಲೆಕೋಸು 50-60, 30-40
ಬೆಳ್ಳುಳ್ಳಿ 100-110, 70-80
ಗಜ್ಜರಿ 40-45, 35-40
ಬೀನ್ಸ್ 100-110, 80-90
ಬದನೆಕಾಯಿ 40-45, 35-40
ಮೆಂತೆ ಸೊಪ್ಪು 60-70, 50-55
ಹೂಕೋಸು 20-30, 25-30
ಸಬ್ಬಸಗಿ 40-45, 40-50
ಬೀಟ್‌ರೂಟ್ 50-55, 40-45
ತೊಂಡೆಕಾಯಿ 25-30, 30-35
ಕರಿಬೇವು 20-30, 25-30
ಕೊತಂಬರಿ 30-40, 25-30
ಟೊಮೆಟೊ 35-40, 30-40
ಪಾಲಕ್ 50-60, 40-45
ಬೆಂಡೆಕಾಯಿ 40-45, 40-45
ಹಿರೇಕಾಯಿ 40-50, 40-50
ನುಗ್ಗೆಕಾಯಿ 80-90, 85-90
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.